ADVERTISEMENT

ಕಲಬುರ್ಗಿ: ಪಾಲಿಕೆಯ 87 ಸಿಬ್ಬಂದಿ ಬೇರೆಡೆ ನಿಯೋಜನೆ

ದಿಟ್ಟ ಕ್ರಮ ಕೈಗೊಂಡ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 18:14 IST
Last Updated 7 ಜನವರಿ 2021, 18:14 IST
ಸ್ನೇಹಲ್ ಲೋಖಂಡೆ
ಸ್ನೇಹಲ್ ಲೋಖಂಡೆ   

ಕಲಬುರ್ಗಿ: ಹಲವು ವರ್ಷಗಳಿಂದ ಒಂದೇ ವಿಭಾಗದಲ್ಲಿ ಬೀಡುಬಿಟ್ಟಿದ್ದ 87 ಮಂದಿ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರನ್ನು ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಬೇರೆ ವಿಭಾಗಗಳಿಗೆ ನಿಯೋಜಿಸಿದ್ದಾರೆ. ಪಾಲಿಕೆಯ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ಆಂತರಿಕ ನಿಯೋಜನೆ ಆಗಿರಲಿಲ್ಲ ಎನ್ನಲಾಗುತ್ತಿದೆ.

ಖಾತಾ ಬದಲಾವಣೆ, ಜನನ, ಮರಣ ಪ್ರಮಾಣಪತ್ರ ವಿತರಣೆ, ತೆರಿಗೆ ಸಂಗ್ರಹ, ಬೀದಿ ವ್ಯಾಪಾರಿಗಳ ಅನುಮತಿ ನವೀಕರಣ, ಜಾಹೀರಾತು ಸಂಗ್ರಹ, ಪಾಲಿಕೆಗೆ ಸೇರಿದ ಆಸ್ತಿಗಳ ನಿರ್ವಹಣೆ, ಜಾಹೀರಾತು ಮೊತ್ತ ಸಂಗ್ರಹ, ವಾರ್ಡ್‌ಗಳಲ್ಲಿ ಸ್ವಚ್ಛತೆ ನಿರ್ವಹಣೆ, ಬೀದಿ ಬದಿ ವಿದ್ಯುತ್ ದೀಪಗಳಿಗೆ ಸಂಬಂಧಿಸಿದ ಕಡತಗಳನ್ನು ಸಕಾಲಕ್ಕೆ ವಿಲೇವಾರಿ ಮಾಡುತ್ತಿರಲಿಲ್ಲ ಎಂಬ ಆರೋಪಗಳಿದ್ದವು.

ಮಾಜಿ ಮೇಯರ್‌ ಸಂಬಂಧಿಯೊಬ್ಬರಿಗೆ ಸೇರಿದ ಆಸ್ತಿಯ ಖಾತಾ ಮಾಡಿಕೊಡಲು ಸಿಬ್ಬಂದಿ ನಾಲ್ಕು ತಿಂಗಳಿಂದ ಸತಾಯಿಸುತ್ತಿದ್ದರು ಎಂಬ ಆರೋಪವಿತ್ತು. ಇವುಗಳನ್ನು ಪರಿಶೀಲಿಸಿದ ಆಯುಕ್ತ ಸ್ನೇಹಲ್ ಲೋಖಂಡೆ ಅವರು ವಿವಿಧ ಶಾಖೆಗಳಿಗೆ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಈ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಿದ ಪಾಲಿಕೆಯ ಮಾಜಿ ಮೇಯರ್ ಶರಣಕುಮಾರ ಮೋದಿ, ‘ಹಿಂದೆಂದೂ ಇಷ್ಟೊಂದು ಪ್ರಮಾಣದಲ್ಲಿ ವರ್ಗಾವಣೆ ಆಗಿರಲಿಲ್ಲ. ಬಹಳಷ್ಟು ಕೆಲಸ ವಿಳಂಬವಾಗಿದ್ದವು. ಕೆಲ ಸಿಬ್ಬಂದಿ ನನ್ನ ಮಾತನ್ನೂ ಕೇಳುತ್ತಿರಲಿಲ್ಲ. ಅವರನ್ನು ಬೇರೆಡೆ ನಿಯೋಜಿಸಿದ್ದು ಸ್ವಾಗತಾರ್ಹ. ಅದರ ಜೊತೆಗೆ, ಬೇರೆ ಇಲಾಖೆಗಳಿಂದ ನಿಯೋಜನೆ ಮೇರೆಗೆ ಬಂದವರನ್ನು ವಾಪಸ್ ಮಾತೃ ಇಲಾಖೆಗೆ ಕಳಿಸಬೇಕು’ ಎಂದರು.

ಪಾಲಿಕೆ ಮಾಜಿ ಸದಸ್ಯ, ಬಿಜೆಪಿಯ ಶಿವಾನಂದ ಪಾಟೀಲ ಅಷ್ಠಗಿ ಮಾತನಾಡಿ, ‘ಕೆಲ ಸಿಬ್ಬಂದಿ ಹತ್ತಾರು ವರ್ಷಗಳಿಂದ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಿದ್ದು ಸ್ವಾಗತಾರ್ಹ. ಜೊತೆಗೆ, ಅವರನ್ನು ಬೇರೆ ಮಹಾನಗರ ಪಾಲಿಕೆಗಳಿಗೂ ವರ್ಗಾಯಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.