ADVERTISEMENT

ನಾಳೆ ಕಲಬುರ್ಗಿ ಬಂದ್‌ಗೆ ವಿವಿಧ ಸಂಘಟನೆಗಳ ಕರೆ

ಪೌರತ್ವ (ತಿದ್ದುಪಡಿ) ಕಾಯ್ದೆಗೆ ವಿರೋಧ; ಬೆಳಿಗ್ಗೆ ಜಗತ್‌ ವೃತ್ತದಿಂದ ಮಾರ್ಕೆಟ್‌ ಚೌಕವರೆಗೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 10:27 IST
Last Updated 17 ಡಿಸೆಂಬರ್ 2019, 10:27 IST

ಕಲಬುರ್ಗಿ: ದೇಶದಾದ್ಯಂತ ಕಿಚ್ಚು ಹಚ್ಚಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಕಾವು ಕಲಬುರ್ಗಿಗೂ ತಾಕಿದ್ದು, ವಿವಿಧ ಮುಸ್ಲಿಂ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ರಚಿಸಿರುವ ಪೀಪಲ್ಸ್ ಫೋರಂ ವತಿಯಿಂದ ಇದೇ 19ರಂದು ಕಲಬುರ್ಗಿ ಬಂದ್‌ಗೆ ಕರೆ ನೀಡಲಾಗಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಫೋರಂ ಸಂಚಾಲನಾ ಮಂಡಳಿಯ ಮಾರುತಿ ಮಾನ್ಪಡೆ, ‘ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಮೂಲತತ್ವಕ್ಕೆ ವಿರುದ್ಧವಾಗಿದೆ. ಭಾರತದ ಸಂವಿಧಾನವು ಜಾತ್ಯತೀತ ನಿಲುಮೆಯನ್ನು ಹೊಂದಿದ ಸಂವಿಧಾನವಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ರಾಜಕೀಯ ದುರುದ್ದೇಶಗಳಿಗಾಗಿ ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡಿ ದೇಶದ ಹಿತ ಬಲಿ ಕೊಟ್ಟು ಈ ಕಾಯ್ದೆ ಅಂಗೀಕರಿಸಿದೆ. ಇದನ್ನು ಖಂಡಿಸಿ ಅಂದು ಬಂದ್‌ಗೆ ಕರೆ ನೀಡಲಾಗಿದೆ. ಅಂದು ಬೆಳಿಗ್ಗೆ 6.30ಕ್ಕೆ ಕೇಂದ್ರ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಗುವುದು. ಬೆಳಿಗ್ಗೆ 11ಕ್ಕೆ ನಗರದ ಜಗತ್‌ ವೃತ್ತದಿಂದ ಮಾರ್ಕೆಟ್‌ ಚೌಕ್‌ವರೆಗೆ ಬೈಕ್‌ ರ್‍ಯಾಲಿ ನಡೆಸಲಾಗುವುದು.

ಈ ಕಾಯ್ದೆಯು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಿ ಪ್ರತ್ಯೇಕಿಸುವ ದುಷ್ಟ ಹುನ್ನಾರ ಹೊಂದಿದೆ. ಹಾಗಾಗಿ, ಇದು ಜಾರಿಗೆ ಬಾರದಂತೆ ತಡೆಯಲು ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ಎಲ್ಲರೂ ಹೋರಾಟಕ್ಕಿಳಿಯಬೇಕು ಹಾಗೂ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಬೇಕು. ಅಂದು ಸ್ವಯಂ ಪ್ರೇರಿತವಾಗಿ ಅಂಗಡಿಗಳು, ವಾಣಿಜ್ಯ ಮಳಿಗೆಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಲು ವ್ಯಾಪಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದರು.

ADVERTISEMENT

ಹಿರಿಯ ದಲಿತ ಮುಖಂಡ ಡಾ.ವಿಠ್ಠಲ ದೊಡ್ಡಮನಿ, ‘ಮೊದಲಿನಿಂದಲೂ ಬಿಜೆಪಿಯ ರಾಜಕೀಯ ಹಿಂದೂ–ಮುಸ್ಲಿಮರನ್ನು ಒಡೆದು ಆಳುವುದೇ ಆಗಿದ್ದು, ಜಾತ್ಯತೀತ ಭಾರತದ ಬಗ್ಗೆ ಅವರಿಗೆ ಸಹನೆ ಇಲ್ಲ. ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಶ್ಯಾಮಪ್ರಸಾದ್‌ ಮುಖರ್ಜಿ, ಬ್ರಿಟಿಷರ ಎದುರು ಮಂಡಿಯೂರಿದ ವಿ.ಡಿ.ಸಾವರ್ಕರ್, ಗಾಂಧಿಯನ್ನು ಕೊಂದ ನಾಥೂರಾಮ ಗೋಡ್ಸೆಯ ಚಿಂತನೆಯೂ ಹಿಂದುಗಳಲ್ಲದವರನ್ನು ದ್ವೇಷಿಸುವುದೇ ಆಗಿತ್ತು. ಪೌರತ್ವ (ತಿದ್ದುಪಡಿ) ಕಾಯ್ದೆಯೂ ಒಡೆದು ಆಳುವ ಭಾಗವೇ ಆಗಿದೆ. ಇದನ್ನು ದೊಡ್ಡ ಮಟ್ಟದಲ್ಲಿ ನಾವೆಲ್ಲ ವಿರೋಧಿಸಬೇಕಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಡೆಯುವ ಈ ಬಂದ್‌ಗೆ ಪೊಲೀಸರು ಅಡ್ಡಿ ಮಾಡಬಾರದು’ ಎಂದು ಮನವಿ ಮಾಡಿದರು.

ಮುಖಂಡ ಬಾಬಾಖಾನ್‌ ಮಾತನಾಡಿ, ‘‍ಪ್ರತಿಭಟನೆಯಲ್ಲಿ 20ಕ್ಕೂ ಅಧಿಕ ಸಂಘಟನೆಗಳು ಭಾಗವಹಿಸುತ್ತಿವೆ. ಜಾತ್ಯತೀತ, ಸಮಾನತೆಯ ಪರಿಕಲ್ಪನೆಗೆ ವಿರುದ್ಧವಾದ ಈ ಕಾಯ್ದೆಯನ್ನು ಎಲ್ಲರೂ ವಿರೋಧಿಸಬೇಕಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಹಾಜ್‌ ಬಾಬಾ, ಖಮರುಜಮಾ ಇನಾಂದಾರ್, ಇಸ್ಮಾಯಿಲ್‌ ಸಾಬ್ ಕಾರಿಗರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.