ADVERTISEMENT

ಕಲಬುರಗಿ | ನೀರಾವರಿ ಯೋಜನೆಗೆ ಜಮೀನು: ಮಧ್ಯಸ್ಥಿಕೆಯಲ್ಲಿ 96 ಪ್ರಕರಣಗಳ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 13:31 IST
Last Updated 26 ಜೂನ್ 2025, 13:31 IST
ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಮಧ್ಯಸ್ಥಿಕೆ ವೇಳೆ ವಕೀಲರು, ಅಧಿಕಾರಿಗಳು ಪಾಲ್ಗೊಂಡಿದ್ದರು
ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಮಧ್ಯಸ್ಥಿಕೆ ವೇಳೆ ವಕೀಲರು, ಅಧಿಕಾರಿಗಳು ಪಾಲ್ಗೊಂಡಿದ್ದರು   

ಕಲಬುರಗಿ: ಬೆಣ್ಣೆತೊರಾ, ಅಮರ್ಜಾ ನೀರಾವರಿ ಯೋಜನೆಗಳಲ್ಲಿ ಜಮೀನು ಕಳೆದುಕೊಂಡು ಪರಿಹಾರಕ್ಕಾಗಿ ಕಾಯುತ್ತಿದ್ದ ರೈತರ 126 ಪ್ರಕರಣಗಳ ಪೈಕಿ 96 ಪ್ರಕರಣಗಳನ್ನು ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ಇತ್ತೀಚೆಗೆ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ ನೇತೃತ್ವದಲ್ಲಿ ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಲಾಯಿತು.

ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ನೀಡುವಂತೆ ಭೂಮಿ ಕಳೆದುಕೊಂಡಿದ್ದ ರೈತರು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಈ ಪ್ರಕರಣಗಳನ್ನು ಮರುಪರಿಶೀಲಿಸುವಂತೆ ಹೈಕೋರ್ಟ್‌ಗೆ ಕಳುಹಿಸಿತ್ತು.

ಹೈಕೋರ್ಟ್‌ನಲ್ಲಿ ಮೊಕದ್ದಮೆ ಮುಂದುವರಿಸುವ ಬದಲು ರಾಜ್ಯ ಸರ್ಕಾರ ಹಾಗೂ ರೈತರ ಹಿತದೃಷ್ಟಿಯಿಂದ ಪ್ರಕರಣದ ಅರ್ಹತೆಯ ಆಧಾರದ ಮೇಲೆ ತೀರ್ಪು ನೀಡಲು ಈ ಪ್ರಕರಣಗಳನ್ನು ಹೈಕೋರ್ಟ್‌ ಮಧ್ಯಸ್ಥಿಕೆ ಕೇಂದ್ರಕ್ಕೆ ರವಾನಿಸಿತ್ತು. ಅದರಂತೆ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ ಮಧ್ಯಸ್ಥಿಕೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

ADVERTISEMENT

‘ರೈತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಂಡು ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ರಾಜ್ಯ ಸರ್ಕಾರ ಕೂಡ ಹೈಕೋರ್ಟ್‌ಗೆ ಮನವಿ ಮಾಡಿತ್ತು’ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಮಲ್ಹಾರಾವ್‌ ತಿಳಿಸಿದ್ದಾರೆ.

ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಮಲ್ಹಾರಾವ್ ಕೆ., ಹೈಕೋರ್ಟ್‌ ಸರ್ಕಾರಿ ವಕೀಲೆ ಮಾಯಾ ಟಿ.ರಾಜಣ್ಣ, ಕರ್ನಾಟಕ ನೀರಾವರಿ ನಿಗಮದ (ಕೆಎನ್ಎನ್ಎಲ್) ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಭಾವಿ, ಕೆಎನ್ಎನ್ಎಲ್‌ನ ಗಿರೀಶ ಎಂ.ಎಸ್‌., ಔದ್ರಾಮ್, ಕೆಎನ್‌ಎನ್‌ಎಲ್‌ ಪರ ವಕೀಲರಾದ ಸುದರ್ಶನ, ಸಂಜೀವಕುಮಾರ, ರೈತರ ಪರ ವಕೀಲರಾದ ಹರ್ಷವರ್ಧನ ಮಾಲಿಪಾಟೀಲ, ಹರ್ಷಾ ಜಾಧವ, ವಿಶಾಲ್ ಅಗಸ್ತಿ, ಶಿವಶಂಕರ ಮಣ್ಣೂರ, ನಾಗೇಶ ಶೆಟ್ಟಿ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.