ಕಾಳಗಿ: ‘ಪಟ್ಟಣದ ಹೊರವಲಯದಲ್ಲಿ ಗಮನ ಬೇರೆಡೆ ಸೆಳೆದು ದರೋಡೆ ಮತ್ತು ಕೊಡದೂರ ಗ್ರಾಮದ ಯುವಕನನ್ನು ಅಪಹರಿಸಿ ಚಿನ್ನ, ನಗದು ದೋಚಿದ ಪ್ರಕರಣ ಭೇದಿಸುವಲ್ಲಿ ಸ್ಥಳೀಯ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹೇಳಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ನಡೆದ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿದರು.
‘ಮೊದಲ ಪ್ರಕರಣದಲ್ಲಿ ಆ. 4ರಂದು ಕಳ್ಳರು, ಕಾಳಗಿ-ಕೋಡ್ಲಿ ಮುಖ್ಯರಸ್ತೆ ಮೇಲೆ ಸಚಿನ್ ರಾಠೋಡ ಎಂಬ ಬೈಕ್ ಸವಾರನನ್ನು ತಡೆದು ಪೊಲೀಸರಂತೆ ನಟಿಸಿ, ಗಮನ ಬೇರೆಡೆ ಸೆಳೆದು ಆತನ ಮೈಮೇಲಿದ್ದ 21 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇನ್ನೊಂದು ಪ್ರಕರಣದಲ್ಲಿ ಆ. 19ರಂದು ಮಧ್ಯಾಹ್ನ 1 ಗಂಟೆ ವೇಳೆ ಕೊಡದೂರ ಗ್ರಾಮದ ಯುವಕನಿಗೆ ಮಹಿಳೆಯೊಂದಿಗೆ ಫೋನಿನಲ್ಲಿ ಸಂಪರ್ಕವಿದೆ ಎಂದು ಹೆದರಿಸಿ, ಅಪಹರಿಸಿ, ಚಾಕುವಿನಿಂದ ಕೊಲೆ ಮಾಡುವುದಾಗಿ ಹೆದರಿಸಿ, 25 ಗ್ರಾಂ ಚಿನ್ನಾಭರಣ ಕಸಿದುಕೊಂಡು, ಹಣಕ್ಕೆ ಬೇಡಿಕೆಯಿಟ್ಟು, ಹೊಡೆಬಡಿ ಮಾಡಿರುತ್ತಾರೆ. ಈ ಸಂಬಂಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದವು’ ಎಂದು ಹೇಳಿದರು.
ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ, ಶಹಾಬಾದ್ ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಸಿಪಿಐ ಜಗದೇವಪ್ಪ ಪಾಳಾ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ಪಿಎಸ್ಐ ತಿಮ್ಮಯ್ಯ ಬಿ.ಕೆ. ಅವರನ್ನೊಳಗೊಂಡ ತನಿಖಾ ತಂಡ ರಚಿಸಲಾಗಿತ್ತು. ಎಎಸ್ಐ ಎಫ್.ಎ. ಖಾನ್, ಎಚ್‌ಸಿ ಮಂಜುನಾಥ, ಚಂದ್ರಕಾಂತ, ಕಾನ್‌ಸ್ಟೆಬಲ್ ಸಂಗಮೇಶ, ಮೌನೇಶ, ಅಂಬರೀಶ, ಮಾರುತಿ, ಮಂಜುನಾಥ, ಶಿವರಾಜ, ಬಲರಾಮ ಅವರನ್ನೊಳಗೊಂಡ ತಂಡವು, ಆರೋಪಿ ಮತ್ತು ಮುದ್ದೆ ಮಾಲು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ’ ಎಂದು ಹೇಳಿದರು.
‘ಆ.4ರ ಪ್ರಕರಣದ ಆರೋಪಿ ಬೀದರ್‌ನ ಮಹ್ಮದ್ ಜಾಫರಿಯನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಗುಲಾಂ ಅಬ್ಬಾಸ್‌ನನ್ನು ಪತ್ತೆಹಚ್ಚಬೇಕಿದೆ. ಆರೋಪಿಯಿಂದ 5 ಗ್ರಾಂ ಚಿನ್ನದುಂಗುರ ಹಾಗೂ 20 ಚಿನ್ನದ ಸರ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.
ಆ. 19ರ ಕೊಡದೂರ ಪ್ರಕರಣದಲ್ಲಿ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ 6 ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಹ್ಮದ್ ಶರ್ಫೊದ್ದೀನ್ ಮುಸ್ತಪ್ಪನೋರ, ಮಹ್ಮದ್ ಹ್ಯಾರೀಸ್ ರಶೀದ್, ನಿಜಾಮುದ್ದೀನ್ ಅಹ್ಮದ್‌ಸಾಬ ಪಟೇಲ್, ಸಯ್ಯದ್ ಇಬ್ರಾಹಿಂ ವಜೀರ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 25 ಗ್ರಾಂ ಚಿನ್ನಾಭರಣ, ಒಂದು ಸ್ಕಾರ್ಪಿಯೋ, ₹ 11 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು. ತಂಡದ ಅಧಿಕಾರಿಗಳು, ಪೊಲೀಸರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.