
ಕಲಬುರಗಿ: ‘ಕಷ್ಟಪಟ್ಟು ದಕ್ಕಿಸಿಕೊಂಡ 371 (ಜೆ) ಕಾಯ್ದೆಯನ್ನು ಕಸಿದುಕೊಳ್ಳಲು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿ ಎಂದು ಬೇಡಿಕೆ ಮಂಡಿಸಲಾಗುತ್ತಿದೆ. ಇದನ್ನು ಖಂಡಿಸುತ್ತೇವೆ’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ನಮಗೆ ಎಲ್ಲವೂ ಸಿಕ್ಕಿದೆ. ಮೈಸೂರು ಭಾಗದ ಮುಖ್ಯಮಂತ್ರಿಗಳು ನಮ್ಮ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಆದರೆ, ಮುಂಬೈ ಕರ್ನಾಟಕದ ರಾಜಕಾರಣಿಗಳು ನಮ್ಮ ಕಷ್ಟಗಳಿಗೆ ಸ್ಪಂದಿಸಿಲ್ಲ. ನಮಗೆ ದಕ್ಕಿದ ಅನೇಕ ಸೌಲಭ್ಯಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ನಮ್ಮ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ. ಈಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿದ್ದಾರೆ. ಇದು 371 (ಜೆ) ಕಿತ್ತುಕೊಳ್ಳುವ ಹುನ್ನಾರದ ಭಾಗವಾಗಿದೆ’ ಎಂದರು.
‘ಉತ್ತರ ಕರ್ನಾಟಕದ ರಾಜಕಾರಣಿಗಳಿಂದಾಗಿ ನಾವು ಐಐಟಿ, ಐಐಐಟಿಯಂಥ ಸಂಸ್ಥೆಗಳನ್ನು ಕಳೆದುಕೊಂಡಿದ್ದೇವೆ. ಆ ಭಾಗದವರ ಕುತಂತ್ರದಿಂದಲೇ ನಾವು ಎಷ್ಟು ಹೋರಾಟ ಮಾಡಿದರೂ ನಮಗೆ ಏಮ್ಸ್ ಸಿಗುತ್ತಿಲ್ಲ. ಇದನ್ನು ನಮ್ಮ ಭಾಗದ ರಾಜಕಾರಣಿಗಳು ಅರಿತುಕೊಳ್ಳಬೇಕು’ ಎಂದು ತಿಳಿಸಿದರು.
‘ಭಾಷವಾರು ಪ್ರಾಂತ್ಯ ರಚನೆಗೆ ನೇಮಿಸಲಾಗಿದ್ದ ಫಜಲ್ ಅಲಿ ಆಯೋಗ ಕಲಬುರಗಿಗೆ ಭೇಟಿ ನೀಡಿತ್ತು. ಹೈದರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡಿ ಎಂದು ಫಜಲ್ ಅಲಿ ಅವರು ತಿಳಿಸಿದ್ದರು. ನಮ್ಮವರು ಅದನ್ನು ನಿರಾಕರಿಸಿದ್ದರು. ಮೈಸೂರು ರಾಜ್ಯದಲ್ಲಿ ಸೇರಿಸಿ ಎಂದು ಕೇಳಿಕೊಂಡಿದ್ದರು. ನಾವು ಭುವನೇಶ್ವರಿಯ ಮಕ್ಕಳು. ನಮಗೆ ಯಾವ ಪ್ರತ್ಯೇಕ ರಾಜ್ಯವೂ ಬೇಡ’ ಎಂದು ಹೇಳಿದರು.
‘15 ಜಿಲ್ಲೆಗಳನ್ನು ಒಳಗೊಂಡು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಶಾಸಕ ರಾಜು ಕಾಗೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಭೂಪಟವನ್ನೂ ತಯಾರಿಸಲಾಗಿದೆ. ಅದರಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನೂ ಸೇರಿಸಿದ್ದಾರೆ. ಯಾರನ್ನು ಕೇಳಿ ಈ ಕೆಲಸ ಮಾಡಿದರು ಎಂಬುದು ತಿಳಿಯುತ್ತಿಲ್ಲ. ನಮ್ಮ ಜಿಲ್ಲೆಗಳನ್ನು ಭೂಪಟದಲ್ಲಿ ಸೇರಿಸಲು ಇವರಿಗೆ ಅಧಿಕಾರ ಕೊಟ್ಟಿದ್ದು ಯಾರು’ ಎಂದು ಪ್ರಶ್ನಿಸಿದರು.
‘ನಾವೂ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ಪ್ರತ್ಯೇಕ ರಾಜ್ಯದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದೇವೆ. ಬೇಕಾದರೆ ಕಾಗೆ ಅವರು ಪ್ರತ್ಯೇಕ ಕಿತ್ತೂರು ಕರ್ನಾಟಕ ರಾಜ್ಯ ಕೇಳಲಿ. ನಮ್ಮನ್ನು ಸೇರಿಸಿಕೊಂಡು ರಾಜ್ಯದ ಬೇಡಿಕೆ ಇಟ್ಟರೆ ಎಲ್ಲ ಜಿಲ್ಲೆ ಗಳಲ್ಲಿಯೂ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಚಿಂತಕ ಆರ್.ಕೆ.ಹುಡಗಿ ಮಾತನಾಡಿ, ‘ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಎದನ್ನು ಎಲ್ಲರೂ ಖಂಡಿಸಬೇಕಾದ ಅಗತ್ಯ ಇದೆ’ ಎಂದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಬಸವರಾಜ ದೇಶಮುಖ, ಮುಖಂಡರಾದ ಬಸವರಾಜ ಕುಮನೂರ, ಪ್ರೊ. ಬಸವರಾಜ ಗುಲಶೆಟ್ಟಿ, ಡಾ.ಶರಣಪ್ಪ ಸೈದಾಪುರ, ಚಂದ್ರಶೇಖರ ಪಾಟೀಲ ಹುಚಕನಳ್ಳಿ, ರೌಫ್ ಖಾದ್ರಿ, ಎಂ.ಬಿ.ನಿಂಗಪ್ಪ ಸೇರಿ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.