ADVERTISEMENT

ಕೆಕೆಆರ್‌ಡಿಬಿಯ ₹ 5 ಸಾವಿರ ಕೋಟಿ ಕ್ರಿಯಾಯೋಜನೆಗೆ ಅಂಕಿತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:04 IST
Last Updated 26 ಜುಲೈ 2025, 7:04 IST
ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಭೇಟಿ ಮಾಡಿ ಚರ್ಚಿಸಿದರು 
ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಭೇಟಿ ಮಾಡಿ ಚರ್ಚಿಸಿದರು    

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ 2025–26ನೇ ಸಾಲಿನ ₹ 5 ಸಾವಿರ ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಅನುಮೋದನೆ ನೀಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸ ಡಾ. ಅಜಯ್‌ ಸಿಂಗ್‌, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಳಿಯ ಕ್ರಿಯಾ ಯೋಜನೆಗೆ ಸಂಪೂರ್ಣ ಒಪ್ಪಿಗೆ ಸೂಚಿಸಿ ರಾಜಭವನಕ್ಕೆ ಕ್ರಿಯಾ ಯೋಜನೆಯ ಕಡತ ರವಾನಿಸಿದ್ದರು. ಇದೀಗ ರಾಜ್ಯಪಾಲರು ತ್ವರಿತವಾಗಿ ಅಂಕಿತ ಹಾಕಿದ್ದಾರೆ. 2023–24ರ ಸಾಲಿನ ಕ್ರಿಯಾ ಯೋಜನೆಗೆ ರಾಜ್ಯಪಾಲರು ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿದ್ದರು. ಈ ಸಾಲಿನಲ್ಲಿ ಮಂಡಳಿಯ ಸಭೆ ಆಗಸ್ಟ್‌ 29ರಂದು ನಡೆಸಲಾಗಿತ್ತು. ಆದಾಗ್ಯೂ ಮಾರ್ಚ್‌ 31ರೊಳಗಾಗಿ ಕೆಕೆಆರ್‌ಡಿಬಿಯಿಂದ ₹ 2009 ಕೋಟಿ ವೆಚ್ಚದಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಹಲವು ರಂಗಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡು ಅನುಷ್ಠಾನ ಗೊಳಿಸಲಾಗಿತ್ತು. 2024–25ನೇ ಸಾಲಿನಲ್ಲಿ ಜುಲೈ 1ರಂದೇ ಮಂಡಳಿಯ ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಿದಾಗ ಸದರಿ ಕ್ರಿಯಾ ಯೋಜನೆಗೆ ರಾಜ್ಯಪಾಲರು ಆಗಸ್ಟ್‌ ತಿಂಗಳಲ್ಲಿ ಅನುಮೋದನೆ ನೀಡಿದ್ದರು’ ಎಂದಿದ್ದಾರೆ.

ಈ ಬಾರಿ 2025–26ನೇ ಸಾಲಿನ ಮಂಡಳಿಯ ಸಭೆಯನ್ನು ಸಚಿವರು, ಸಂಸದರು, ಶಾಸಕರನ್ನು ಒಳಗೊಂಡಂತೆ ಮೇ 10ರಂದೇ ನಡೆಸಿ ಸಿದ್ಧಪಡಿಸಿದ್ದ ₹ 5 ಸಾವಿರ ಕೋಟಿ ಕ್ರಿಯಾ ಯೋಜನೆಗೆ ರಾಜ್ಯಪಾಲರು ಇದೀಗ ಅನುಮೋದನೆ ನೀಡಿದ್ದಾರೆ. ಕೆಕೆಆರ್‌ಡಿಬಿ ಕ್ರಿಯಾ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಬೇಗ ಅನುಮೋದನೆ ಸಿಕ್ಕಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಗತಿಗೆ ಹಿದೆಂದಿಗಿಂತಲೂ ಹೆಚ್ಚಿನ ವೇಗ ದೊರಕಲಿದೆ’ ಎಂದು ಅಜಯ್‌ ಸಿಂಗ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.