
ಕಮಲಾಪುರ: ಅತಿ ಹೆಚ್ಚು ಪೋಷಕಾಂಶ, ವಿಶಿಷ್ಟ, ಆಹ್ಲಾದಕರ ರುಚಿ ಹೊಂದಿರುವ ಹಾಗೂ ಭೌಗೋಳಿಕ ಸೂಚ್ಯಂಕ (ಜಿಐ) ಟ್ಯಾಗ್ ಪಡೆದಿರುವ ಕಮಲಾಪುರ ಕೆಂಬಾಳೆ ನಾಡಿಗೆ ಆಂಧ್ರ, ಕೇರಳದ ಕೆಂಬಾಳೆ ಲಗ್ಗೆ ಇಟ್ಟಿದೆ.
ದೇಶದಲ್ಲೇ ವಿಶಿಷ್ಟ ಕೆಂಪು ಬಾಳೆ ಬೆಳೆಯುವ ಪ್ರದೇಶ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕು ಆಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ ಎಂದು ವಿಧಿವಿಜ್ಞಾನ ಪರೀಕ್ಷೆಯಿಂದ ದೃಢಪಟ್ಟಿದೆ. ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಕ್ಯಾಲೊರಿ ಮೌಲ್ಯ ಹೊಂದಿದ್ದು, ಶಕ್ತಿ ನೀಡುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಬಿಪಿ ಮತ್ತು ಸಕ್ಕರೆ ಕಾಯಿಲೆಗಳಿಗೆ ರಾಮಬಾಣ ಎಂದೂ ಹೇಳಲಾಗುತ್ತದೆ. ಈ ವಿಶಿಷ್ಟತೆಯಿಂದಾಗಿ ಕಮಲಾಪುರ ಕೆಂಪು ಬಾಳೆಹಣ್ಣು 1999ರ ಜಿಐ ಕಾಯಿದೆಯ ಅಡಿಯಲ್ಲಿ ಸೆ. 4, 2009ರಂದು ಜಿಐ ಟ್ಯಾಗ್ ಪಡೆಯಿತು. ಹೀಗಾಗಿ ಇದು ಕಮಲಾಪುರ ಕೃಷಿ ಸಮುದಾಯದ ಆಸ್ತಿಯಾಗಿದೆ.
ಆಂಧ್ರದ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಸಿಗುವ ಇದೇ ತೆರನಾದ ಕೆಂಬಾಳೆಯನ್ನು ಕೊಂಡು ತಂದು ಕೆಲದಿನಗಳಿಂದ ಕಮಲಾಪುರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕಮಲಾಪುರ ಕೆಂಬಾಳೆಗೆ ಕುತ್ತು ಬಂದಿದೆ. ಅತಿ ಹೆಚ್ಚು ನಿರ್ವಹಣೆ ವೆಚ್ಚ, ಸುಮಾರು 18 ತಿಂಗಳು ಶ್ರಮ ಹಾಕಿ ಬೆಳೆಯುವ ರೈತರು ದೊಡ್ಡ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ. ಜೊತೆಗೆ ವಿಶಿಷ್ಟ ರುಚಿ, ಪೋಷಕಾಂಶಗಳ ಆಗರವಾಗಿರುವ ಕಮಲಾಪುರ ಕೆಂಬಾಳೆ ತಿನ್ನಬೇಕೆಂದು ಖರೀದಿಸುವ ಗ್ರಾಹಕರು ಸಹ ಮೋಸಹೋಗುತ್ತಿದ್ದಾರೆ’ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ನೆರೆಯ ಆಂಧ್ರಪ್ರದೇಶ ಬಿ.ಆರ್.ಅಂಬೇಡ್ಕರ್ ಕೋನಸಿಮಾ ಜಿಲ್ಲೆ ಕೊಟ್ಟಪೇಟ ಕೃಷಿ ಮಾರುಕಟ್ಟೆಯಲ್ಲಿ ರಾವುಲಪಾಲೆಂನಲ್ಲಿ ಬಾಳೆಹಣ್ಣಿನ ದೊಡ್ಡ ಮಾರುಕಟ್ಟೆ ಇದೆ. ಈ ಮಾರುಕಟ್ಟೆಗೆ ಕೇರಳ ಸೇರಿದಂತೆ ವಿವಿಧೆಡೆಯಿಂದ ಬಾಳೆ ಹಣ್ಣು ಆಮದಾಗುತ್ತದೆ. ಕೇರಳದಲ್ಲಿ ಬೆಳೆದ ಕೆಂಬಾಳೆ ಈ ರಾವುಲಪಾಲೆಂ ಮಾರುಕಟ್ಟೆ ತಲುಪುತ್ತದೆ. ಅಲ್ಲಿಂದ ಕಮಲಾಪುರದ ವರ್ತಕರು ಖರೀದಿಸಿ ತರುತ್ತಾರೆ. ನೋಡಲು ಅತಿಹೆಚ್ಚು ಗಾಢ ಕಂದು ಬಣ್ಣದ್ದಾಗಿರುತ್ತವೆ. ಗ್ರಾಹಕರಿಗೆ ಆಕರ್ಷಕ ಎನಿಸುತ್ತವೆ. ಆದರೆ ಕಮಲಾಪುರ ಪ್ರದೇಶದ ಮಣ್ಣಿನಲ್ಲಿ ಬೆಳೆದ ಕೆಂಬಾಳೆಯಲ್ಲಿನ ಯಾವ ಪೋಷಕಾಂಶಗಳೂ ಈ ಬಾಳೆಯಲ್ಲಿ ಇರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ನಿರ್ವಹಣೆಗೆ ಸಾಕಷ್ಟು ದುಡ್ಡು ಸುರಿದು ಬೆಳೆದ ಕಮಲಾಪುರ ಕೆಂಬಾಳೆ ದರ ಹೆಚ್ಚಿರುವುದರಿಂದ ವ್ಯಾಪಾರಿಗಳು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ದರ ಕುಸಿತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಹೆಚ್ಚು ದಿನ ಶೇಖರಣೆಗೆ ಯೋಗ್ಯವಲ್ಲದ ಈ ಕೆಂಬಾಳೆ ಕೊಳೆಯುವ ಸಾಧ್ಯತೆ ಇರುತ್ತದೆ. ಅನಿವಾರ್ಯವಾಗಿ ಕೆಲ ರೈತರು ರಸ್ತೆ ಬದಿಗೆ ಬಂಡಿ ಹಚ್ಚಿ ತಾವೇ ಮಾರಾಟಕ್ಕೆ ಮುಂದಾಗಿದ್ದಾರೆ. ಎಲ್ಲ ರೈತರೂ ಈ ರೀತಿ ಮಾರಾಟ ಮಾಡಲಾಗುವುದಿಲ್ಲ. ಕೆಲವರಿಗೆ ಜಾಗದ ಕೊರೆತೆಯಾದರೆ ಕೆಲವರಿಗೆ ಕಾರ್ಮಿಕರ ಕೊರತೆ ಇರುತ್ತದೆ. ವ್ಯಾಪಾರಿಗಳ ಈ ನಡೆಯಿಂದ ಕಮಲಾಪುರ ಕೆಂಬಾಳೆ ಹೆಸರಲ್ಲಿ ರೈತರು, ಗ್ರಾಹಕರು ಇಬ್ಬರಿಗೂ ಮೋಸವಾಗುತ್ತಿದೆ. ಕೂಡಲೇ ತೋಟಗಾರಿಕೆ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದು ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ವೈಜನಾಥ ತಡಕಲ್ ಒತ್ತಾಯಿಸಿದ್ದಾರೆ. ಕಮಲಾಪುರ ಕೆಂಬಾಳೆಯ ವೈಶಿಷ್ಟ್ಯ ಇನ್ನಾವುದೇ ಬಾಳೆಯಲ್ಲಿಲ್ಲ. ಈ ಕೆಂಬಾಳೆ ಕೃಷಿಗೆ ನಿರ್ವಹಣಾ ವೆಚ್ಚ ಹಾಗೂ ಸಮಯ ಜಾಸ್ತಿ. ಹೀಗಾಗಿ ದರ ಹೆಚ್ಚಿರುತ್ತದೆ. ಇದೇ ನೆಪವೊಡ್ಡಿ ಬೇರೆಡೆಯಿಂದ ಕೊಂಡು ತಂದು ಮಾರುವುದು ಸರಿಯಲ್ಲ ಅಶೋಕ ಸುಗೂರ ಕಮಲಾಪುರ ರೈತ
ಕಮಲಾಪುರ ಕೆಂಬಾಳೆ ಕಮಲಾಪುರ ರೈತರ ಆಸ್ತಿ. ಬೇರೆಡೆಯಿಂದ ಕೊಂಡು ತಂದು ಮಾರುವುದು ಅಕ್ಷಮ್ಯ. ಇದರಿಂದ ರೈತರಿಗೂ ನಷ್ಟವಾಗುತ್ತದೆ. ಇತ್ತ ಗ್ರಾಹಕರಿಗೂ ಮೋಸ ಮಾಡಿದಂತಾಗುತ್ತದೆ. ಅಧಿಕಾರಿಗಳು ಕೂಡಲೆ ನಿಗ್ರಹಿಸಬೇಕು.ವೈಜನಾಥ ತಡಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕಮಲಾಪುರ ಕೆಂಬಾಳೆಯ ವೈಶಿಷ್ಟ್ಯ ಇನ್ನಾವುದೇ ಬಾಳೆಯಲ್ಲಿಲ್ಲ. ಈ ಕೆಂಬಾಳೆ ಕೃಷಿಗೆ ನಿರ್ವಹಣಾ ವೆಚ್ಚ ಹಾಗೂ ಸಮಯ ಜಾಸ್ತಿ. ಹೀಗಾಗಿ ದರ ಹೆಚ್ಚಿರುತ್ತದೆ. ಇದೇ ನೆಪವೊಡ್ಡಿ ಬೇರೆಡೆಯಿಂದ ಕೊಂಡು ತಂದು ಮಾರುವುದು ಸರಿಯಲ್ಲಅಶೋಕ ಸುಗೂರ ಕಮಲಾಪುರ ರೈತ
ಬೇರೆಡೆಯಿಂದ ಕಮಲಾಪುರಕ್ಕೆ ಕೆಂಬಾಳೆ ಆಮದಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ವಿನೋದಕುಮಾರ ಅರುಣೋದಯ ತೋಟಗಾರಿಕೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.