ADVERTISEMENT

ಏಳು ತಿಂಗಳಾದರೂ ಶಾಲಾ ಮಕ್ಕಳಿಗಿಲ್ಲ ಶೂ ಭಾಗ್ಯ!

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 6:56 IST
Last Updated 22 ಡಿಸೆಂಬರ್ 2025, 6:56 IST
ಕಮಲಾಪುರ ತಾಲ್ಲೂಕಿನ ನೀಲಕೂಡ ತಾಂಡಾ ಮಕ್ಕಳು ಶನಿವಾರ ಬರಿಗಾಲಲ್ಲೇ ಕವಾಯತು ಮಾಡಿದರು
ಕಮಲಾಪುರ ತಾಲ್ಲೂಕಿನ ನೀಲಕೂಡ ತಾಂಡಾ ಮಕ್ಕಳು ಶನಿವಾರ ಬರಿಗಾಲಲ್ಲೇ ಕವಾಯತು ಮಾಡಿದರು   

ಕಮಲಾಪುರ: ಸರ್ಕಾರದ ಅನೇಕ ಮಹಾತ್ವಾಕಾಂಕ್ಷೆ ಯೋಜನೆಗಳು ಸಕಾಲಕ್ಕೆ ಕಾರ್ಯರೂಪಕ್ಕೆ ಬಾರದ ಕಾರಣ ಹಳ್ಳ ಹಿಡಿದಿವೆ. ಇದರಲ್ಲಿ ಶಾಲಾ ಮಕ್ಕಳಿಗೆ ಒದಗಿಸಬೇಕಾದ ಶೂ ಭಾಗ್ಯ ಸಹ ಒಂದಾಗಿದೆ.

ತರಗತಿ ಆರಂಭವಾಗಿ 7 ತಿಂಗಳು ಕಳೆದಿವೆ. ಇನ್ನೇನು ಮೂರು ತಿಂಗಳಲ್ಲಿ ಪರೀಕ್ಷೆ ಮುಗಿದು ಬೇಸಿಗೆ ರಜೆ ಆರಂಭವಾಗುತ್ತವೆ. ಈ ಯೋಜನೆಗಳು ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಳ್ಳಲು ಮಾತ್ರ ಸೀಮಿತವಾಗಿವೆ ಎಂದು ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಮಲಾಪುರ ತಾಲ್ಲೂಕಿನಲ್ಲಿ ಪೂರ್ವ ಪ್ರಾಥಮಿಕ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಸೇರಿ ಒಟ್ಟು 113 ಸರ್ಕಾರಿ ಶಾಲೆಗಳಲ್ಲಿ 38,480 ಮಕ್ಕಳಿದ್ದಾರೆ. 9 ಅನುದಾನಿತ ಶಾಲೆಗಳಲ್ಲಿ ಒಟ್ಟು 1,248 ಮಕ್ಕಳಿದ್ದಾರೆ. ಈ ಮಕ್ಕಳಿಗೆ ಇದುವರೆಗೆ ಶೂ ವಿತರಣೆಯಾಗಿಲ್ಲ.

ADVERTISEMENT

ಕಮಲಾಪುರ ಸುತ್ತಲೂ ಬಹುತೇಕ ತಾಂಡಾಗಳಿದ್ದು, ಕಿರಿಯ ಪ್ರಾಥಮಿಕ ಶಾಲೆಗಳಿವೆ. 5ನೇ ತರಗತಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಪಕ್ಕದ ಗ್ರಾಮಕ್ಕೆ ತೆರಳಬೇಕು. ಈ ಗ್ರಾಮಗಳಲ್ಲಿ 8ನೇ ತರಗತಿವರೆಗೆ ಕಲಿತು 9ನೇ ತರಗತಿಗೆ ಡೊಂಗರಗಾಂವ, ಸೊಂತ, ಮಹಾಗಾಂವ ಹಾಗೂ ಕಮಲಾಪುರ ಪಟ್ಟಣದ ಪ್ರೌಢಶಾಲೆಗಳಿಗೆ ತೆರಳಬೇಕು.

ಸೂಕ್ತ ರಸ್ತೆ ಇಲ್ಲದಿರುವುದರಿಂದ ಬಸ್‌ ಅಥವಾ ಇತರೆ ವಾಹನ ಸಂಚಾರ ವಿರಳ. ವಿದ್ಯಾರ್ಥಿಗಳಿಗೆ ಕಾಲ್ನಡಿಗೆಯೇ ಗತಿ. ಪಾದರಕ್ಷೆಗಳಿಲ್ಲದೆ ಅನೇಕ ಮಕ್ಕಳು ಬರಿಗಾಲಲ್ಲೇ ಶಾಲೆಗೆ ಬರುತ್ತಿರುವುದು ಕಂಡುಬಂದಿದೆ. ಸರ್ಕಾರ ಶೂ ಒದಗಿಸುವುದಿದ್ದರೆ ಸಕಾಲಕ್ಕೆ ಒದಗಿಸಬೇಕು. ಶಾಲಾ ದಿನಗಳ ಕೊನೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತದೆ. ಇದೇ ಸುಸಂದರ್ಭವೆಂದು ಶಾಲೆಯಲ್ಲಿ ಅಕ್ರಮ ನಡೆಯುವ ಸಾಧ್ಯತೆಗಳಿರುತ್ತದೆ ಎಂಬುದು ಪಾಲಕರ ಆರೋಪ.

ಶಾಲಾ ಶಿಕ್ಷಣ ಇಲಾಖೆಯ ವಿದ್ಯಾವಿಕಾಸ ಯೋಜನೆ ಅನುದಾನದಲ್ಲಿ ಪ್ರತಿ ಮಗುವಿಗೆ 1 ಜೊತೆ ಶೂ, 2 ಜೊತೆ ಸಾಕ್ಸ್‌ ವಿತರಣೆ ಮಾಡಲಾಗುತ್ತದೆ. ಕಳೆದ ವರ್ಷವರೆಗೆ ಮಕ್ಕಳ ಸಂಖ್ಯೆಗನುಗುಣವಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಖಾತೆಗೆ ಅನುದಾನ ಜಮೆಯಾಗುತ್ತಿತ್ತು. ನಂತರ ಆಯಾ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಎಸ್‌ಡಿಎಂಸಿ ಜಂಟಿ ಖಾತೆಗೆ ಅನುದಾನ ವರ್ಗಾಯಿಸಲಾಗುತ್ತಿತ್ತು. ಈ ಬಾರಿ ಬೆಂಗಳೂರು ವಿದ್ಯಾವಿಕಾಸ ಖಾತೆಯಿಂದ ನೇರವಾಗಿ ಮುಖ್ಯ ಶಿಕ್ಷಕ ಹಾಗೂ ಎಸ್‌ಡಿಎಂಸಿ ಜಂಟಿ ಖಾತೆಗೆ ಅನುದಾನ ಜಮೆಯಾಗಲಿದೆ.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ಎಂದು ಮಕ್ಕಳನ್ನು ವರ್ಗೀಕರಿಸಿ ಮೂರು ಲೆಕ್ಕ ಶೀರ್ಷಿಕೆಯಡಿ ಹಣ ಜಮೆ ಮಾಡಲಾಗುತ್ತದೆ. ಕೆಲವು ಶಾಲೆಗಳಿಗೆ ಹಣ ಜಮೆಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಇನ್ನು ಕೆಲವು ಶಾಲೆಗಳಿಗೆ ಅಗತ್ಯಕ್ಕಿಂತ ಎರಡು ಪಟ್ಟು ಹಣ ಜಮೆಯಾಗಿದೆ. ಹೆಚ್ಚಾಗಿರುವ ಹಣ ಮರುಪಡೆದು ಕಡಿಮೆ ಜಮೆಯಾಗಿರುವ ಶಾಲೆಗಳಿಗೆ ವರ್ಗಾಯಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಹಂತದಲ್ಲಿ ಆಗುವುದಿಲ್ಲ. ಇದಕ್ಕೆ ಸೂಕ್ತ ದಾರಿ ಹುಡುಕುವುದು ಅಗತ್ಯವಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. ಸರ್ಕಾರದ ಈ ರೀತಿಯ ಎಡವಟ್ಟಿನಿಂದ ಮಕ್ಕಳಿಗೆ ಬರಿಗಾಲಲ್ಲೇ ನಡೆಯುವ ಪರಿಸ್ಥಿತಿ ಬಂದಿದೆ.

ಗ್ಯಾರಂಟಿಗಳಿಗೆ ಹಣ ಹೊಂದಿಸಲು ತಿಣುಕಾಡುತ್ತಿರುವ ಸರ್ಕಾರ ಮಕ್ಕಳ ಮೇಲು ಬರೆ ಎಳೆದಿದೆ. ಈ ಕುರಿತು ಶಿಕ್ಷಣ ಸಚಿವರಿಗೆ ಕೂಡಲೇ ಪತ್ರ ಬರೆಯಲಾಗುವುದು
ಬಸವರಾಜ ಮತ್ತಿಮಡು ಶಾಸಕ
ಶಾಲೆಯಲ್ಲಿರುವ ಎಲ್ಲ ಮಕ್ಕಳಿಗೆ ಶೂ ಸಾಕ್ಸ್‌ ಒದಗಿಸಲು ಇಲಾಖೆ ಪೂರ್ತಿ ಹಣ ಜಮೆ ಮಾಡಬೇಕು. ಕೆಲ ಮಕ್ಕಳಿಗೆ ಕೊಟ್ಟು ಕೆಲವರಿಗೆ ಬಿಟ್ಟರೆ ಪಾಲಕರು ಕಿರಿಕಿರಿ ಮಾಡುತ್ತಾರೆ
ಪರಮೇಶ್ವರ ಓಕಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
ಅನುದಾನ ಬಿಡುಗಡೆಯಾಗಿದೆ. ಕೆಲವು ಶಾಲೆಗೆ ಜಮೆಯಾಗಿರಲಿಕ್ಕಿಲ್ಲ. ಅಂಥವರು ಶಾಲೆಯ ಸಂಚಿತ ನಿಧಿಯನ್ನು ಬಳಸಿಕೊಳ್ಳಬೇಕು. ಇಲ್ಲವೆ ಅಂಗಡಿಯವರ ಬಳಿ ಉದ್ರಿ ಪಡೆಯಬೇಕು. ನಂತರ ಬಂದ ಅನುದಾನ ಹೊಂದಿಸಿಕೊಳ್ಳಬೇಕು
ಸೂರ್ಯಕಾಂತ ಮದಾನೆ ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.