ADVERTISEMENT

ಕಣಸೂರ ಗ್ರಾಮ ಸ್ಥಳಾಂತರ ಯಾವಾಗ?

ಬೆಣ್ಣೆತೊರಾ ನೀರಿಗೆ ನಲಗುತ್ತಿರುವ ಊರು

ಗುಂಡಪ್ಪ ಕರೆಮನೋರ
Published 23 ಸೆಪ್ಟೆಂಬರ್ 2025, 4:51 IST
Last Updated 23 ಸೆಪ್ಟೆಂಬರ್ 2025, 4:51 IST
ಕಾಳಗಿ ತಾಲ್ಲೂಕಿನ ಕಣಸೂರ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದ ನೀರು
ಕಾಳಗಿ ತಾಲ್ಲೂಕಿನ ಕಣಸೂರ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದ ನೀರು   

ಕಾಳಗಿ: ತಾಲ್ಲೂಕಿನ ಗೋಟೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಸೂರ ಗ್ರಾಮ ಹೇರೂರ (ಕೆ) ಬೆಣ್ಣೆತೊರಾ ಜಲಾಶಯದ ನೀರಿಗೆ ಆಗಾಗ ನಲಗುತ್ತಲೇ ಇರುತ್ತದೆ. ಹಾಗಾಗಿ ಈ ಊರನ್ನು 1.5ಕಿಮೀ ದೂರದ ಅಶೋಕನಗರ (ಹೆಬ್ಬಾಳ ಕ್ರಾಸ್) ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕೆಂಬ ಸರ್ಕಾರದ ಯೋಜನೆ ಹಲವು ವರ್ಷಗಳಿಂದ ಜಾರಿಯಾಗದೆ ಹಾಗೆ ಉಳಿದುಕೊಂಡಿದೆ.

ಬೆಣ್ಣೂರ (ಕೆ) ಗ್ರಾಮ ಸಹ ಪ್ರತಿಬಾರಿ ಬೆಣ್ಣೆತೊರಾ ನೀರಿಗೆ ಸಂಕಷ್ಟಕ್ಕೊಳಗಾಗಿ ಅಲ್ಲಿಯ ಜನ-ಜಾನುವಾರು ಪರದಾಡುತ್ತಿದ್ದದನ್ನು ಮನಗಂಡು ಇಡಿ ಗ್ರಾಮವೇ ಅಶೋಕನಗರಗೆ (ಹೆಬ್ಬಾಳ ಕ್ರಾಸ್) ಸ್ಥಳಾಂತರ ಮಾಡಿ ಹಳೆದಾಗಿದೆ. ಹೀಗಾಗಿ ಅಲ್ಲಿನ ಜನರು ನಿಟ್ಟುಸಿರು ಬಿಟ್ಟು ನೆಮ್ಮದಿಯಾಗಿದ್ದಾರೆ.

ಅದರಂತೆ ಪ್ರತಿ ಮಳೆಗಾಲದಲ್ಲಿ ಬೆಣ್ಣೆತೊರಾ ನೀರಿಗೆ ಕಣಸೂರ ಗ್ರಾಮದ 50ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಇರುತ್ತವೆ. ಈ ಊರು ಮೊದಲೇ ಚಿಕ್ಕದಾಗಿದೆ. ಪ್ರತಿಬಾರಿಯೂ ಬೆಣ್ಣೆತೊರಾ ನೀರಿನ ಭಯಕ್ಕೆ ಜನರು ಮನೆಮಾರು ಬಿಟ್ಟು, ನಿದ್ದೆಗೆಟ್ಟು 2ಕಿಮೀ ದೂರದ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದ ಮೊರೆ ಹೋಗುತ್ತಾರೆ.

ADVERTISEMENT

2016ರಲ್ಲಿ ಬೆಣ್ಣೆತೊರಾದ ಅತ್ಯಧಿಕ ನೀರಿಗೆ ಕಣಸೂರ ಗ್ರಾಮ ಕಕ್ಕಾಬಿಕ್ಕಿಯಾಗಿ ಜನ-ಜಾನುವಾರುಗಳ ಬವಣೆ ಹೇಳತಿರದಾಗಿತ್ತು. ಆ ವೇಳೆ ವೈಮಾನಿಕ ಸಮೀಕ್ಷೆ ನಡೆಸಿದ ಆಗಿನ ಸಿಎಂ ಸಿದ್ದರಾಮಯ್ಯ ಮತ್ತು ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಕಣಸೂರ ಸ್ಥಳಾಂತರ’ ಮಾಡುವ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಿದರು ಎನ್ನಲಾಗಿದೆ.

‘ಪ್ರತಿಸಲವು ಮುಳುಗಡೆಯಾಗುವ ಮನೆಗಳಾದರೂ ಅಶೋಕನಗರಕ್ಕೆ ಶಿಫ್ಟ್ ಮಾಡುವ ಸಂಬಂಧ ಸರ್ಕಾರಕ್ಕೆ ಒಂದುಸಲ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕಾರ್ಯರೂಪಕ್ಕೆ ಬಂದಿಲ್ಲ.ಸ್ಥಳಾಂತರಕ್ಕಾಗಿ ಅಶೋಕನಗರದಲ್ಲಿ (ಹೆಬ್ಬಾಳ ಕ್ರಾಸ್) ಸರ್ವೆ ನಂ.66ರಲ್ಲಿ 40ಎಕರೆ ಸರ್ಕಾರಿ ಜಮೀನಿದೆ’ ಎಂದು ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ ತಿಳಿಸಿದರು.

2016ರಲ್ಲಿ ಆಶ್ವಾಸನೆ ನೀಡಿದ್ದ ಸರ್ಕಾರವೇ ಈಗಿದೆ. ಗ್ರಾಮಸ್ಥರ ಸಂಕಷ್ಟ ನಿವಾರಿಸಲುದಲ್ಲಿ ಸ್ಥಳಾಂತರ ಕಾರ್ಯಕ್ಕೆ ಸರ್ಕಾರ ಮುಂದಾಗಿ ಬೆಣ್ಣೆತೊರಾ ನೀರಿನಿಂದ ಶಾಶ್ವತ ಮುಕ್ತಿ ಮಾಡುವರೆ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.

ಎರಡುಸಲ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೂ ಕಣಸೂರ ಗ್ರಾಮದ ಸ್ಥಳಾಂತರ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ
ನಾಗರಾಜ ಸಜ್ಜನ ಕಣಸೂರ ಗ್ರಾಮಸ್ಥ
ಕಣಸೂರ ಗ್ರಾಮಸ್ಥರಿಗಾಗಿ ಅಶೋಕನಗರದಲ್ಲಿ 25ಆಶ್ರಯ ಮನೆ ನಿರ್ಮಿಸಲಾಗಿತ್ತು. ಆ ಬಳಿಕ ಕಾನೂನು ತೊಡಕಿನಿಂದಾಗಿ ಹಲವು ಮನೆಗಳು ನೆಲ ಸಮವಾಗಿವೆ ಶಿ
ವಕುಮಾರ ಕಮಕನೂರ ಗೋಟೂರ ಗ್ರಾಪಂ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.