ಕಲಬುರಗಿ: ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಚಿತ್ತಾಪುರದ ಅತಿಥಿಗೃಹದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ದಿಗ್ಬಂಧನ ಹಾಕಿದ್ದರಲ್ಲಿ ಪೊಲೀಸರ ಸಂಪೂರ್ಣ ವೈಫಲ್ಯವಿದ್ದು, ಜಿಲ್ಲೆಯಲ್ಲಿನ ತುಘಲಕ್ ದರ್ಬಾರ್ ಖಂಡಿಸಿ ಇದೇ 24ರಂದು ಬಿಜೆಪಿಯಿಂದ ಕಲಬುರಗಿ ಚಲೋ ನಡೆಸಲಾಗುವುದು ಎಂದು ಬಿಜೆಪಿ ವಿಭಾಗೀಯ ಪ್ರಭಾರಿ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಛಲವಾದಿ ನಾರಾಯಣಸ್ವಾಮಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಗಾದೆ ಮಾತನ್ನು ಉಲ್ಲೇಖಿಸಿ ಸಾಂದರ್ಭಿಕವಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಶ್ವಾನಕ್ಕೆ ಹೋಲಿಕೆ ಮಾಡಿದ್ದಾರೆ. ಅವರ ಮಾತಿನಿಂದ ಪ್ರಿಯಾಂಕ್ ಖರ್ಗೆ ಅವರಿಗೆ ನೋವಾಗಿದ್ದರೆ ನಾವೂ ವಿಷಾದ ವ್ಯಕ್ತಪಡಿಸುತ್ತೇವೆ. ಆ ಬಗ್ಗೆ ಏನೇ ತಕರಾರು ಇದ್ದರೂ ಮಾಧ್ಯಮದ ಮೂಲಕವೇ ಹೇಳಿಕೆ ನೀಡಬೇಕಿತ್ತು. ಅದನ್ನು ಬಿಟ್ಟು ಗೂಂಡಾಗಿರಿ ಮಾಡುವ ಮೂಲಕ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ನಾರಾಯಣಸ್ವಾಮಿ ಅವರು ತಂಗಿದ್ದ ಸರ್ಕಾರಿ ಅತಿಥಿಗೃಹದಲ್ಲಿ ಅವರನ್ನು ಐದು ಗಂಟೆ ಕೂಡಿ ಹಾಕಿರುವುದು ಯಾವ ನ್ಯಾಯ? ಸಂವಿಧಾನದತ್ತ ಅಧಿಕಾರ ಹೊಂದಿದ ಪರಿಷತ್ ವಿರೋಧ ಪಕ್ಷದ ನಾಯಕರಿಗೆ ಭದ್ರತೆ ಕೊಡಲಾರದಷ್ಟು ಇಲಾಖೆ ಅಶಕ್ತವಾಗಿದೆಯೇ? ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೂಡಲೇ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.
‘ಇದರಲ್ಲಿ ಪೊಲೀಸರ ಕೈವಾಡವೂ ಇದ್ದು, ಛಲವಾದಿ ನಾರಾಯಣಸ್ವಾಮಿ ಅವರಿದ್ದ ಅತಿಥಿಗೃಹದ ಬಳಿ ಪ್ರತಿಭಟನೆ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರೇ ಕರೆಸಿಕೊಂಡರು ಎಂಬ ಮಾಹಿತಿಗಳಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದರು.
ಛಲವಾದಿ ನಾರಾಯಣಸ್ವಾಮಿ ಅವರನ್ನು ಕೂಡಿ ಹಾಕಿ, ಅವರ ಕಾರಿಗೆ ಮಸಿ ಹಚ್ಚಿದ ಪ್ರಕರಣ ಖಂಡಿಸಿ ಇದೇ 24ರಂದು ನಡೆಯಲಿರುವ ಕಲಬುರಗಿ ಚಲೋ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ವಿಧಾನಸಭೆ ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಶಾಸಕರು, ಜನಪ್ರತಿನಿಧಿಗಳು ನಗರಕ್ಕೆ ಬರಲಿದ್ದಾರೆ. ತಾಲ್ಲೂಕು ಕೇಂದ್ರಗಳಿಂದಲೂ ಪಕ್ಷದ ಕಾರ್ಯಕರ್ತರು ನಗರಕ್ಕೆ ಬರಲಿದ್ದಾರೆ ಎಂದು ಹೇಳಿದ ತೇಲ್ಕೂರ, ಪ್ರತಿಭಟನಾ ಮೆರವಣಿಗೆ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.
ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ಚಂದು ಪಾಟೀಲ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಮುಖಂಡರಾದ ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ, ಮಹಾದೇವ ಬೆಳಮಗಿ ಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.