ADVERTISEMENT

ಕಲಬುರಗಿ | ‘ಭಾವ ಸ್ಪರ್ಶದಿಂದ ಗಟ್ಟಿ ಸಾಹಿತ್ಯ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 7:26 IST
Last Updated 3 ನವೆಂಬರ್ 2025, 7:26 IST
ಕಲಬುರಗಿ ನಗರದ ಕನ್ನಡ ಭವನದ ಆವರಣದಲ್ಲಿ ಭಾನುವಾರ ನಡೆದ ಕಾವ್ಯ ದೀಪ ವಿಶೇಷ ಕವಿಗೋಷ್ಠಿಯಲ್ಲಿ ಲೇಖಕಿ ಆರತಿ ಕಡಗಂಚಿ ಮಾತನಾಡಿದರು 
ಕಲಬುರಗಿ ನಗರದ ಕನ್ನಡ ಭವನದ ಆವರಣದಲ್ಲಿ ಭಾನುವಾರ ನಡೆದ ಕಾವ್ಯ ದೀಪ ವಿಶೇಷ ಕವಿಗೋಷ್ಠಿಯಲ್ಲಿ ಲೇಖಕಿ ಆರತಿ ಕಡಗಂಚಿ ಮಾತನಾಡಿದರು     

ಕಲಬುರಗಿ: ‘ಕನ್ನಡ ಹೃದಯ ಭಾಷೆಯಾಗಲಿ. ಕೇವಲ ಅಕ್ಷರಗಳ ಜೋಡಣೆಯಿಂದ ಕಾವ್ಯವಾಗದು, ಅದಕ್ಕೆ ಭಾವ ಬೆಸುಗೆಯ ಅಗತ್ಯವಾಗಿದೆ’ ಎಂದು ಸೇಡಂನ ಲೇಖಕಿ ಆರತಿ ಕಡಗಂಚಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾವ್ಯ ದೀಪ ವಿಶೇಷ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಮನಸ್ಸಿಗೆ ಮುದ ನೀಡುವ ಭಾವಗಳ ಸ್ಪರ್ಶವಾದಾಗ ಗಟ್ಟಿ ಸಾಹಿತ್ಯ ಹುಟ್ಟಲು ಸಾಧ್ಯ. ಕನ್ನಡದ ಅಸ್ಮಿತೆ ಕಟ್ಟಿಕೊಟ್ಟ ಅನೇಕ ಕಾವ್ಯದ ಸಾಲುಗಳು ಈಗಲೂ ನಮ್ಮೆಲ್ಲರ ನಾಲಿಗೆ ಮೇಲೆ ಹರಿದಾಡುತ್ತಿವೆ. ಕಾವ್ಯ ಭಾವಬಿಂಬವಾಗಿರಲಿ’ ಎಂದರು.

ಕವಿಗೋಷ್ಠಿ ಉದ್ಘಾಟಿಸಿದ ನಿವೃತ್ತ ಪ್ರಾಧ್ಯಾಪಕ ರಾಘವೇಂದ್ರ ಗುಡಗುಂಟಿ, ‘ಇಂದಿನ ಯುವ ಬರಹಗಾರರು ಹಿರಿಯ ಸಾಹಿತಿಗಳ ಕೃತಿಗಳನ್ನು ಹೆಚ್ಚೆಚ್ಚು ಓದಬೇಕು. ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ADVERTISEMENT

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸತ್ಯಂ ಪಿಯು ಕಾಲೇಜಿನ ಟ್ರಸ್ಟಿ ಪ್ರೊ.ಅಮರೇಶ ಹಾಲವಿ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ ಮಾತನಾಡಿದರು.

ಕವಿಗಳಾದ ಪ್ರಭು ನಿಷ್ಠಿ, ಸಂಗೀತಾ ಹಿರೇಮಠ, ರಾಜೇಂದ್ರ ಝಳಕಿ, ಪ್ರಭಾವತಿ ಮೇತ್ರೆ, ಪರವೀನ್ ಸುಲ್ತಾನಾ, ಮಹಾಂತೇಶ ಕುಂಬಾರ, ಮಹಾಲಿಂಗಯ್ಯ ಸ್ವಾಮಿ, ವಿದ್ಯಾಧರ ಕಾಂಬಳೆ, ಶ್ರೀಕಾಂತ ಬಿರಾದಾರ, ಶಿವಯ್ಯಾ ಮಠಪತಿ, ಜ್ಯೋತಿ ಪಾಟೀಲ, ಗುರುದೇವಿ ರಾಯಚೂರ, ಅಂಜುನಾಥ ನಾಯ್ಕಲ್, ಮಂಜುಳಾ ಪಾಟೀಲ, ಆರ್.ಎಚ್.ಪಾಟೀಲ, ಶ್ರೀದೇವಿ ಪೊಲೀಸ್‌ಪಾಟೀಲ ಅವರು ಕನ್ನಡ ನಾಡು–ನುಡಿ, ನೆಲ–ಜಲಗಳ ಕುರಿತು ಅವುಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕಾವ್ಯ ದೀಪ ಬೆಳಗಿಸಿದರು.