ADVERTISEMENT

ಸಾಹಿತ್ಯ ಸಮ್ಮೇಳನ| ನೋಂದಣಿ ವಿಳಂಬ: ವಿವಿಧೆಡೆಯಿಂದ ಬಂದ ಸಾಹಿತ್ಯಾಸಕ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 2:39 IST
Last Updated 5 ಫೆಬ್ರುವರಿ 2020, 2:39 IST
ಮೈಸೂರಿನ ಸಾಹಿತ್ಯಾಸಕ್ತರ ಆಕ್ರೋಶ
ಮೈಸೂರಿನ ಸಾಹಿತ್ಯಾಸಕ್ತರ ಆಕ್ರೋಶ   

ಕಲಬುರ್ಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದ್ದು,ವಿವಿಧ ಜಿಲ್ಲೆಗಳಿಂದ ಬಂದಿರುವ ಸಾಹಿತ್ಯಾಸಕ್ತರು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನೋಂದಣಿ ಪ್ರಕ್ರಿಯೆಗಾಗಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ನೋಂದಣಿ ಪ್ರಕ್ರಿಯೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯಾಸಕ್ತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ. ಸಮ್ಮೇಳನದ ವಿವಿಧ ಘಟಕಗಳು ಅಧಿಕಾರಿಗಳು ಮತ್ತು ಸ್ವಯಂಸೇವಕರು ಕಿಟ್ ವಿತರಣೆ ಮಾಡಿದರು.

ಸಮ್ಮೇಳನದ ಮುನ್ನಾ ದಿನವೇ ಕಿಟ್, ಒಒಡಿ ಆರ್ಡರ್ ಪ್ರತಿ, ಆಹ್ವಾನ ಪತ್ರಿಕೆ ಎಲ್ಲವೂ ನೀಡಬೇಕಿತ್ತು. ಈವರೆಗೆ ನೀಡಿಲ್ಲ ಎಂದು ಯಾದಗಿರಿ ಜಿಲ್ಲೆಯ ಶಹಾಪುರ ಸಾಹಿತಿ ರಾಘವೇಂದ್ರ ಹಾರಣಗೇರಾ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬೇರೆ ಬೇರೆ ಜಿಲ್ಲೆಗಳಲ್ಲಿ ಸಮ್ಮೇಳನ ನಡೆದ ಸಂದರ್ಭದಲ್ಲಿ ಬೇಗನೇ ವಿತರಣೆ ಮಾಡಲಾಗುತ್ತಿದ್ದು, ಆದರೆ ಇಲ್ಲಿ ಮಾತ್ರ ವಿಳಂಬ ಮಾಡಲಾಗುತ್ತಿದೆ ಎಂದು ಸಂಘಸಂಸ್ಥೆಗಳ ಪ್ರತಿನಿಧಿಗಳು ಆರೋಪಿಸಿದರು.

‘ನಾವು ಮೈಸೂರು ಜಿಲ್ಲೆಯಿಂದ ಬಂದಿದ್ದೇವೆ. ನಸುಕಿನ 5.30ರಿಂದ ಇಲ್ಲಿ ಕಾಯುತ್ತಿದ್ದೇವೆ. ಆದರೆ ಇಲ್ಲಿನ ಮೈಸೂರು ಜಿಲ್ಲೆಯ ಕೌಂಟರಿನಲ್ಲಿ ಯಾರೂ ಸಹ ಇಲ್ಲ’ ಎಂದು ಮೈಸೂರಿನ ವಿವಿಧ ಸಂಘಟನೆಯ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಮತ್ತು ಸಾಹಿತ್ಯ ಸಮ್ಮೇಳನ ಆಯೋಜಕರ ವಿರುದ್ಧ ಘೋಷಣೆ ಹಾಕಿದರು. ‘ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರಲಾಗಿದೆ. ಹೀಗೆ ನಿರಾಸಕ್ತಿ ಮುಂದುವರೆದಲ್ಲಿ, ಪ್ರವೇಶದ್ವಾರದ ಬಳಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.