ADVERTISEMENT

‘ಕನ್ನಡ ರಕ್ಷಣೆಗೆ ಕಂಕಣಬದ್ಧರಾಗಿ’

ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 4:37 IST
Last Updated 15 ಫೆಬ್ರುವರಿ 2021, 4:37 IST
ಕಲಬುರ್ಗಿಯಲ್ಲಿ ಭಾನುವಾರ ಆಯೋಜಿಸಿದ್ದ ಉಪನ್ಯಾಸ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಗಣ್ಯರು ಸಸಿಗೆ ನೀರುಣಿಸಿದರು
ಕಲಬುರ್ಗಿಯಲ್ಲಿ ಭಾನುವಾರ ಆಯೋಜಿಸಿದ್ದ ಉಪನ್ಯಾಸ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಗಣ್ಯರು ಸಸಿಗೆ ನೀರುಣಿಸಿದರು   

ಕಲಬುರ್ಗಿ: ‘ಪರಭಾಷಾ ಹಾವಳಿಯಿಂದ ಕನ್ನಡ ಭಾಷೆಗೆ ಕುತ್ತು ಎದುರಾಗಿದೆ. ಕನ್ನಡದ ಉಳಿವಿಗಾಗಿ ಪ್ರತಿಯೊಬ್ಬ ಕನ್ನಡಿಗನೂ ಶ್ರಮಿಸಬೇಕಾದ ಕಾಲವಿದು’ ಎಂದು ಸಾಹಿತಿ ಸುಬ್ಬರಾವ್ ಕುಲಕರ್ಣಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಕಲಬುರ್ಗಿ ತಾಲ್ಲೂಕು ಘಟಕ, ಉತ್ತರ ವಲಯ ಹಾಗೂ ದಕ್ಷಿಣ ವಲಯಗಳ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ ನಡೆದು ಬಂದ ದಾರಿ’ ಉಪನ್ಯಾಸ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಶ್ರೀಮಂತವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾಷೆ ಬಗ್ಗೆ ಎಲ್ಲರೂ ಅಭಿಮಾನ ಮೆರೆಯಬೇಕು. ಕನ್ನಡವನ್ನು ಬಿಟ್ಟುಕೊಟ್ಟರೆ ನಾವು ನಮ್ಮನ್ನೇ ಬಿಟ್ಟು ಕೊಟ್ಟ ಹಾಗೆ ಎಂದು ತಿಳಿಸಿದರು.

ADVERTISEMENT

ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ‘ಕನ್ನಡ ಹುಟ್ಟಿ ಬೆಳೆದದ್ದು ನಮ್ಮ ಕಲಬುರ್ಗಿ ನೆಲದಲ್ಲಿ ಎಂಬುದು ಹೆಮ್ಮೆಯ ವಿಚಾರ. ಈ ಭಾಗ ಕನ್ನಡ ಚಟುವಟಿಕೆಗಳ ತವರೂರಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ಅನೇಕ ರೀತಿಯ ಸಕ್ರಿಯವಾಗಿ ನಾಡು, ನುಡಿ ಹಾಗೂ ನೆಲ– ಜಲ ಮತ್ತು ಅಭಿವೃದ್ಧಿ ವಿಷಯದಲ್ಲಿ ಕೆಲಸ ಮಾಡಿದ್ದು ಶ್ಲಾಘನೀಯ’ ಎಂದರು.

ಡಾ.ವಿಜಯಕುಮಾರ ಪರುತೆ ಉಪನ್ಯಾಸ ನೀಡಿದರು. ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಸುನೀಲ ಹುಡಗಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ, ಉತ್ತರ ವಲಯದ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ದಕ್ಷಿಣ ವಲಯದ ಅಧ್ಯಕ್ಷ ಅಪ್ಪಾರಾವ ಕುಲಕರ್ಣಿ, ಆನಂದಪ್ಪ ಮುಸಾವಳಿ, ದೌಲತಯರಾವ್‌ ಮಾಲಿಪಾಟೀಲ ಇದ್ದರು.

ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಜಿ.ಜಿ.ವಣಿಕ್ಯಾಳ ನಿರೂಪಿಸಿದರು. ಭಾನುಕುಮಾರ ಸ್ವಾಗತಿಸಿದರು. ಪ್ರಸಾದ್ ವಂದಿಸಿದರು. ಅಶೋಕ ಕಮಲಾಪುರ, ಆನಂದ ನಂದುರಕರ, ಬಿ.ಜಯಸಿಂಗ, ಸಾಜೀದ ಅಲಿ ರಂಜೋಳ್ಳ್ವಿ, ದಾಸಿಮಯ್ಯ ವಡ್ಡನಕೇರಿ, ಸಾಲೋಮನ ದೀವಾಕರ, ಪ್ರಶಾಂತ ತಂಬೂರಿ, ಶಲಣು ಇಕ್ಕಳಕಿಮಠ, ಮಿರಾಜುದ್ದಿನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.