ADVERTISEMENT

ಕರ್ನಾಟಕ ಕೇಂದ್ರೀಯ ವಿ.ವಿ ಘಟಿಕೋತ್ಸವ: ಹಣ್ಣು ವ್ಯಾಪಾರಿಯ ಮಗಳಿಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 13:10 IST
Last Updated 8 ನವೆಂಬರ್ 2025, 13:10 IST
<div class="paragraphs"><p>ಚಿನ್ನದ ಪದಕಗಳೊಂದಿಗೆ ವಿದ್ಯಾರ್ಥಿನಿಯರು</p></div>

ಚಿನ್ನದ ಪದಕಗಳೊಂದಿಗೆ ವಿದ್ಯಾರ್ಥಿನಿಯರು

   

ಕಲಬುರಗಿ: ಜಿಲ್ಲೆಯ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿ.ವಿ.ಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ್ದ ವಿದ್ಯಾರ್ಥಿನಿ ಶಿವಸಾಹಿತಿ ಸೋಮಿಶೆಟ್ಟಿ ಕೊರಳಿಗೆ ಎರಡು ಚಿನ್ನದ ಪದಕ ಬೀಳುತ್ತಿದ್ದಂತೆಯೇ ಎದುರಿಗೆ ಕುಳಿತಿದ್ದ ತಂದೆ ಯತೀಂದ್ರಬಾಬು ಹಾಗೂ ತಾಯಿ ಜಾಹ್ನವಿ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು.

ಅಜ್ಜನ ಕಾಲದಿಂದಲೇ ರಾಜ್ಯದ ಮೈಸೂರಿನಿಂದ ಆಂಧ್ರಪ್ರದೇಶದ ನಂದ್ಯಾಲಕ್ಕೆ ವಲಸೆ ಹೋಗಿರುವ ಯತೀಂದ್ರಬಾಬು ಅವರಿಗೆ ತಮ್ಮ ಮಗಳು ಇಡೀ ವಿಶ್ವವಿದ್ಯಾಲಯಕ್ಕೆ ಟಾಪರ್ ಆಗಿ ಹೊರಹೊಮ್ಮುತ್ತಾಳೆ ಎಂಬ ವಿಶ್ವಾಸವಿರಲಿಲ್ಲ. ಕನಸು ನನಸಾದ ಗಳಿಗೆಯಿಂದಲೇ ಮಗಳ ಸಾಧನೆ ನೋಡುತ್ತಾ ಇಬ್ಬರೂ ದಂಪತಿ ಕಣ್ಣೀರಾದರು. ಸಾಧನೆಯ ಕಿರೀಟ ತೊಟ್ಟಿದ್ದ ಶಿವಸಾಹಿತಿ ತನ್ನ ಎರಡೂ ಚಿನ್ನದ ಪದಕಗಳನ್ನು ತಂದೆ–ತಾಯಿಯ ಕೊರಳಿಗೆ ಹಾಕಿ ಭಾವುಕರಾದರು. ಇಂತಹ ಭಾವುಕ ಗಳಿಗೆಗೆ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 9ನೇ ಘಟಿಕೋತ್ಸವ ಸಾಕ್ಷಿಯಾಯಿತು.

ADVERTISEMENT

ವಿಭಿನ್ನ ಉಡುಪು, ವಿವಿಧ ಭಾಷೆಯ ಕಲರವದೊಂದಿಗೆ ಮಿನಿ ಭಾರತದಂತೆ ಕಂಡು ಬಂದ ಘಟಿಕೋತ್ಸವಕ್ಕೆ ಉತ್ತರ ಭಾರತ, ಈಶಾನ್ಯ ರಾಜ್ಯಗಳು ಸೇರಿದಂತೆ ದಕ್ಷಿಣದ ತಮಿಳುನಾಡು, ಕೇರಳ, ಆಂಧ್ರ, ಮಹಾರಾಷ್ಟ್ರದಿಂದಲೂ ಪೋಷಕರು ತಮ್ಮ ಮಕ್ಕಳು ಚಿನ್ನದ ಪದಕ ಪಡೆಯುವುದನ್ನು ಕಣ್ತುಂಬಿಕೊಳ್ಳಲು ಧಾವಿಸಿ ಬಂದಿದ್ದರು.

ಎರಡು ಚಿನ್ನದ ಪದಕ ಪಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಸಾಹಿತಿ ಸೋಮಿಶೆಟ್ಟಿ, ‘ಉತ್ತಮ ಅಂಕ ಪಡೆಯಲು ಶ್ರಮ ಪಟ್ಟಿದ್ದೆ. ಆದರೆ, ಚಿನ್ನದ ಪದಕ ನಿರೀಕ್ಷಿಸಿರಲಿಲ್ಲ. ತಂದೆ–ತಾಯಿಯ ಸಹಕಾರದಿಂದಲೇ ಇದೆಲ್ಲ ಸಾಧ್ಯವಾಗಿದೆ. ಮದ್ರಾಸ್ ಐಐಟಿಯಲ್ಲಿ ಸ್ನಾತಕೋತ್ತರ ಪದವಿ ಮಾಡುವ ಆಸೆ ಹೊಂದಿದ್ದೇನೆ’ ಎಂದರು.

ಆಂಧ್ರದಲ್ಲಿದ್ದರೂ ಕನ್ನಡದ ನಂಟು ಉಳಿಸಿಕೊಂಡಿರುವ ವಿದ್ಯಾರ್ಥಿನಿಯ ತಂದೆ ಯತೀಂದ್ರಬಾಬು, ‘ನನಗೆ ಓದಲಿಕ್ಕೆ ಆಗಲಿಲ್ಲ. ಮಗಳ ಓದಿನಲ್ಲೇ ಖುಷಿ ಕಂಡಿರುವೆ’ ಎಂದು ಸಂತಸ ಹಂಚಿಕೊಂಡರು.

ಕೊಪ್ಪಳ ನಗರದ ನಿವಾಸಿ ನಿರಂಜನ ಬಿ. ವಡಿಗೇರಿ ಸ್ನಾತಕೋತ್ತರ ಜೀವ ವಿಜ್ಞಾನ ಪದವಿಯಲ್ಲಿ ಚಿನ್ನದ ಪದಕ ಗಳಿಸಿದರು. 27 ವಿದ್ಯಾರ್ಥಿಗಳಿಗೆ 28 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಅದರಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದರು.

ರಾಷ್ಟ್ರೀಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ದಿನೇಶ್ ಮಾಹೇಶ್ವರಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ಹಣ್ಣು ವ್ಯಾಪಾರಿಯ ಮಗಳಿಗೆ ಚಿನ್ನದ ಪದಕ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವಿರುವ ಕಡಗಂಚಿಗೆ ಸಮೀಪದ ಆಳಂದ ಬಸ್ ನಿಲ್ದಾಣದಲ್ಲಿ ಹಣ್ಣಿನ ಅಂಗಡಿ ಇಟ್ಟುಕೊಂಡಿರುವ ಶಮ್ಮು ಬಾಗವಾನ್ ಅವರಿಗೆ ತಮ್ಮ ಮಗಳು ಎಂ.ಕಾಂನಲ್ಲಿ ಚಿನ್ನದ ಪದಕ ಪಡೆದಿರುವುದು ಭಾರಿ ಖುಷಿ ತಂದಿತ್ತು.

ಚಿಕ್ಕ ವ್ಯಾಪಾರದಲ್ಲೇ ಕುಟುಂಬ ಸಲಹುತ್ತಿರುವ ಶಮ್ಮು ಅವರ ಪುತ್ರಿ ಸಾನಿಯಾ ಸಮ್ರೀನ್ ಚಿನ್ನದ ಪದಕ ಪಡೆದಿದ್ದಾರೆ.

‘ಹೈಸ್ಕೂಲ್, ಪದವಿಯನ್ನು ಆಳಂದದಲ್ಲಿಯೇ ಮಾಡಿದ್ದೇನೆ. ಬಿ.ಕಾಂನಲ್ಲಿ ಪದವಿಯಲ್ಲಿ ಬೆಸ್ಟ್ ಕಾಮರ್ಸ್ ವಿದ್ಯಾರ್ಥಿನಿ ಪ್ರಶಸ್ತಿ ಪಡೆದಿದ್ದೇ ಸಿಯುಕೆಯಲ್ಲಿ ಪ್ರವೇಶ ಪಡೆಯಲು ಸ್ಫೂರ್ತಿದಾಯಕವಾಯಿತು. ಮುಂದೆ ಪ್ರಾಧ್ಯಾಪಕಿಯಾಗುವ ಆಸೆ ಹೊಂದಿದ್ದು, ಪಿಎಚ್.ಡಿ ಮಾಡುವೆ’ ಎಂದು ಸಾನಿಯಾ ಸಮ್ರೀನ್ ಅನಿಸಿಕೆ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.