
ಕಲಬುರಗಿ ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 9ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಶಿವಸಾಹಿತಿ ಸೋಮಿಶೆಟ್ಟಿ, ಸಾನಿಯಾ ಸಮ್ರೀನ್ ಅವರ ಸಂಭ್ರಮದ ಕ್ಷಣ
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ: ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ಗರಿಷ್ಠ ಅಂಕ ಗಳಿಸಿದ್ದ ವಿದ್ಯಾರ್ಥಿನಿ ಶಿವಸಾಹಿತಿ ಸೋಮಿಶೆಟ್ಟಿ 2 ಚಿನ್ನದ ಪದಕಕ್ಕೆ ಭಾಜನರಾದಂತೆ, ವೇದಿಕೆ ಎದುರು ಕುಳಿತಿದ್ದ ತಂದೆ ಯತೀಂದ್ರಬಾಬು, ತಾಯಿ ಜಾಹ್ನವಿ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು.
ಸಾಧನೆಯ ಕಿರೀಟ ತೊಟ್ಟಿದ್ದ ಶಿವಸಾಹಿತಿ ಎರಡೂ ಪದಕಗಳನ್ನು ತಂದೆ–ತಾಯಿಯ ಕೊರಳಿಗೆ ಹಾಕಿ ಭಾವುಕರಾದರು. ಇಂತಹ ಭಾವುಕ ಸನ್ನಿವೇಶಕ್ಕೆ ಶನಿವಾರ ನಡೆದ ಇಲ್ಲಿನ ಕರ್ನಾಟಕ ಕೇಂದ್ರೀಯ ವಿ.ವಿ.ಯ 9ನೇ ಘಟಿಕೋತ್ಸವ ಸಮಾರಂಭ ಸಾಕ್ಷಿಯಾಯಿತು.
ಮೈಸೂರಿನಿಂದ ಆಂಧ್ರಪ್ರದೇಶದ ನಂದ್ಯಾಲಕ್ಕೆ ವಲಸೆಹೋಗಿದ್ದ ಯತೀಂದ್ರಬಾಬು ಅವರಿಗೆ ಮಗಳು ಇಡೀ ವಿಶ್ವವಿದ್ಯಾಲಯಕ್ಕೆ ಟಾಪರ್ ಆಗಿ ಹೊರಹೊಮ್ಮುವ ವಿಶ್ವಾಸವಿರಲಿಲ್ಲ. ಕನಸು ನನಸಾದ ಗಳಿಗೆಯಿಂದಲೇ ಮಗಳ ಸಾಧನೆಯನ್ನು ಕಣ್ತುಂಬಿಕೊಳ್ಳುತ್ತಾ ದಂಪತಿ ಕಣ್ಣೀರಾದರು.
ಭಿನ್ನ ಉಡುಪು, ಭಾಷೆಗಳ ಕಲರವದೊಂದಿಗೆ ಮಿನಿ ಭಾರತದಂತೆ ಘಟಿಕೋತ್ಸವ ಕಂಡುಬಂತು. ಉತ್ತರ, ಈಶಾನ್ಯ ರಾಜ್ಯಗಳು ಸೇರಿದಂತೆ ದಕ್ಷಿಣದ ತಮಿಳುನಾಡು, ಕೇರಳ, ಆಂಧ್ರ, ಮಹಾರಾಷ್ಟ್ರದಿಂದಲೂ ಪೋಷಕರು ತಮ್ಮ ಮಕ್ಕಳು ಚಿನ್ನದ ಪದಕ ಪಡೆಯುವುದನ್ನು ಕಣ್ತುಂಬಿಕೊಳ್ಳಲು ಧಾವಿಸಿ ಬಂದಿದ್ದರು.
ಎರಡು ಪದಕ ಪುರಸ್ಕೃತೆ ಶಿವಸಾಹಿತಿ ಸೋಮಿಶೆಟ್ಟಿ ಬಳಿಕ, ‘ಶ್ರಮ ಪಟ್ಟಿದ್ದೆ. ಆದರೆ, ಚಿನ್ನದ ಪದಕ ನಿರೀಕ್ಷಿಸಿರಲಿಲ್ಲ. ತಂದೆ–ತಾಯಿಯ ಸಹಕಾರದಿಂದಲೇ ಇದೆಲ್ಲ ಸಾಧ್ಯವಾಗಿದೆ. ಮದ್ರಾಸ್ ಐಐಟಿಯಲ್ಲಿ ಸ್ನಾತಕೋತ್ತರ ಪದವಿ ಮಾಡುವ ಆಸೆ ಹೊಂದಿದ್ದೇನೆ’ ಎಂದರು.
ಆಂಧ್ರದಲ್ಲಿದ್ದರೂ ಕನ್ನಡದ ನಂಟು ಉಳಿಸಿಕೊಂಡಿರುವ ವಿದ್ಯಾರ್ಥಿನಿಯ ತಂದೆ ಯತೀಂದ್ರಬಾಬು, ‘ನನಗೆ ಓದಲಿಕ್ಕೆ ಆಗಲಿಲ್ಲ. ಮಗಳ ಓದಿನಲ್ಲೇ ಖುಷಿ ಕಂಡಿರುವೆ’ ಎಂದು ಸಂತಸ ಹಂಚಿಕೊಂಡರು.
ಕೊಪ್ಪಳ ನಗರದ ನಿವಾಸಿ ನಿರಂಜನ ಬಿ. ವಡಿಗೇರಿ ಸ್ನಾತಕೋತ್ತರ ಜೀವವಿಜ್ಞಾನ ಪದವಿಯಲ್ಲಿ ಚಿನ್ನದ ಪದಕ ಗಳಿಸಿದರು. 27 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಅದರಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದರು.
ರಾಷ್ಟ್ರೀಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ದಿನೇಶ್ ಮಾಹೇಶ್ವರಿ ಘಟಿಕೋತ್ಸವ ಭಾಷಣ ಮಾಡಿದರು.
ಹಣ್ಣಿನ ವ್ಯಾಪಾರಿಯ ಮಗಳಿಗೆ ಚಿನ್ನದ ಪದಕ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮೀಪವೇ ಆಳಂದ ಬಸ್ ನಿಲ್ದಾಣದಲ್ಲಿ ಹಣ್ಣಿನ ಅಂಗಡಿ ಇಟ್ಟುಕೊಂಡಿರುವ ಶಮ್ಮು ಬಾಗವಾನ್ ಅವರಿಗೆ ತಮ್ಮ ಮಗಳು ಎಂ.ಕಾಂ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವುದು ಭಾರಿ ಖುಷಿ ತಂದಿತ್ತು. ಚಿಕ್ಕ ವ್ಯಾಪಾರದಲ್ಲೇ ಕುಟುಂಬ ಸಲಹುತ್ತಿರುವ ಶಮ್ಮು ಅವರ ಪುತ್ರಿ ಸಾನಿಯಾ ಸಮ್ರೀನ್ ಚಿನ್ನದ ಪದಕ ಪಡೆದಿದ್ದಾರೆ. ‘ಆಳಂದದಲ್ಲಿಯೇ ಹೈಸ್ಕೂಲ್ ಪದವಿ ಶಿಕ್ಷಣ ಮಾಡಿದ್ದೇನೆ. ಬಿ.ಕಾಂನಲ್ಲಿ ಪದವಿಯಲ್ಲಿ ಬೆಸ್ಟ್ ವಿದ್ಯಾರ್ಥಿನಿ ಪ್ರಶಸ್ತಿ ಪಡೆದಿದ್ದೆ. ಮುಂದೆ ಪ್ರಾಧ್ಯಾಪಕಿ ಆಗುವ ಆಸೆ ಇದೆ. ಪಿಎಚ್.ಡಿ ಮಾಡುವೆ’ ಎಂದು ಸಾನಿಯಾ ಸಮ್ರೀನ್ ಅನಿಸಿಕೆ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.