ಮಂದರವಾಡ: ಜೇವರ್ಗಿ ತಾಲ್ಲೂಕಿನ ಮಂದರವಾಡ, ಕೋಬಾಳ, ಕೂಡಿ, ಕೋನ ಹಿಪ್ಪರಗಾ, ಕಲಬುರಗಿ ತಾಲ್ಲೂಕಿನ ಹಾಗರಗುಂಡಗಿ, ಸರಡಗಿ, ಫಿರೋಜಾಬಾದ್, ಸೋಮನಾಥಹಳ್ಳಿ, ಚಿತ್ತಾಪುರ ತಾಲ್ಲೂಕಿನ ಕಡಬೂರು ಗ್ರಾಮಸ್ಥರು ಹಿಂದೆ ಹಲವು ಪ್ರವಾಹಗಳನ್ನು ಕಂಡಿದ್ದಾರಾದರೂ ಈ ಬಾರಿಯ ಪ್ರವಾಹ ಅವರನ್ನು ಹೆಚ್ಚು ಘಾಸಿ ಮಾಡಿದೆ.
ಎರಡು ದಿನಗಳ ಹಿಂದೆ ಒಂದೊಂದೇ ಇಂಚು ಏರುತ್ತಾ ಬಂದ ಭೀಮಾ ನದಿಯ ಪ್ರವಾಹವು ಜನರಿಗೆ ಸಾಮಾನು ಸರಂಜಾಮುಗಳನ್ನೂ ತೆಗೆದುಕೊಳ್ಳದಂತೆ ದಿಗ್ಬಂಧನ ಹಾಕಿಬಿಟ್ಟಿತು.
ಹಲವರು ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ದೋಣಿಗಳ ಮೂಲಕ ಗ್ರಾಮದಿಂದ ಪಾರಾಗಿ ಬಂದರೆ, ಇನ್ನು ಕೆಲವರು ಎದೆಮಟ್ಟದ ನೀರಲ್ಲೇ ಗಟ್ಟಿ ಧೈರ್ಯ ಮಾಡಿಕೊಂಡು ದಡ ತಲುಪಿದರು. ಇನ್ನು ಕೆಲ ಗಟ್ಟಿಗುಂಡಿಯವರು ಏನಾದರೂ ಆಗಲಿ ಎಂದು ಗ್ರಾಮದಲ್ಲೇ ಉಳಿದರು. ಮಂದರವಾಡ, ಕೋಬಾಳ, ಕೋನ ಹಿಪ್ಪರಗಾ ಗ್ರಾಮಗಳ ಸಂತ್ರಸ್ತರಿಗೆ ಕೂಡಿ ದರ್ಗಾ ಆವರಣದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರದವರು ವ್ಯವಸ್ಥೆ ಮಾಡಿದ್ದ ಮಧ್ಯಾಹ್ನದ ಊಟ ಮಾಡುತ್ತಾ ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದ ಮಂದರವಾಡ ಗ್ರಾಮದ ಭಾಗ್ಯಶ್ರೀ ಮಾಳಬನೂರ, ಸಿದ್ದಮ್ಮ ಬಾಬಳ, ರಾಜಮಾ ಪಿಂಜಾರ, ‘ಪ್ರತಿ ಸರ್ತಿ ಪ್ರವಾಹದ ನೀರು ಬಂದಾಗಲೊಮ್ಮೆ ನಮ್ಮನ್ನು ಇಲ್ಲಿಗೆ ಕರೆತರುತ್ತಾರೆ. ಮಕ್ಕಳೊಂದಿಗೆ ಇಲ್ಲಿಗೆ ಇರಬೇಕಾಗುತ್ತದೆ. ನಮ್ಮ ಮನೆಗಳೆಲ್ಲ ಪೂರ್ತಿಯಾಗಿ ಮುಳುಗಿ ಹೋಗಿವೆ. ಏನು ಮಾಡಬೇಕೋ ತೋಚುತ್ತಿಲ್ಲ. ಇನ್ನೂ ಹಲವರು ಮಂದರವಾಡದಲ್ಲೇ ಉಳಿದುಕೊಂಡಿದ್ದಾರೆ. ಅವರ ಪರಿಸ್ಥಿತಿ ಏನಾಗಿದೆಯೋ ಏನೋ?’ ಎಂದು ಚಿಂತಿತರಾದರು.
ಶಾಲೆಯ ಆವರಣದಲ್ಲಿ ಊಟ ಮಾಡಿ ಅಲ್ಲಿಂದ ಕೂಡಿ ದರ್ಗಾದತ್ತ ಹೊರಟಿದ್ದ ಮಂದರವಾಡದ ಹಣಮಂತ ಮಾತನಾಡಿ, ‘ಮಂದರವಾಡದವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ. ದಿನ ಹೇಗೆ ಕಳೆಯಬೇಕೋ ಎಂಬುದು ಗೊತ್ತಾಗುತ್ತಿಲ್ಲ. ಮಕ್ಕಳನ್ನು ಕಟ್ಟಿಕೊಂಡು ಇರುವುದು ಕಷ್ಟದ ಕೆಲಸ. ನೆರೆ ಇಳಿದಾಗ ಮನೆಯ ಪರಿಸ್ಥಿತಿ ನೆನೆಸಿಕೊಂಡರೆ ಭಯವಾಗುತ್ತದೆ. ಬರುವ ಅವಸರದಲ್ಲಿ ಏನನ್ನೂ ತರಲಿಲ್ಲ’ ಎಂದರು.
ಮಂದರವಾಡದ ಪರಿಸ್ಥಿತಿ ಅವಲೋಕಿಸಲೆಂದು ‘ಪ್ರಜಾವಾಣಿ’ ತಂಡ ಗ್ರಾಮದತ್ತ ಹೊರಟಾಗ ಮೊದಲಿಗೆ ಕಾಣಿಸಿದ್ದು ಅಲ್ಲಲ್ಲಿ ಕಟ್ಟಿ ಹಾಕಿದ್ದ ಜಾನುವಾರುಗಳು. ಪ್ರವಾಹದಿಂದಾಗಿ ತಮ್ಮ ಜೀವನವೇ ಅನಿಶ್ಚಿತ ಪರಿಸ್ಥಿತಿಗೆ ಸಿಲುಕಿದ್ದರಿಂದ ಗ್ರಾಮಸ್ಥರು ತಮಗೆ ಸೇರಿದ ಎತ್ತು, ಆಕಳು, ಆಡುಗಳನ್ನು ರಸ್ತೆ ಬದಿಯೇ ಕಟ್ಟಿದ್ದರು. ಅವುಗಳಿಗೆ ಮೇವು ಹಾಕುವವರೂ ದಿಕ್ಕಿರಲಿಲ್ಲ.
ಎರಡು ಕಿ.ಮೀ. ದೂರದ ಕೆಸರು, ನೀರಿನಿಂದ ಕೂಡಿದ ಹಾದಿಯನ್ನು ಕ್ರಮಿಸಿದಾಗ ಗ್ರಾಮದ ಅಗಸಿಯಾಚೆಗೆ ಕಂಡ ಪರಿಸ್ಥಿತಿ ಭಯಾನಕವಾಗಿತ್ತು. ಗ್ರಾಮದ ಹೊರವಲಯದಲ್ಲಿ ತಿಪ್ಪೆಯಲ್ಲಿ ಹಾಕಿದ್ದ ಜೋಳದ ದಂಟು, ಸಗಣಿಯ ಗೊಬ್ಬರವೆಲ್ಲ ಮೇಲೆ ತೇಲುತ್ತಿತ್ತು. ಅದರಲ್ಲೇ ವೃದ್ಧರೊಬ್ಬರು ಕುಡಿಯುವ ನೀರನ್ನು ಕೊಡದಲ್ಲಿ ತುಂಬಿಕೊಳ್ಳುವ ಯತ್ನ ಮಾಡುತ್ತಿದ್ದರು.
ಊರಿನ ಹಿರಿಯರು ಅಧಿಕಾರಿಗಳು ತಕ್ಷಣ ಅಲ್ಲಿಂದ ಹೊರಟುಬರುವಂತೆ ತಿಳಿಸಿದ್ದರಿಂದ ನಮ್ಮ ಬಟ್ಟೆಗಳನ್ನೂ ತೆಗೆದುಕೊಳ್ಳದೇ ಬಂದೆವು. ಹೀಗಾಗಿ ನಮಗೆ ಸ್ನಾನವೂ ಇಲ್ಲ. ಬಟ್ಟೆ ಬದಲಾಯಿಸಲು ಸೀರೆಗಳೂ ಇಲ್ಲ ಹಾಸಿಗೆ ಹೊದಿಕೆಯೂ ಇಲ್ಲದಂತಾಗಿದೆ.ಸರಸ್ವತಿ ಮಾಳಬನೂರ ಮಂದರವಾಡ ಗ್ರಾಮಸ್ಥೆ
ಪ್ರತಿ ಸರ್ತಿ ಪ್ರವಾಹ ಬಂದಾಗಲೆಲ್ಲ ಊರಿನ 100ಕ್ಕೂ ಅಧಿಕ ಮನೆಗಳು ಮುಳುಗುತ್ತವೆ. ಶಾಲೆ ಅಂಗನವಾಡಿ ದೇವಸ್ಥಾನಗಳು ನೀರಿನಲ್ಲಿವೆ. ಊರಲ್ಲಿರುವವರಿಗೆ ರೋಗ ಬಂದರೂ ತಕ್ಷಣ ಕರೆದೊಯ್ಯಲು ಆಗಲ್ಲ ಸ್ಥಳಾಂತರವೊಂದೇ ಪರಿಹಾರ.ಖಾಜಾ ಪಟೇಲ್ ಕೋಬಾಳ ಗ್ರಾಮಸ್ಥ
ಗ್ರಾಮದಲ್ಲೇ ಉಳಿದಿರುವವರಿಗೆ ಶುದ್ಧ ಕುಡಿಯುವ ನೀರು ಆಹಾರ ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಕ್ಷಣ ಹೊರಟು ಬಂದವರಿಗೆ ವಿತರಿಸಲು 2500 ಸೀರೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ.ಫೌಜಿಯಾ ತರನ್ನುಮ್ ಬಿ. ಕಲಬುರಗಿ ಜಿಲ್ಲಾಧಿಕಾರಿ
ಸಂತ್ರಸ್ತರಿಗೆ ಬಟ್ಟೆ ವಿತರಣೆ ಇಂದು ಪ್ರವಾಹ ಬಂದ ತಕ್ಷಣ ಗ್ರಾಮಸ್ಥರು ಸುರಕ್ಷಿತ ಪ್ರದೇಶಕ್ಕೆ ಬರುವ ಧಾವಂತದಲ್ಲಿ ಅಗತ್ಯ ಬಟ್ಟೆ ಬರೆಗಳನ್ನು ತಂದಿಲ್ಲದಿರುವ ಮಾಹಿತಿ ಬಂದಿದೆ. ಸೋಮವಾರ ಕೂಡಿ ದರ್ಗಾದಲ್ಲಿರುವ ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ ಸೀರೆ ಹೊದಿಕೆಯಂತಹ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ತಿಳಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಎಲ್ಲರೂ ಮಾನವೀಯತೆಯ ನೆಲೆಯಲ್ಲಿ ಸಂತ್ರಸ್ತರೊಂದಿಗೆ ನಿಲ್ಲುವುದು ಅಗತ್ಯವಾಗಿದೆ. ಜಿಲ್ಲಾಡಳಿತವೂ ಹೆಚ್ಚು ಮುತುವರ್ಜಿ ವಹಿಸಿ ತಾಯ್ತನದ ಕಾಳಜಿಯಿಂದ ನೆರೆ ಸಂತ್ರಸ್ತರಿಗೆ ಗುಣಮಟ್ಟದ ಊಟ ಶುದ್ಧ ಕುಡಿಯುವ ನೀರು ಕಾಳಜಿ ಕೇಂದ್ರದಲ್ಲಿ ವಿದ್ಯುತ್ ವ್ಯವಸ್ಥೆ ಶುಚಿತ್ವ ಕಾಪಾಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.