ADVERTISEMENT

ರೈಲ್ವೆ ವಿಭಾಗ ರದ್ದು; ಸಚಿವರ ಪ್ರತಿಕೃತಿ ದಹನ

ಕರ್ನಾಟಕ ನವನಿರ್ಮಾಣ ಸೇನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 16:44 IST
Last Updated 21 ಮಾರ್ಚ್ 2021, 16:44 IST
ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: 2014ರಲ್ಲಿ ಕಲಬುರ್ಗಿಯಲ್ಲಿ ರೈಲ್ವೆ ವಿಭಾಗವನ್ನು ಸ್ಥಾಪಿಸುವ ಕುರಿತು ಮಾಡಿದ್ದ ಘೋಷಣೆಯನ್ನು ರದ್ದುಗೊಳಿಸಿದ ಕ್ರಮವನ್ನು ಖಂಡಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ರೈಲ್ವೆ ಸಚಿವ ಪಿಯುಶ್ ಗೋಯಲ್ ಅವರ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ‘ಸೊಲ್ಲಾಪುರ ಮತ್ತು ಸಿಕಂದರಾಬಾದ ರೈಲ್ವೆ ವಿಭಾಗಗಳಲ್ಲಿ ಹಂಚಿ ಹೋಗಿರುವ ಕಲಬುರ್ಗಿ ವಿಭಾಗ ಈ ಎರಡೂ ವಿಭಾಗಗಳಿಗೆ ಅತ್ಯಂತ ಹೆಚ್ಚು ಆದಾಯ ತಂದುಕೊಡುವ ಕೇಂದ್ರ ಸ್ಥಾನವೂ ಹೌದು. ಕಲ್ಯಾಣ ಕರ್ನಾಟಕದ ಪ್ರಮುಖ ಆರ್ಥಿಕ ಮತ್ತು ವಾಣಿಜ್ಯ ನಗರಿಯಾಗಿರುವ ಕಲಬುರ್ಗಿಗೆ ತನ್ನದೇ ಆದ ಸ್ವತಂತ್ರ ಸಾಮರ್ಥ್ಯವಿದೆ‌’ ಎಂದರು.

‘ತೊಗರಿ, ಸಿಮೆಂಟ್ ಸೇರಿದಂತೆ ಹಲವು ವಾಣಿಜ್ಯ ವ್ಯಾಪಾರ ಮಾರುಕಟ್ಟೆಯ ಪ್ರಮುಖ ಸ್ಥಾನವಾದ ಕಲಬುರ್ಗಿಗೆ ಸಂವಿಧಾನದ 371 (ಜೆ) ವಿಧಿ ಈಗಾಗಲೇ ನೀಡಲಾಗಿದ್ದರೂ ಸರ್ಕಾರ ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸ್ಥಾಪನೆ ಪ್ರಕ್ರಿಯೆ ಕೈತಪ್ಪಿದೆ’ ಎಂದರು.

ADVERTISEMENT

‘ರೈಲ್ವೆ ವಲಯ ಕಚೇರಿಗೆ ಅಡಿಗಲ್ಲು ಸಮಾರಂಭ ಮಾಡಿದ ನಂತರವೂ ಅದನ್ನು ರದ್ದುಪಡಿಸಿದ್ದು ಯಾಕೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಹಿಂದುಳಿದ ಹೆಸರಿನ ಹಣೆ ಪಟ್ಟಿಯಿಂದ ಈ ಭಾಗ ಹೊರತರುವ ಬದಲು ಹಣೆ ಪಟ್ಟಿಯ ಮೇಲೆ ಮೊಳೆ ಹೊಡೆದು ಶಾಶ್ವತ ಹಿಂದುಳಿಯುವಂತೆ ಮಾಡುತ್ತಿರುವ ಇಂಥಹ ರಾಜಕೀಯ ವ್ಯವಸ್ಥೆಯನ್ನು ನಾವು ಧಿಕ್ಕರಿಸುತ್ತೇವೆ’ ಎಂದರು.

‘ಸ್ವಾರ್ಥ ರಾಜಕೀಯ ಕಾರಣಗಳಿಗಾಗಿ ಈ ಯೋಜನೆ ಕೈಬಿಡಲು ನಾವು ಬಿಡುವುದಿಲ್ಲ. ಕೂಡಲೇ ರೈಲ್ವೆ ವಲಯ ಕಲಬುರ್ಗಿಯಲ್ಲಿಯೇ ಸ್ಥಾಪಿಸಲು ಒತ್ತಾಯಿಸುತ್ತೇವೆ. ಒಂದು ತಿಂಗಳೊಳಗಾಗಿ ರದ್ದು ಮಾಡಿರುವ ಆದೇಶ ಮರಳಿ ಪಡೆಯಬೇಕು’ ಎಂದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ದೇಗಾಂವ, ಮುಖಂಡರಾದ ಪ್ರಶಾಂತ್ ಮಠಪತಿ, ದಿಲೀಪ್ ಕಿರಸಾಳಗಿ, ಸಂತೋಷ್ ಪಾಟೀಲ, ಮಹಾಂತೇಶ ಹರವಾಳ, ಋಷಿ ಬೆನಕನಹಳ್ಳಿ, ಕವಿತಾ ದೇಗಾಂವ, ಶ್ರಿಶೈಲ ಕನ್ನಡಗಿ, ರವಿಂದ್ರ ಜಮಾದಾರ, ಭೀಮಾಶಂಕರ ಕೊರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.