ADVERTISEMENT

PSI ಹಗರಣ- ಸಿಐಡಿ ತನಿಖಾಧಿಕಾರಿಗೆ ₹ 76 ಲಕ್ಷ ಲಂಚ ಕೊಟ್ಟಿದ್ದೇನೆಂದ RD ಪಾಟೀಲ!

ಮತ್ತೊಂದು ತಿರುವು ಪಡೆದ ಪಿಎಸ್ಐ ಅಕ್ರಮ ನೇಮಕಾತಿ ಹಗರಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 5:47 IST
Last Updated 24 ಜನವರಿ 2023, 5:47 IST
 RD ಪಾಟೀಲ
 RD ಪಾಟೀಲ   

ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಿಂದ ಪಾರು ಮಾಡಲು ತಾನು ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರಿಗೆ ₹ 76 ಲಕ್ಷ ನೀಡಿರುವುದಾಗಿ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಕರ್ನಾಟಕ ಲೋಕಾಯುಕ್ತರಿಗೆ ದೂರು ನೀಡಿದ್ದಾನೆ.

ದೂರಿನೊಂದಿಗೆ 8.4 ನಿಮಿಷ ಅವಧಿಯ ಆಡಿಯೊದ ಪೆನ್ ಡ್ರೈವ್ ದಾಖಲೆಯಾಗಿ ನೀಡಿದ್ದು, ಈ ಸಂಬಂದ 'ಆರ್.ಡಿ. ಪಾಟೀಲ ಯುವ ಬ್ರಿಗೇಡ್' ಹೆಸರಿನ ಫೇಸ್‌ಬುಕ್‌ ಮೇಲೆ ಪೇಜ್ ಮೂಲಕ ಪಾಟೀಲ ಮಾತನಾಡಿರುವ ಆಡಿಯೊ ಸೋಮವಾರ ರಾತ್ರಿ ಅಪ್ ಲೋಡ್ ಆಗಿದೆ.

'ಶಂಕರಗೌಡ ಪಾಟೀಲ ಅವರು ಪ್ರಕರಣ ಮುಂದುವರೆಸದಿರಲು ನನಗೆ ₹ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ನನ್ನಿಂದ ಅಷ್ಟು ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ. ಬೇಕಿದ್ದರೆ ₹ 76 ಲಕ್ಷ ಹಣವನ್ನು ಕೊಡುತ್ತೇನೆ ಎಂದು ಹೇಳಿ ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ಹಣ ಡ್ರಾ ಮಾಡಿಸಿಕೊಂಡು ನನ್ನ ಅಳಿಯ ಶ್ರೀಕಾಂತನ ಮೂಲಕ ಅವರಿಗೆ ತಲುಪಿಸಿದ್ದೆ. ನಾನು ಜಾಮೀನು ಪಡೆದು ಹೊರ ಬಂದ ಬಳಿಕವೂ ಶಂಕರಗೌಡ ಹಾಗೂ ಅವರ ಅಧೀನ ಸಿಬ್ಬಂದಿ‌ಯು ಮನೆಗೆ ಬಂದು ಉಳಿದ ಹಣ ನೀಡಿವಂತೆ ಕಿರುಕುಳ ನೀಡಿದ್ದಾರೆ' ಎಂದು ಫೇಸ್‌ಬುಕ್‌ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ADVERTISEMENT

ಈ ಆರೋಪಗಳನ್ನು ಶಂಕರಗೌಡ ಪಾಟೀಲ ಅವರು ಅಲ್ಲಗಳೆದಿದ್ದಾರೆ‌.

ಈ ಕುರಿತು 'ಪ್ರಜಾವಾಣಿ'ಗೆ ಸ್ಪಷ್ಟನೆ ನೀಡಿರುವ ಶಂಕರಗೌಡ, 'ಆರ್.ಡಿ. ಪಾಟೀಲನೊಂದಿಗೆ ನಾನು ಮಾತನಾಡಿರುವುದು ಎನ್ನಲಾದ ಘಟನೆ ನಡೆದಿದ್ದು ಕಳೆದ ಜುಲೈನಲ್ಲಿ. ಈ ಆರೋಪದ ಬಗ್ಗೆ ಎಸಿಬಿಯವರೂ ತನಿಖೆ ನಡೆಸಿ ಇದರಲ್ಲಿ ಏನೂ ಹುರುಳಿಲ್ಲ ಎಂದು ಕೈಬಿಟ್ಟಿದ್ದಾರೆ. ತನಿಖಾಧಿಕಾರಿಗಳ‌ ನೈತಿಕತೆಯನ್ನು ಕುಗ್ಗಿಸಲು ಆರ್.ಡಿ. ಪಾಟೀಲ ಹೂಡಿರುವ ತಂತ್ರಗಳಲ್ಲಿ ಇದೂ ಒಂದು. ನನಗೆ ಹಲವು ಬಾರಿ ತಮ್ಮ ಹಿಂಬಾಲಕರನ್ನು ಛೂಬಿಟ್ಟು ಹಲ್ಲೆ ಮಾಡಲೂ ಯತ್ನಿಸಿದ್ದ. ಇದೆಲ್ಲವನ್ನೂ ಎದುರಿಸಿ ಪ್ರಕರಣವನ್ನು ಒಂದು ಹಂತಕ್ಕೆ ತಂದಿರುವ ತೃಪ್ತಿ ನಮಗಿದೆ' ಎಂದಿದ್ದಾರೆ.

ಆಡಿಯೊದಲ್ಲಿ ಏನಿದೆ? ಎಂಟು ನಿಮಿಷ ನಾಲ್ಕು ಸೆಕೆಂಡ್ ಅವಧಿಯ ವಿಡಿಯೊದಲ್ಲಿ ಆರ್. ಡಿ. ಪಾಟೀಲ ಮಾತು ಮಾತ್ರ ಸ್ಪಷ್ಟವಾಗಿ ಕೇಳಿಸುತ್ತದೆ. ಎದುರಿಗೆ ಮಾತನಾಡಿರುವ ವ್ಯಕ್ತಿಯ ಧ್ವನಿ ಅಸ್ಪಷ್ಟವಾಗಿದೆ. ಏನಾದರೂ ಮಾಡಿ, ನನಗೆ ಹೊರಗೆ ಹೋಗುವಂತೆ ‌ಮಾಡಿ. ನನಗೆ ಪ್ರತಿ ದಿನವೂ ಮಹತ್ವದ ದಿನವಾಗಿದೆ. ನನಗೆ ಲಂಡನ್ ನಲ್ಲಿ 'ಭಕ್ತ'ರೊಬ್ಬರು ಇದ್ದಾರೆ. ಅವರಿಂದ ಹಣದ ವ್ಯವಸ್ಥೆ ‌ಮಾಡುತ್ತೇನೆ. ಇನ್ನಿಬ್ಬರು ತನಿಖಾಧಿಕಾರಿಗಳಾದ ಪ್ರಕಾಶ ರಾಠೋಡ, ವೀರೇಂದ್ರ ಕುಮಾರ್ ಅವರಿಗೂ ಹಣ ನೀಡುತ್ತೇನೆ ಎಂದಿದ್ದಾನೆ.

ದೂರು ಬಂದಿಲ್ಲ: ದೂರಿನ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯೆ ‌ನೀಡಿದ ಕಲಬುರಗಿ ಲೋಕಾಯುಕ್ತ ಎಸ್.ಪಿ.‌ ಎ.ಆರ್. ಕರ್ನೂಲ್, 'ಆರ್.ಡಿ. ಪಾಟೀಲ ದೂರನ್ನು ‌ಲೋಕಾಯುಕ್ತರಿಗೆ ಕಳುಹಿಸಿರುವ ಬಗ್ಗೆ ಮಾಹಿತಿ ಇಲ್ಲ. ಒಮ್ಮೊಮ್ಮೆ ಲೋಕಾಯುಕ್ತರೇ ಪ್ರಕರಣದ ತನಿಖೆ ನಡೆಸುತ್ತಾರೆ. ಅಗತ್ಯ ಬಿದ್ದರೆ ನಮಗೂ ಹಸ್ತಾಂತರಿಸುತ್ತಾರೆ' ಎಂದರು.

ಆರ್.ಡಿ. ಪಾಟೀಲ ಸಿಐಡಿ ಅಧಿಕಾರಿಗಳ ಕೈಗೆ ಸಿಗದೇ ಪರಾರಿಯಾಗಿದ್ದ ‌ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸೋಮವಾರ ನ್ಯಾಯಾಲಯಕ್ಕೆ ಶರಣಾಗಿದ್ದ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.