ADVERTISEMENT

ಸ್ವಾತಂತ್ರ್ಯ ಹೋರಾಟದ ಹುಲಿ ಚನ್ನಮ್ಮ: ಸಾಹಿತಿ ಪ್ರೊ.ನೀಲಾಂಬಿಕಾ

ವೀರಮಾತೆ ಕಿತ್ತೂರು ರಾಣಿ‌ ಚನ್ನಮ್ಮ‌ ಜಯಂತ್ಯುತ್ಸವ ಕಾರ್ಯಕ್ರಮ; ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 6:51 IST
Last Updated 24 ಅಕ್ಟೋಬರ್ 2025, 6:51 IST
ಕಲಬುರಗಿಯ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಕಲಬುರಗಿಯ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಕಿತ್ತೂರು ಚನ್ನಮ್ಮ ಸ್ವಾತಂತ್ರ್ಯದ ಹೋರಾಟದ ಬೆಳ್ಳಿಚುಕ್ಕಿ. ಧೈರ್ಯ, ವೀರತನ ಅವರ ಲಕ್ಷಣಗಳಾಗಿದ್ದವು. ಅವರನ್ನು ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟದ ಹುಲಿ’ ಎಂದು ರಾಜ್ಯ ಸರ್ಕಾರ ಘೋಷಿಸಬೇಕು’ ಎಂದು ಸಾಹಿತಿ ಪ್ರೊ.ನೀಲಾಂಬಿಕಾ ಪೊಲೀಸ್‌ ಪಾಟೀಲ ಒತ್ತಾಯಿಸಿದರು.

ನಗರದ‌ ಡಾ.ಎಸ್.ಎಂ.ಪಂಡಿತ್‌ ರಂಗ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ವೀರಮಾತೆ ಕಿತ್ತೂರು ರಾಣಿ‌ ಚನ್ನಮ್ಮ‌ ಜಯಂತಿ‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಇತಿಹಾಸದಲ್ಲಿ ಕನ್ನಡ ನಾಡಿನ ಮಹಿಳೆಯರೇ ಧೈರ್ಯದಿಂದ ಹೆಚ್ಚು ಮಿಂಚಿದ್ದಾರೆ. ಅದಕ್ಕೆ ಬಸವಣ್ಣನವರ ತತ್ವ ಕಾರಣ. ಕೆಳದಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವ, ಕಲ್ಯಾಣ ಭಾಗದಲ್ಲಿ ರಜಾಕಾರರ ಚಳವಳಿಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಹೋರಾಡಿದ್ದರು. ಸ್ವಾತಂತ್ರ್ಯ, ಸಮಾನತೆ ಸೇರಿದಂತೆ ಏನೊಂದೂ ಇಲ್ಲದ ಕಾಲದಲ್ಲೇ ಅವರೆಲ್ಲ ಸಾಧನೆ ತೋರಿದ್ದಾರೆ. ಆದರೆ, ಇಂದಿನ ಮಹಿಳೆಯರು ರೇಷ್ಮೆ ಸೀರೆ, ಫೋಟೊ, ಪೇಪರ್‌, ಬೆಳ್ಳಿ–ಬಂಗಾರಕ್ಕೆ ಸೀಮಿತರಾಗಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಚನ್ನಮ್ಮ 15ನೇ ವಯಸ್ಸಿನಲ್ಲೇ ಹುಲಿ ಬೇಟೆಯಾಡುತ್ತಿದ್ದರಂತೆ. ಕುದುರೆ ಸವಾರಿ, ಕತ್ತಿ ವರಸೆ ಬಲ್ಲವರಾಗಿದ್ದರು. ಚನ್ನಮ್ಮ ಅಂಥ ಸಾಧನೆ ಮಾಡಿದ್ದರಿಂದ ಜಾತ್ಯತೀತವಾಗಿ ರಾಜ್ಯದಲ್ಲಿ ಅವರನ್ನು ಸ್ಮರಿಸಲಾಗುತ್ತಿದೆ. ಖಡ್ಗದ ಬದಲು ಮೊಬೈಲ್‌ ಫೋನ್‌ ಹಿಡಿದು ಏನು ಸಾಧನೆ ಮಾಡಿದ್ದೇವೆ ಎಂಬುದನ್ನು ನಾವೆಲ್ಲ ಮಹಿಳೆಯರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

‘ಕಿತ್ತೂರು ಸಂಸ್ಥಾನದ ರಕ್ಷಣೆ ಹಾಗೂ ಬ್ರಿಟಿಷರ ವಿರುದ್ಧ ಕೆಚ್ಚದೆಯಿಂದ ಹೋರಾಡಿದ ರಾಣಿ ಚನ್ನಮ್ಮ ಕನ್ನಡ ನಾಡಿನ ತಾಯಿ. ಅವರನ್ನು ಪಂಚಮಸಾಲಿ ಜಾತಿಗೆ ಸೀಮಿತಗೊಳಿಸಬಾರದು. ಅವರನ್ನು ಎಲ್ಲರೂ ಮುಕ್ತ ಮನದಿಂದ ಸ್ವೀಕರಿಸಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ, ‘ಹೆಣ್ಣು ಮಕ್ಕಳು ಬರೀ ಭೋಗದ ವಸ್ತು, ಅವರು ಮನೆಗಳಲ್ಲೇ ಇರಬೇಕು ಎಂಬಂಥ ಕಾಲವದು. ಅಂಥ ಸಂದರ್ಭದಲ್ಲಿ ಚಿಕ್ಕಂದಿನಲ್ಲೇ ಕುದುರೆ ಸವಾರಿ, ಕತ್ತಿ ವರಸೆ ಕಲಿತಿದ್ದರು. ಕಿತ್ತೂರು ರಾಣಿಯಾಗಿ ಚನ್ನಮ್ಮ ದಿಟ್ಟತನದಿಂದ ಬ್ರಿಟಿಷರ ವಿರುದ್ಧ ಹೋರಾಡಿ, ಗೆದ್ದಿದ್ದು ಮರೆಯಲಾರದಂಥ ಕ್ಷಣ’ ಎಂದರು.

ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಸಮಿತಿ ಅಧ್ಯಕ್ಷೆ ಮಾಲಾ ಕಣ್ಣಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಜಗದೀಶ್ವರಿ ನಾಸಿ ಸ್ವಾಗತಿಸಿದರು. ಕೆಕೆಆರ್‌ಟಿಸಿ ಅಧ್ಯಕ್ಷ  ಅರುಣಕುಮಾರ ಎಂ.ಪಾಟೀಲ, ಜಿಲ್ಲಾಧಿಕಾರಿ‌ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ್ ಉಮಾಕಾಂತ‌ ಹೊಳ್ಳ, ಜಿಲ್ಲಾಧಿಕಾರಿ‌ ಕಚೇರಿ ಚುನಾವಣಾ ತಹಶೀಲ್ದಾರ್‌ ಪಂಪಯ್ಯ, ಜ್ಯೋತಿ ಅರುಣಕುಮಾರ ಪಾಟೀಲ, ಸಾಹಿತಿ‌ ಸಮಾಜ‌ ಸೇವಕಿ ಜಯಶ್ರೀ ಮತ್ತಿಮಡು, ಜಾಹ್ನವಿ ಶರಣು ಮೋದಿ, ಜ್ಯೋತಿ ಮರಗೋಳ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಚನ್ನಮ್ಮ ಜಯಂತ್ಯುತ್ಸವದ ಮೆರವಣಿಯಲ್ಲಿ ಡೊಳ್ಳು ವಾಹನದ ನೋಟ ‍–ಪ್ರಜಾವಾಣಿ ಚಿತ್ರ

Highlights -

ಗಾಂಧೀಜಿ ಸೇರಿದಂತೆ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವೆಲ್ಲ ಸ್ಮರಿಸುತ್ತೇವೆ. ಅದಕ್ಕೂ ಪೂರ್ವದಲ್ಲೇ ಬ್ರಿಟಿಷರ ವಿರುದ್ಧ ಹೋರಾಡಿದ ಚನ್ನಮ್ಮನ ಮೂರ್ತಿ ಸ್ಥಾಪನೆ ಅತಿಅಗತ್ಯ
ಅಲ್ಲಮಪ್ರಭು ಪಾಟೀಲ ಶಾಸಕ
ಸೂರ್ಯ ಚಂದ್ರ ಇರುವ ತನಕ ರಾಣಿ ಚನ್ನಮ್ಮ ಅಮರ. ಇಂದಿನ ಮಕ್ಕಳು ಜ್ಞಾನದೊಂದಿಗೆ ಚನ್ನಮ್ಮನಂಥ ಸಾಹಸ ಮೈಗೂಡಿಸಿಕೊಳ್ಳಬೇಕು
ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ
ಎಸ್‌ವಿಪಿ ವೃತ್ತದಲ್ಲಿ ಪಟೇಲರ 15ಅಡಿ ಮೂರ್ತಿ ಸ್ಥಾಪನೆ ಹಾಗೂ ನಗರದಲ್ಲಿ ಚನ್ನಮ್ಮ ಮೂರ್ತಿ ಪ್ರತಿಷ್ಥಾಪನೆಗೆ ಸರ್ಕಾರ ಕ್ರಮವಹಿಸಬೇಕು
ಶಶೀಲ್‌ ನಮೋಶಿ ವಿಧಾನ ಪರಿಷತ್ ಸದಸ್ಯ

ಜನಪ್ರತಿನಿಧಿಗಳ ಗೈರಿಗೆ ಅಸಮಾಧಾನ

ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಯಿಂದ ನಡೆದ ಚನ್ನಮ್ಮ ಜಯಂತ್ಯುತ್ಸವದಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ಗೈರು ಕಾಡಿತು. ಸಮುದಾಯದ ಜನರ ಕೊರತೆಯೂ ಕಾಡಿತು. ಈ ಕುರಿತು ಪ್ರಸ್ತಾಪಿಸಿದ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ‘ಅಧಿಕಾರಕ್ಕಾಗಿ ಹಾತೊರೆಯುವ ಜನಪ್ರತಿನಿಧಿಗಳು ಇಂಥ ಜಯಂತ್ಯುತ್ಸವಗಳಿಗೆ ಯಾಕೆ ಬರಲ್ಲ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ‘ಅಧಿಕಾರಿಗಳು ಇಂಥ ಕಾರ್ಯಕ್ರಮಗಳನ್ನು ಅಲಕ್ಷ್ಯ ಮಾಡಬಾರದು. ಈ ಕುರಿತು ಜಿಲ್ಲಾಧಿಕಾರಿ ಜೊತೆಗೆ ಮಾತನಾಡುವೆ’ ಎಂದರು. ಉಪನ್ಯಾಸ ನೀಡಿದ ನೀಲಾಂಬಿಕಾ ಪೊಲೀಸ್‌ಪಾಟೀಲ ‘ಒಂದೆಡೆ ಸರ್ಕಾರದೊಂದಿಗೆ ಕುಸ್ತಿ ಆಡಿ ಜಯಂತಿಗಳನ್ನು ಆಚರಿಸಲು ಒತ್ತಡ ಹೇರಲಾಗುತ್ತದೆ. ಮತ್ತೊಂದೆಡೆ ಶಿಷ್ಟಾಚಾರ ಶಿಸ್ತು ಇಲ್ಲದೇ ಕಾರ್ಯಕ್ರಮ ನಡೆಸಲಾಗುತ್ತದೆ. ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ಬಂದು ಹೋಗುತ್ತಾರೆ. ಮಕ್ಕಳನ್ನು ಇಂಥ ಕಾರ್ಯಕ್ರಮಗಳಿಗೆ ಬಳಸದಂತೆ ನಿಯಮವಿದ್ದರೂ ಬಳಸಿರುವುದು ದುರಂತ’ ಎಂದು ಟೀಕಿಸಿದರು.

ಮೆರವಣಿಗೆಗೆ ಕಲಾತಂಡಗಳ ಮೆರುಗು

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸರ್ದಾರ್‌ ವಲ್ಲಭಭಾಯಿ ಪಟೇಲ್ ವೃತ್ತದಿಂದ ಪಂಡಿತ್ ರಂಗಮಂದಿರ ತನಕ ರಾಣಿ ಚನ್ನಮ್ಮ ಚಿತ್ರದ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಪಟೇಲ್‌ ವೃತ್ತದಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್‌ ನಮೋಶಿ ಮೆರವಣಿಗೆಗೆ ಚಾಲನೆ ನೀಡಿದರು. ಮಹಿಳಾ ಹಲಗಿ ಕಲಾ ತಂಡ ಡೊಳ್ಳು ಕುಣಿತ ಕಲಾವಿದರು ಮೆರವಣಿಗೆ ಅಂದ ಹೆಚ್ಚಿಸಿದರು. ಮಾಲಾ ಕಣ್ಣಿ ಸಹಿತ ಅನೇಕ ಮಕ್ಕಳು ಚನ್ನಮ್ಮ ವೇಷಭೂಷಣ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.