ADVERTISEMENT

60 ವಸಂತ ಪೂರೈಸಿದ ಕೆಕೆಸಿಸಿಐ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:36 IST
Last Updated 17 ಜನವರಿ 2026, 6:36 IST
ಶರಣಬಸಪ್ಪ ಪಪ್ಪಾ
ಶರಣಬಸಪ್ಪ ಪಪ್ಪಾ   

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವ್ಯಾಪಾರ, ಕೈಗಾರಿಕೆ ಹಾಗೂ ಉದ್ಯಮಿಗಳ ಹಿತಾಸಕ್ತಿಯನ್ನು ಕಾಪಾಡುತ್ತಾ, ಸಮಗ್ರ ಪ್ರಾದೇಶಿಕ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಆರಂಭವಾಗಿ ಇದೇ 17ಕ್ಕೆ 60 ವರ್ಷಗಳಾಗಲಿವೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ‘1966ರ ಜನವರಿ 17ರಂದು ಸಂಸ್ಥೆಯ ಸ್ಥಾಪನೆಯಾಗಿ, ಈ ಪ್ರದೇಶದ ಆರ್ಥಿಕ ಪ್ರಗತಿಗೆ ಬಲಿಷ್ಠ ಅಡಿಪಾಯ ಹಾಕಲಾಗಿದೆ. ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದ ದೂರದೃಷ್ಟಿಯುಳ್ಳ ನಾಯಕರು ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ಕೆಕೆಸಿಸಿಐ ತನ್ನ ಸ್ಥಾಪಕರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತದೆ. ಸಂಸ್ಥೆಯ ಆರಂಭಿಕ ಹಂತದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ್ದ ಕೆಕೆಸಿಸಿಐ, 1978–80ರ ಅವಧಿಯಲ್ಲಿ ಕಲಬುರಗಿಯ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ತನ್ನದೇ ಭವನವನ್ನು ನಿರ್ಮಿಸಿತು. ಇಂದು ಸಂಸ್ಥೆಗೆ 4,000ಕ್ಕೂ ಹೆಚ್ಚು ಸದಸ್ಯರ ಬಲಿಷ್ಠ ಸದಸ್ಯತ್ವವಿದ್ದು, ಕರ್ನಾಟಕದ ಪ್ರಮುಖ ವಾಣಿಜ್ಯ ಮಂಡಳಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ’ ಎಂದಿದ್ದಾರೆ.

‘ಕಲ್ಯಾಣ ಕರ್ನಾಟಕಕ್ಕೆ 371 (ಎ) ವಿಶೇಷ ಸ್ಥಾನಮಾನ ದೊರಕಿಸುವ ಹೋರಾಟದಲ್ಲಿ ಕೆಕೆಸಿಸಿಐ ಪ್ರಮುಖ ಪಾತ್ರವಹಿಸಿದೆ. ಇದರಿಂದ ಶಿಕ್ಷಣ, ಉದ್ಯೋಗ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳು ಲಭಿಸಿವೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶಾಶ್ವತ ಘಟಕವನ್ನು ಕಲಬುರಗಿಗೆ ತರಲು ಕೆಕೆಸಿಸಿಐ ಮಹತ್ವದ ಪಾತ್ರ ವಹಿಸಿದೆ. ಪಿಎಂ ಮಿತ್ರ ಯೋಜನೆಯಡಿ ಮೆಗಾ ಟೆಕ್ಸ್ಟೈಲ್ ಪಾರ್ಕ್ ಕಲಬುರಗಿಗೆ ತರಲು ಪ್ರಮುಖ ಪಾತ್ರ ವಹಿಸಿದೆ. 2017=18ರಲ್ಲಿ ಸ್ವರ್ಣ ಮಹೋತ್ಸವವನ್ನು ಭವ್ಯವಾಗಿ ಆಚರಿಸಿದ ಕೆಕೆಸಿಸಿಐ, ಮುಂದಿನ ದಿನಗಳಲ್ಲಿ ಪ್ರದರ್ಶನ ಮತ್ತು ತರಬೇತಿ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಹೊಂದಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.