ADVERTISEMENT

ವಸತಿ ಶಾಲೆ ನಿರ್ಮಾಣ | ಗಮನಕ್ಕೂ ತರದೆ ₹ 17 ಕೋಟಿ ಬಿಡುಗಡೆ: ಬಿ.ಆರ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 11:51 IST
Last Updated 22 ಜೂನ್ 2025, 11:51 IST
   

ಕಲಬುರಗಿ: ‘ಆಳಂದ ಕ್ಷೇತ್ರದಲ್ಲಿ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆ ನಿರ್ಮಾಣಕ್ಕೆ ಈಗಾಗಲೇ ಕೆಕೆಆರ್‌ಡಿಬಿ ಅನುದಾನ ಮಂಜೂರು ಮಾಡಿದೆ. ನಾನು ಬೇಡಿಕೆ ಇರಿಸದೆ ಇದ್ದರೂ, ನನ್ನ ಗಮನಕ್ಕೂ ತರದೆ ಅಲ್ಪಸಂಖ್ಯಾತರ ಇಲಾಖೆಯು ಅದೇ ವಸತಿ ಶಾಲೆಗೆ ₹ 17 ಕೋಟಿ ಕೊಟ್ಟಿದೆ’ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್. ಪಾಟೀಲ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಅನುದಾನ ಮಂಜೂರಾದ ವಸತಿ ಶಾಲೆಗೆ ಅಲ್ಪಸಂಖ್ಯಾತರ ಇಲಾಖೆ ಮತ್ತೆ ₹ 17 ಕೋಟಿ ಬಿಡುಗಡೆ ಮಾಡಿ ಭೂಮಿಪೂಜೆಯನ್ನೂ ನೆರವೇರಿಸಿದೆ. ಇದ್ಯಾವುದೂ ನನಗೆ ಗೊತ್ತೇ ಇಲ್ಲ. ಅಲ್ಪಸಂಖ್ಯಾತರ ಇಲಾಖೆಯು ಈ ಬಗ್ಗೆ ಮುಂಚಿತವಾಗಿ ಹೇಳಿದ್ದರೆ ಕೆಕೆಆರ್‌ಡಿಬಿ ಅನುದಾನವನ್ನು ಬೇರೆ ಕಡೆ ಖರ್ಚು ಮಾಡುತ್ತಿದ್ದೆವು. ನನ್ನ ಗಮನಕ್ಕೆ ತರದೆ ಈ ರೀತಿ ಮಾಡಿದರೆ ಕಾಮಗಾರಿ ಡುಪ್ಲಿಕೇಶನ್ ಆಗುತ್ತದೆ’ ಎಂದು ಕಿಡಿಕಾರಿದರು.

‘ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿಗೆ ತೆರಳಿದ್ದರು. ಸಾರ್ವಜನಿಕರ ಬಗ್ಗೆ ಕಳಕಳಿ ಇರಿಸಿಕೊಂಡು, ‘ತಾಲ್ಲೂಕು ಕಚೇರಿಯಲ್ಲಿ ಯಾವ ಕೆಲಸಕ್ಕೆ ಎಷ್ಟೆಷ್ಟು ಹಣ ಕೊಡಬೇಕು ಎಂದು ರೇಟ್‌ಬೋರ್ಡ್‌ ಹಾಕಿ’ ಎಂದು ಹೇಳಿಕೆ ಕೊಟ್ಟಿದ್ದರು. ನಾನೂ ಅದೇ ಧಾಟಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಬಗ್ಗೆ ಸಚಿವ ಜಮೀರ್ ಅಹಮದ್ ಖಾನ್ ಅವರ ಖಾಸಗಿ ಪಿ.ಎ. ಬಳಿ ಮಾತನಾಡಿದ್ದೇನೆ. ಯಾವುದೇ ವ್ಯಕ್ತಿಯ ವಿರುದ್ಧ ಮಾತನಾಡಿಲ್ಲ. ಆದರೂ ನನ್ನ ಮಾತನ್ನು ಏಕೆ ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ? ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಕೃಷ್ಣ ಬೈರೇಗೌಡರು ತಮ್ಮದೇ ಖಾತೆಯ ಬಗ್ಗೆ ಮಾತನಾಡಿದ್ದಾರಲ್ಲವೆ’ ಎಂದು ಪ್ರಶ್ನಿಸಿದರು.

ADVERTISEMENT

‘ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಗೆ ಖಂಡಿಸುವ ಸ್ವಾತಂತ್ರ್ಯ ಇದೆ. ನಾನು ಅದಕ್ಕೆ ಅಡ್ಡಿಪಡಿಸಲ್ಲ. ಪ್ರಜಾಪ್ರಭುತ್ವದಲ್ಲಿ ಸ್ವಾಗತ, ಖಂಡನೆ ಸಹಜ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.