ADVERTISEMENT

ಕಾಮಗಾರಿ ಬಗೆಗಿನ ಮನೋಭಾವ ಬದಲಿಸಿಕೊಳ್ಳಿ

ಕೆಕೆಆರ್‌ಡಿಬಿ ಕಾಮಗಾರಿಗಳ ಸ್ಥಿತಿ–ಗತಿ ಕಂಡು ಬೇಸರಗೊಂಡ ಸುಬೋಧ ಯಾದವ; ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 3:12 IST
Last Updated 20 ಅಕ್ಟೋಬರ್ 2019, 3:12 IST
ಕಲಬುರ್ಗಿಯಲ್ಲಿ ಶನಿವಾರ ನಡೆದ ಕೆಕೆಆರ್‌ಡಿಬಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಏಜೆನ್ಸಿಗಳ ಪ್ರತಿನಿಧಿಗಳು
ಕಲಬುರ್ಗಿಯಲ್ಲಿ ಶನಿವಾರ ನಡೆದ ಕೆಕೆಆರ್‌ಡಿಬಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಏಜೆನ್ಸಿಗಳ ಪ್ರತಿನಿಧಿಗಳು   

ಕಲಬುರ್ಗಿ: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಎಲ್ಲ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯ ಮನೋಭವ ಬದಲಾಯಿಸಿಕೊಳ್ಳಿ. ಇಲ್ಲದಿದ್ದರೆ ಕಷ್ಟವಾಗುತ್ತದೆ’ ಎಂದು ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ ಎಚ್ಚರಿಸಿದರು.

ಮಂಡಳಿಯಿಂದ ಕೈಗೆತ್ತಿಕೊಂಡ ಕಾಮಗಾರಿಗಳು ಹಾಗೂ ಇನ್ನೂ ಪ್ರಾರಂಭಿಸದ ಕಾಮಗಾರಿಗಳ ಬಗ್ಗೆ ಪರಿಶೀಲಿಸಲು ನಗರದಲ್ಲಿ ಶನಿವಾರ ಕರೆದ ಅನುಷ್ಠಾನ ಏಜೆನ್ಸಿಗಳ ಸಭೆಯಲ್ಲಿ ಅವರು ಅಧಿಕಾರಿಗಳ ಕಿವಿಹಿಂಡಿದರು.

‘ಆರ್ಥಿಕ ವರ್ಷದ ಕೊನೆಯವರೆಗೂ ಕಾಮಗಾರಿ ಆರಂಭಿಸದೆ, ಕೊನೆ ಹಂತದಲ್ಲಿ ಕೆಲಸಗಳನ್ನು ಕೈಬಿಡುವಂತೆ ಅಥವಾ ಬದಲಾಯಿಸುವಂತೆ ಪ್ರಸ್ತಾವ ಸಲ್ಲಿಸುವ ಕಾರ್ಯಶೈಲಿ ಒಪ್ಪುವಂಥದ್ದಲ್ಲ. ಇಂತಹ ಮನೋಭಾವ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ. ಅಧಿಕಾರಿಗಳು ಇಂಥ ರೂಢಿಗಳನ್ನು ಬದಲಾಯಿಸಿಕೊಳ್ಳಬೇಕು’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2016ರಿಂದ 2019ನೇ ಸಾಲಿನವರೆಗೆ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿಯೆ ಪೂರ್ಣಗೊಳಿಸಲು ಈ ಹಿಂದೆಯೇ ಗಡುವು ನೀಡಲಾಗಿತ್ತು. ಆದರೂ ಇದೂವರೆಗೆ ಪೂರ್ಣಗೊಂಡಿಲ್ಲ. ಇದು ತೀರ ಬೇಸರದ ಸಂಗತಿ. ಈ ಕೂಡಲೇ ಅಗತ್ಯ ಅನುಮೋದನೆ ಪಡೆದುಕೊಂಡು ಕಾಮಗಾರಿ ಮುಗಿಸಬೇಕು’ ಎಂದು ತಾಕೀತು ಮಾಡಿದರು.

‘₹ 30 ಲಕ್ಷದವರೆಗಿನ ಕಾಮಗಾರಿಗಳನ್ನು ಮೂರು ತಿಂಗಳ ಒಳಗಾಗಿ, ₹ 30 ಲಕ್ಷದಿಂದ ₹ 1 ಕೋಟಿಯವರೆಗಿನ ಕಾಮಗಾರಿಗಳಿಗೆ ಐದು ತಿಂಗಳು ಹಾಗೂ ₹ 1 ಕೋಟಿಗಿಂತ ಅಧಿಕ ಮೊತ್ತದ ಕಾಮಗಾರಿಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು ಮಂಡಳಿಯು ನಿರ್ಣಯ ಕೈಗೊಂಡಿದೆ. ಅದರಂತೆ ಅನುಷ್ಠಾನ ಏಜೆನ್ಸಿಗಳು ಕಾರ್ಯಪ್ರವೃತ್ತರಾಗಿ, ಪ್ರಥಮಾದ್ಯತೆ ಮೇಲೆ ತ್ವರಿತಗತಿಯಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಮಾಡಬೇಕು’ ಎಂದೂ ಸೂಚಿಸಿದರು.

‘ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಆರಂಭಿಸಿದ ಕಾಮಗಾರಿಗಳಲ್ಲಿ ಕೆಲವೇ ಪ್ರಗತಿಯಲ್ಲಿವೆ. ಇನ್ನು ಕೆಲವು ಕೆಲಸಗಳೇ ಆರಂಭಗೊಂಡಿಲ್ಲ. ಈ ಭಾಗದ ಇತರೆ ಜಿಲ್ಲೆಗಳಲ್ಲಿ ಹಳೆ ವರ್ಷದ ಕಾಮಗರಿಗಳನ್ನು ಪೂರ್ಣಗೊಳಿಸಿ, ಪ್ರಸಕ್ತ ಸಾಲಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಬಿ.ಶರತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ಡಾ.ಬಿ.ಸುಶೀಲಾ, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ಪಾಂಡ್ವೆ, ಸಹಾಯಕ ಆಯುಕ್ತ ಡಾ.ಗೋಪಾಲಕೃಷ್ಣ ಬಿ., ಮಂಡಳಿಯ ಜಂಟಿ ನಿರ್ದೇಶಕ ಬಸವರಾಜ, ಅಧೀಕ್ಷಕ ಎಂಜಿನಿಯರ್‌ ಶಿವಶಂಕ್ರಪ್ಪ ಗುಡಗುಂಟಿ ಸೇರಿದಂತೆ ವಿವಿಧ ಅನುಷ್ಠಾನ ಏಜೆನ್ಸಿಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.