ADVERTISEMENT

ಆರೋಗ್ಯ ಆವಿಷ್ಕಾರಕ್ಕೆ ₹250 ಕೋಟಿ ಖರ್ಚು: ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್‌ ಸಿಂಗ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 14:11 IST
Last Updated 3 ಮಾರ್ಚ್ 2024, 14:11 IST
ಡಾ.ಅಜಯ್‌ಸಿಂಗ್‌
ಡಾ.ಅಜಯ್‌ಸಿಂಗ್‌   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಕ್ಷೇತ್ರದ ಬಲವರ್ಧನೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಮುಂದಿನ ಆರ್ಥಿಕ ವರ್ಷದಲ್ಲಿ ಆರೋಗ್ಯ ಆವಿಷ್ಕಾರ ಯೋಜನೆಯಡಿ ₹250 ಕೋಟಿ ಖರ್ಚು ಮಾಡಲಿದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್ ತಿಳಿಸಿದರು.

ಇಲ್ಲಿನ ಕೆಕೆಆರ್‌ಡಿಬಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಲ್ಯಾಣ ಕರ್ನಾಟಕಕ್ಕೆ 70 ಪಿಎಚ್‌ಸಿ ಘೋಷಿಸಿದ್ದು, ಈ ವರ್ಷ 46 ಪಿಎಚ್‌ಸಿಗಳನ್ನು ನಿರ್ಮಾಣ ಮಾಡಲಾಗುವುದು. ಕೆಕೆಆರ್‌ಡಿಬಿಯು ತಲಾ ₹4.98 ಕೋಟಿ ವೆಚ್ಚದಲ್ಲಿ ಐದು ಜಿಲ್ಲೆಗಳಲ್ಲಿ ಒಟ್ಟು 33 ಪಿಎಚ್‌ಸಿ ಹಾಗೂ ವಿಜಯನಗರ ಮತ್ತು ಬಳ್ಳಾರಿಯಲ್ಲಿ ಜಿಲ್ಲಾ ಖನಿಜ ನಿಧಿಯಿಂದ (ಡಿಎಂಎಫ್‌) 13 ಪಿಎಚ್‌ಸಿ ನಿರ್ಮಿಸಲಾಗುವುದು’ ಎಂದರು.

‘17 ಸಮುದಾಯ ಆರೋಗ್ಯ ಕೇಂದ್ರಗಳಿಗೆ (ಸಿಎಚ್‌ಸಿ) ತಲಾ ₹1 ಕೋಟಿ ನೀಡಲಾಗುವುದು. ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳನ್ನು ಒಂದೇ ಸೂರಿನಲ್ಲಿ ತರಲು ಜಯದೇಯ ಆಸ್ಪತ್ರೆ ಹಿಂಭಾಗದಲ್ಲಿ ಆರೋಗ್ಯ ಭವನ ನಿರ್ಮಿಸಲಾಗುವುದು. ಇದಕ್ಕೆ ಕೆಕೆಆರ್‌ಡಿಬಿ ₹10 ಕೋಟಿ ಹಾಗೂ ಆರೋಗ್ಯ ಇಲಾಖೆ ₹18 ಕೋಟಿ ನೀಡಲಿದೆ’ ಎಂದು ತಿಳಿಸಿದರು.

ADVERTISEMENT

‘ದೇಶದಲ್ಲಿ ಗರ್ಭಕಂಠದ ಕ್ಯಾನ್ಸರ್ ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ಈ ಹಿಂದಿನ ವರ್ಷದಲ್ಲಿ 3.2 ಲಕ್ಷ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಂಡುಬಂದಿದ್ದು, ಅವರಲ್ಲಿ ಶೇ 50ರಷ್ಟು ಮಹಿಳೆಯರು ಮೃತಪಟ್ಟಿದ್ದಾರೆ. ಹೀಗಾಗಿ, ಆರೋಗ್ಯವಂತ ಮಹಿಳೆ ಯಾಗಲು ಮೆನ್‌ಸ್ಟ್ರುಅಲ್‌ ಕಪ್ ಅನ್ನು ಮಹತ್ವಾಕಾಂಕ್ಷಿ ಯೋಜನೆಯನ್ನಾಗಿ ಜಾರಿಗೆ ತರಲಾಗುವುದು. ಯಡ್ರಾಮಿ, ಸುರಪುರ ಮತ್ತು ಕಾರಟಗಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾ ಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಾರಟಗಿ ಯಲ್ಲಿ ಜಾಗವೂ ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೆಕೆಆರ್‌ಡಿಬಿಗೆ ಬಂದ ₹3,000 ಕೋಟಿಯಲ್ಲಿ ಈಗಾಗಲೇ ₹1,500 ಕೋಟಿ ಖರ್ಚು ಮಾಡಲಾಗಿದ್ದು, ₹2,500 ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ₹5,000 ಕೋಟಿ ಖರ್ಚು ಮಾಡುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದರು.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ತನಿಖೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅದರಲ್ಲಿ ಏನಿದೆ ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ ಪಡೆಯುತ್ತೇನೆ’ ಎಂದರು.

ಉಪಕಾರ್ಯದರ್ಶಿ ಎಂ.ಕೆ.ಪ್ರಮೀಳಾ, ಮಂಡಳಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿಯವರು ಹಿಂಬಾಗಿಲಿನಿಂದ ಬಂದು ಅಧಿಕಾರ ನಡೆಸಿದ ಅಭ್ಯಾಸವಿದೆ. ಹೀಗಾಗಿ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿಯವರು ಒಬ್ಬೊಬ್ಬರಿಗೆ ₹ 50 ಕೋಟಿ ಆಫರ್ ಮಾಡಿದ್ದಾರೆ ಎಂಬ ಸಿಎಂ ಅವರ ಆರೋಪ ನಿಜ ಆಗಿರಬಹುದು
ಡಾ.ಅಜಯ್‌ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ
ಕಾಮಗಾರಿಗಳ ಮೇಲೆ ನಿಗಾ ಇರಿಸಲು ಗುಣಮಟ್ಟ ನಿಯಂತ್ರಣದ ಪ್ರತ್ಯೇಕ ಎಂಜಿನಿಯರಿಂಗ್
ವಿಭಾಗ ಸ್ಥಾಪಿಸಿ ಪ್ರತಿ ಜಿಲ್ಲೆಯಲ್ಲಿ ಉಪ ವಿಭಾಗ ಸ್ಥಾಪಿಸುವ ಚಿಂತನೆ ಇದೆ.
ಎಂ.ಸುಂದರೇಶ ಬಾಬು, ಕೆಕೆಆರ್‌ಡಿಬಿ ಕಾರ್ಯದರ್ಶಿ
‘ಕೆಕೆಆರ್‌ಡಿಬಿ ಹಾರ್ಟ್‌ ಲೈನ್‌ ಆಂಬುಲೆನ್ಸ್‌ ಸೇವೆ’
‘ಕೆಕೆಆರ್‌ಡಿಬಿ ಹಾರ್ಟ್‌ ಲೈನ್‌ ಆಂಬುಲೆನ್ಸ್‌ ಸೇವೆ ಆರಂಭಿಸಲಿದ್ದು ಇದಕ್ಕಾಗಿ ಜಯದೇವ ಆಸ್ಪತ್ರೆ ಜತೆಗೆ ಕೈಜೋಡಿಸಲಾಗುವುದು. 41 ಬೇಸಿಕ್ ಲೈಫ್‌ ಸಪೋರ್ಟ್‌ (ಬಿಎಲ್‌ಎಸ್‌) ಹಾಗೂ 7 ಅಡ್ವಾನ್ಸ್ಡ್‌ ಲೈಫ್‌ ಸಪೋರ್ಟ್‌ (ಎಎಲ್‌ಎಸ್‌) ಸೇರಿ ಒಟ್ಟು 48 ಆಂಬುಲೆನ್ಸ್‌ಗಳನ್ನು ಖರೀದಿಸಲಾಗುವುದು. ಬೇರೆ ಆಸ್ಪತ್ರೆಗಳನ್ನೂ ಇದರೊಳಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು’ ಎಂದು ಡಾ.ಅಜಯ್‌ಸಿಂಗ್ ತಿಳಿಸಿದರು. ‘ಗ್ರಾಮೀಣ ಭಾಗದಲ್ಲಿ ಹೃದಯ ಸ್ತಂಭನಕ್ಕೆ ಒಳಗಾದವರಿಗೆ ಗೋಲ್ಡನ್ ಅವರ್‌ನ 20 ನಿಮಿಷಗಳಲ್ಲಿ ತುರ್ತಾಗಿ ತಾತ್ಕಾಲಿಕ ಚಿಕಿತ್ಸೆ ಬೇಕಾಗುತ್ತಿದೆ. ಆಂಬುಲೆನ್ಸ್ ಮೂಲಕ ಸಮೀಪದ ತಾಲ್ಲೂಕು ಆಸ್ಪತ್ರೆಗಳಿಗೆ ಕರೆದೊಯ್ದು ಆ್ಯಪ್‌ ಮೂಲಕವೇ ನುರಿತ ವೈದ್ಯರ ಸಲಹೆ ಪಡೆದು ತಾತ್ಕಾಲಿಕ ಚಿಕಿತ್ಸೆ ಕೊಡಿಸಲಾಗುತ್ತದೆ. ಆ ಬಳಿಕ ಜಯದೇವ ಆಸ್ಪತ್ರೆಗೆ ದಾಖಲಿಸಲಾಗುವುದು. ಆಂಬುಲೆನ್ಸ್ ಖರೀದಿಗೆ ₹16.40 ಕೋಟಿ ಮೊತ್ತದ ಟೆಂಡರ್ ಅನ್ನು 15 ದಿನಗಳಲ್ಲಿ ಆಹ್ವಾನಿಸಲಾಗುವುದು’ ಎಂದು ಮಾಹಿತಿ ನೀಡಿದರು.
ರಾಯಚೂರಲ್ಲಿ ಮಾನವ ಜೀನೋಮ್ ಸಂಶೋಧನಾ ಕೇಂದ್ರ
‘ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ಇದರ ಅಧ್ಯಯನಕ್ಕಾಗಿ ರಾಯಚೂರಿನಲ್ಲಿ ಮಾನವ ಜೀನೋಮ್ ಸಂಶೋಧನಾ ಕೇಂದ್ರ ನಿರ್ಮಾಣ ಮಾಡಲಾಗುವುದು’ ಎಂದು ಡಾ.ಅಜಯ್‌ಸಿಂಗ್ ಹೇಳಿದರು. ‘ಸಂಶೋಧನಾ ಕೇಂದ್ರದ ನಿರ್ಮಾಣಕ್ಕೆ ಕೆಕೆಆರ್‌ಡಿಬಿ ₹48 ಕೋಟಿ ನೀಡಲಿದೆ. ಕೇಂದ್ರದಲ್ಲಿ ಅಪೌಷ್ಟಿಕತೆ ಕುರಿತು ಸಂಶೋಧನೆ ಅಧ್ಯಯನ ಹಾಗೂ ಅದರ ನಿವಾರಣೆಯ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.