ADVERTISEMENT

ಕೊಡಗು ಬಾಲಕಿಯರ ತಂಡ ಚಾಂಪಿಯನ್

ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕಿಯರ ಹಾಕಿ ಟೂರ್ನಿ

ಮಲ್ಲಪ್ಪ ಪಾರೇಗಾಂವ
Published 19 ನವೆಂಬರ್ 2022, 9:46 IST
Last Updated 19 ನವೆಂಬರ್ 2022, 9:46 IST
ಕಲಬುರಗಿಯಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ನರಾಗಿ ಹೊರಹೊಮ್ಮಿದ ಕೊಡಗು ಬಾಲಕಿಯರ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣ
ಕಲಬುರಗಿಯಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ನರಾಗಿ ಹೊರಹೊಮ್ಮಿದ ಕೊಡಗು ಬಾಲಕಿಯರ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣ   

ಕಲಬುರಗಿ: ಇಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಬಾಲಕಿಯರ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿತು. ಫೈನಲ್ ಪಂದ್ಯದಲ್ಲಿ ಕೊಡಗು ತಂಡ, ಮೈಸೂರು ತಂಡವನ್ನು 2–1 ಗೋಲುಗಳ ಅಂತರದಿಂದ ಮಣಿಸಿ, ಪ್ರಶಸ್ತಿಯನ್ನು ಬಾಚಿಕೊಂಡಿತು.

ನಗರದ ಶರಣಬಸವೇಶ್ವರ ಮಹಾವಿದ್ಯಾಲಯದ ಮೈದಾನದಲ್ಲಿ ನಡೆದ ಬಾಲಕಿಯರ ಫೈನಲ್ ಪಂದ್ಯ ರೋಚಕವಾಗಿತ್ತು. ಮೊದಲ ಕ್ವಾರ್ಟರ್‌ನಲ್ಲಿ ಕೊಡಗು ತಂಡ 1–0 ಮುನ್ನಡೆ ಸಾಧಿಸಿತು. ಕೊಡಗು ತಂಡದ ರಕ್ಷಿತಾ 7ನೇ ನಿಮಿಷದಲ್ಲಿ ಗೋಲು ಬಾರಿಸಿ, ತಂಡಕ್ಕೆ ಮುನ್ನಡೆ ನೀಡಿದರು.

ಎರಡನೇ ಕ್ವಾರ್ಟರ್‌ನ ಆರಂಭದಲ್ಲಿಯೇ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವ ಅವಕಾಶವನ್ನು ಮೈಸೂರು ಕೈಚೆಲ್ಲಿತು. ಬಳಿಕವೂ ಎರಡು ಬಾರಿ ಗೋಲುಗಳಿಸುವ ಅವಕಾಶಗಳನ್ನು ಎರಡೂ ತಂಡಗಳು ಕೈಚೆಲ್ಲಿದವು. ಹೀಗಾಗಿ ಎರಡನೇ ಕ್ವಾರ್ಟರ್ ನ ಅಂತ್ಯದ ವೇಳೆಗೆ ಕೊಡಗು ತಂಡ ಮುನ್ನಡೆ ಕಾಯ್ದುಕೊಂಡಿತು.

ADVERTISEMENT

ಮೂರನೇ ಕ್ವಾರ್ಟರ್ ಆರಂಭದಲ್ಲಿ ಮೇಲುಗೈ ಸಾಧಿಸಿದ ಮೈಸೂರು ಆಟಗಾರ್ತಿಯರು ಪೆನಾಲ್ಟಿ ಕಾರ್ನರ್‌ನಲ್ಲಿ ಒಂದು ಗೋಲು ಬಾರಿಸಿ ಸಮಬಲ ಸಾಧಿಸಿದರು. ಮೈಸೂರು ತಂಡದ ಮಾನಸಾ ಅವರು 24 ನಿಮಿಷದಲ್ಲಿ ಗೋಲು ಬಾರಿಸಿದರು. ಮೂರನೇ ಕ್ವಾರ್ಟರ್‌ನ ಅಂತ್ಯದಲ್ಲಿ ಕೊಡಗು ತಂಡ ತನಗೆ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ಸಿಕ್ಕ ಗೋಲು ಗಳಿಸುವ ಅವಕಾಶಗಳನ್ನು ತಪ್ಪಿಸಿಕೊಂಡಿತು. ಈ ಮೂಲಕ ಮೈಸೂರು ತಂಡ ಪ್ರಬಲ ಹೋರಾಟ ನಡೆಸುವ ಮೂಲಕ ಸಮಬಲವನ್ನು ಕಾಯ್ದುಕೊಂಡಿತು.

ಅಂತಿಮ ಹಾಗೂ ನಿರ್ಣಾಯಕ ಕ್ವಾರ್ಟರ್‌ನ ಆರಂಭದಲ್ಲಿಯೇ ಮೇಲುಗೈ ಸಾಧಿಸಿದ ಕೊಡಗು ಆಟಗಾರ್ತಿಯರು ಗೋಲುಗಳಿಸುವ ಮೂಲಕ 2–1 ಅಂತರದ ಮುನ್ನಡೆ ಸಾಧಿಸಿದರು. ಕೊಡಗು ತಂಡದ ಸೌಮ್ಯ ಗೋಲು ಬಾರಿಸಿ, ತಂಡಕ್ಕೆ ಮುನ್ನಡೆ ಸಾಧಿಸಿದರು. ಬಳಿಕ ಎರಡು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವ ಅವಕಾಶ ಕೈಚೆಲ್ಲಿದ ಮೈಸೂರು ತಂಡ, ಗೆಲುವಿನ ಅವಕಾಶವನ್ನು ಕೈಚೆಲ್ಲಿತು. ಪಂದ್ಯದ ಕೊನೆ ಎರಡು ನಿಮಿಗಳು ಬಾಕಿಯಿದ್ದಾಗ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವ ಅವಕಾಶವನ್ನು ವಿಫಲಗೊಳಿಸಿದ ಕೊಡಗು ಬಾಲಕಿಯರು ಚಾಂಪಿಯನ್ನರಾಗಿ ಹೊರಹೊಮ್ಮಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.