ಕಲಬುರಗಿ: ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ. ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕೋಲಿ ಕಬ್ಬಲಿಗ ಹಾಗೂ ತಳವಾಳ ಸಮಾಜಗಳಿಂದ ಒಗ್ಗಟ್ಟಿನ ಮಂತ್ರ ಜಪಿಸಲಾಯಿತು. ಸಮುದಾಯದವರು ಮೊದಲು ಒಗ್ಗಟ್ಟಾಗಬೇಕು. ಪಕ್ಷಭೇದ ಮರೆತು ಹೋರಾಟ ರೂಪಿಸಬೇಕು ಎಂದು ನಿರ್ಣಯಿಸಲಾಯಿತು.
ನಿಜಶರಣ ಅಂಬಿಗರ ಚೌಡಯ್ಯನವರ ಬಗ್ಗೆ ಯಾದಗಿರಿ ಜಿಲ್ಲೆಯಲ್ಲಿ ಹಗುರವಾಗಿ ಮಾತನಾಡಿದ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು. ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಮತ್ತು ಮೊಗವೀರ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ತಳವಾರ ಸಮುದಾಯದ ಎಸ್‌ಟಿ ಮತ್ತು ಸಿಂಧುತ್ವ ಪ್ರಮಾಣಪತ್ರ ನೀಡುವಲ್ಲಿ ಆದ ಅನ್ಯಾಯದ ವಿರುದ್ಧ ಹೋರಾಟ ರೂಪಿಸಲು ಈ ಸಭೆ ಕರೆಯಲಾಗಿತ್ತು.
ಸಭೆ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ನಮ್ಮ ಸಮಾಜವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಚಿನ್ನಪ್ಪರೆಡ್ಡಿ ಆಯೋಗದ ವರದಿಯಲ್ಲಿದೆ. ಆದರೆ, ಇದುವರೆಗೂ ಎಸ್‌ಟಿಗೆ ಸೇರ್ಪಡೆಯಾಗಿಲ್ಲ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲಿ ಕೇಂದ್ರಕ್ಕೆ ಪ್ರಸ್ತಾವ ಕಳಿಸಲಾಗುವುದು. ತಳವಾರರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಸರ್ಕಾರದಿಂದಲೇ ಸುತ್ತೋಲೆ ಹೊರಡಿಸಲಾಗುವುದು’ ಎಂದರು.
‘ಒಗ್ಗಟ್ಟು ತೋರಿಸಿದರೆ ನಿಮ್ಮ ಮನೆಗೆ ಮಂತ್ರಿಗಳೂ ಬರುತ್ತಾರೆ. ಸೌಲಭ್ಯಗಳೂ ಬರುತ್ತವೆ. ಸ್ಥಳೀಯವಾಗಿ ಯಾದಗಿರಿ ಮಾದರಿಯಲ್ಲಿ ಹೋರಾಟ ನಡೆಸಿ. ಆಗಲೂ ಸಮಾಜದ ಬೇಡಿಕೆಗೆ ಸ್ಪಂದಿಸದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 10 ಲಕ್ಷ ಜನರೊಂದಿಗೆ ಹೋರಾಟ ಮಾಡೋಣ. ಸಮಾಜಕ್ಕಾಗಿ ರಾಜೀನಾಮೆ ನೀಡಲು ಸಿದ್ಧ’ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಶಿವಕುಮಾರ ನಾಟಿಕಾರ ಮಾತನಾಡಿ, ‘ಬುಡಕಟ್ಟು ಲಕ್ಷಣ ಇರುವ ವೈಜ್ಞಾನಿಕ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ ಮಾತ್ರ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರುತ್ತದೆ’ ಎಂದು ಹೇಳಿದರು.
ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, ‘ರಾಜಕೀಯ ಅವಕಾಶಗಳು ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು. ಒಗ್ಗಟ್ಟಿನ ಕೊರತೆಯಿಂದ ರಾಜ್ಯದ 224 ಕ್ಷೇತ್ರಗಳಲ್ಲಿ ನಮ್ಮ ಸಮಾಜದ ಒಬ್ಬರೂ ಶಾಸಕರಿಲ್ಲ’ ಎಂದರು.
ತಳವಾರ ಸಮಾಜದ ಅಧ್ಯಕ್ಷ ಸರ್ದಾರ್ ರಾಯಪ್ಪ ಮಾತನಾಡಿ, ‘ತಳವಾರರಿಗೆ ಎಸ್‌ಟಿ ಪ್ರಮಾಣಪತ್ರ ಸಿಗುವುದನ್ನು ವ್ಯವಸ್ಥಿತವಾಗಿ ತಡೆಹಿಡಿಯಲಾಗುತ್ತಿದೆ. 40 ವರ್ಷಗಳಿಂದ ಎಸ್‌ಟಿ ಪಟ್ಟಿಯಲ್ಲಿದ್ದರೂ ಅನ್ಯಾಯ ಆಗುತ್ತಿದೆ. ಡಾ.ಅಂಬೇಡ್ಕರ್ ಹೇಳಿದಂತೆ ಹೋರಾಟದಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ’ ಎಂದರು.
ಸಮಾಜದ ಮುಖಂಡರಾದ ತಿಪ್ಪಣ್ಣ ರಡ್ಡಿ, ವಾಣಿಶ್ರೀ ಸಗರಕರ್, ಶಾಂತಪ್ಪ ಕೂಡಿ ಮಾತನಾಡಿದರು.
ತೊನಸನಳ್ಳಿಯ ಮಲ್ಲಣ್ಣಪ್ಪ ಸ್ವಾಮೀಜಿ, ಗರವಗುಂಡಗಿಯ ವರಲಿಂಗೇಶ್ವರ ಸ್ವಾಮೀಜಿ, ರಟಕಲ್‌ನ ರೇವಣಸಿದ್ದೇಶ್ವರ ಶರಣರು ಸಾನ್ನಿಧ್ಯ ವಹಿಸಿದ್ದರು. ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಶಂಕರ ಮ್ಯಾಕೇರಿ, ಹಣಮಂತ ಸಂಕನೂರ, ನಾಗರತ್ನ ಅನಪುರ, ರೇಖಾ ಕಟ್ಟಿಮನಿ ಉಪಸ್ಥಿತರಿದ್ದರು. ರಾಮಲಿಂಗ ನಾಟಿಕಾರ ಸ್ವಾಗತಿಸಿ ದರು. ಭೀಮಾಶಂಕರ ನಿರೂಪಿಸಿದರು.
ಮನುಷ್ಯನಲ್ಲಿ ಅಸೂಯೆ ಸಹಜ. ಆದರೆ ಸಂದರ್ಭ ಬಂದಾಗ ಸಮಾಜದ ಜನರು ಒಗ್ಗಟ್ಟಾಗಬೇಕು. ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕುಶಿವಾಜಿ ಮೆಟಗಾರ ತಳವಾರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ
ಪರಿಶಿಷ್ಟ ಪಂಗಡಕ್ಕೆ ಸೇರಲು ನಾವು ಡೆಡ್‌ಲೈನ್ ಹಾಕಿಕೊಂಡು ಹೋರಾಟ ಮಾಡಬೇಕು. 2028ರೊಳಗೆ ಎಸ್‌ಟಿಗೆ ಸೇರದಿದ್ದರೆ ನಮ್ಮ ಸಮಾಜಕ್ಕೆ ಬೆಲೆ ಇರುವುದಿಲ್ಲಧನರಾಜ ಬೆಂಗಳೂರು
ಸಮಾಜದ ಜನ ಗ್ರಾಮ ಪಂಚಾಯಿತಿ ತಾಲ್ಲೂಕು ಜಿಲ್ಲಾ ಪಂಚಾಯಿತಿ ಎಂಎಲ್‌ಎ ಸೇರಿ ಯಾವುದೇ ಹುದ್ದೆಗೆ ಸ್ಪರ್ಧಿಸಿದರೂ ಪಕ್ಷ ನೋಡದೇ ಬೆಂಬಲಿಸಬೇಕುರವಿರಾಜ ಕೊರವಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಕಲಬುರಗಿ
ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನಿರುದ್ಯೋಗ ಹೋಗಲಾಡಿಸಲು ಸಾಮಾಜಿಕ ಆರ್ಥಿಕ ಪ್ರಗತಿಗಾಗಿ ಮತ್ತು ರಾಜಕೀಯ ಶಕ್ತಿ ಪಡೆಯಲು ಎಸ್‌ಟಿಗೆ ಸೇರುವುದು ಅಗತ್ಯವಾಗಿದೆಮಲ್ಲಿಕಾರ್ಜುನ ಗೋಸಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಯಾದಗಿರಿ
ನಿರೀಕ್ಷೆ ಮೀರಿ ಬಂದ ಜನ
ಸಮುದಾಯದ ಜನ ನಿರೀಕ್ಷೆ ಮೀರಿ ಬಂದ ಕಾರಣ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನು ಆವರಣದಲ್ಲಿರುವ ಬಾಪುಗೌಡ ದರ್ಶನಾಪುರ ರಂಗಮಂದಿರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ಕೂಡ ಆಸನಗಳು ಭರ್ತಿಯಾಗಿದ್ದರಿಂದ ಜನ ನಿಂತುಕೊಂಡು ಸಭೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.