ADVERTISEMENT

ಕೊಂಚೂರು-ಬಳವಡಗಿ ಜಾತ್ರೆಗೆ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 7:48 IST
Last Updated 27 ಡಿಸೆಂಬರ್ 2023, 7:48 IST
ವಾಡಿ ಸಮೀಪದ ಕೊಂಚೂರು ಹನುಮಾನ ದೇವಸ್ಥಾನ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ನಡೆಯಿತು
ವಾಡಿ ಸಮೀಪದ ಕೊಂಚೂರು ಹನುಮಾನ ದೇವಸ್ಥಾನ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ನಡೆಯಿತು   

ವಾಡಿ: ಸಮೀಪದ ಕೊಂಚೂರು ಹಾಗೂ ನೆರೆಯ ಬಳವಡಗಿ ಗ್ರಾಮಗಳ ಜೋಡೂರು ಜಾತ್ರೆ ಮಂಗಳವಾರ ಸಹಸ್ರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.

ಕೊಂಚೂರು ಗ್ರಾಮದ ಹನುಮಾನ ದೇವಸ್ಥಾನದ ರಥೋತ್ಸವ ಹಾಗೂ ಬಳವಡಗಿಯ ಏಲಾಂಬಿಕಾ ದೇವಿಗೆ ಹಡ್ಡಲಗಿ ತುಂಬುವ ಜಾತ್ರೆಗೆ ಅಪಾರ ಭಕ್ತಸಮೂಹ ಹರಿದು ಬಂದಿತು.

ಹೂವು, ಛತ್ರಿ, ಚಾಮರಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಅರ್ಚಕರು ಹನುಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಪೂಜೆ ಸಲ್ಲಿಸಲಾಯಿತು.  ‘ಹನುಮಾನ ಮಹಾರಾಜಕೀ ಜೈ’ ಎಂಬ ಜಯಘೋಷಗಳ ನಡುವೆ ರಥ ಎಳೆಯಲಾಯಿತು. ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.

ADVERTISEMENT

ಇದಕ್ಕೂ ಮೊದಲು ಬಳವಡಗಿಯ ಏಲಾಂಬಿಕಾ ದೇವಿಗೆ ಹಡ್ಡಲಗಿ ತುಂಬುವ ಸಾಂಪ್ರದಾಯಿಕ ಉತ್ಸವದಲ್ಲಿ ಸುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು. ಕುಟುಂಬ ಸಮೇತರಾಗಿ ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಆಗಮಿಸಿದ್ದ ಭಕ್ತರು ಮನೆಯಿಂದ ತಯಾರಿಸಿಕೊಂಡು ತಂದಿದ್ದ ವಿವಿಧ ಬಗೆಯ ಭಕ್ಷಭೋಜನವನ್ನು ದೇವಿಗೆ ನೈವೇದ್ಯ ರೂಪದಲ್ಲಿ ಸಮರ್ಪಿಸಿ ನಂತರ ದೇವಸ್ಥಾನದ ಅಂಗಳದಲ್ಲಿ ಸಾಮೂಹಿಕ ಭೋಜನ ಸವಿದರು.

ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್ ರಾಜ್ಯಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಒಂದು ವಾರದಿಂದ  ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವಾಡಿ ಪಿಎಸ್ಐ ತಿರುಮಲೇಶ ಕುಂಬಾರ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಕಲ್ಪಿಸಿದ್ದರು.

ಬಳವಡಗಿ ಏಲಾಂಬಿಕಾ ದೇವಿಗೆ ಹಡ್ಡಲಗಿ ತುಂಬುವ ಜಾತ್ರೆಯಲ್ಲಿ ಅಪಾರ ಜನರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.