ADVERTISEMENT

ತತ್ವ ಹೇಳಿದ್ದು ಸಾಕು; ಇನ್ನು ಪಾಲಿಸೋಣ: ನೀಲಲೋಚನಾ ತಾಯಿ

ಕೋರಣೇಶ್ವರ ಮಠದ 5ನೇ ಉತ್ತರಾಧಿಕಾರಿ, ಪರಿವರ್ತನೆಗೆ ನಾಂದಿ ಹಾಡಿದ ಶ್ರೀ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 4:49 IST
Last Updated 31 ಮಾರ್ಚ್ 2021, 4:49 IST

ಕಲಬುರ್ಗಿ: ಸಮಬದ್ಧ ಹಾಗೂ ಸಮಚಿತ್ತದಿಂದ ಮಠವನ್ನು ನಡೆಸಿಕೊಂಡು ಹೋಗುವುದೇ ನನ್ನ ಉದ್ದೇಶ. ಯಾವುದೇ ತತ್ವವನ್ನು ಹೇಳುತ್ತ ಹೋಗುವುದಕ್ಕಿಂತ ಪಾಲಿಸುತ್ತ ಹೋಗುವುದೇ ನಮ್ಮ ಗುರಿಯಾಗಬೇಕು...

ಜಿಲ್ಲೆಯ ಆಳಂದ ತಾಲ್ಲೂಕಿನ ಕೋರಣೇಶ್ವರ ಮಠದ 5ನೇ ಉತ್ತರಾಧಿಕಾರಿ ಆಗಿ ನೇಮಕಗೊಂಡ ನೀಲಲೋಚನಾ ತಾಯಿ ಅವರು ಭಕ್ತರಿಗೆ ನೀಡಿದ ಮೊದಲ ಸಂದೇಶವಿದು. ‘ನಾನು ಬಯಸಿ ಪೀಠಾಧಿಪತಿ ಆದವಳಲ್ಲ; ಗುರು ಕರುಣೆಯಿಂದ ಆದವಳು. ಹಾಗಾಗಿ, ಗುರು ತೋರಿದ ದಾರಿಯೇ ನನ್ನ ದಾರಿ. ಭವಿಷ್ಯದಲ್ಲಿ ಮಹಿಳಾ ಸಬಲೀಕರಣ ಮತ್ತು ಮತ ಸಮಾನತೆಗೆ ಚಿತ್ತ ದುಡಿಯುತ್ತೇನೆ’ ಎನ್ನುವುದು ಅವರ ಮನದಾಳ.‌

ಕೋರಣೇಶ್ವರ ಮಠದ ನಾಲ್ಕನೇ ಪೀಠಾಧಿಪತಿ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಅವರು, ಸೋಮವಾರವೇ ಉತ್ತರಾಧಿಕಾರಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ವಿರಕ್ತ ಪರಂಪರೆಯ ಮಠಗಳಲ್ಲೇ ಇದು ಮೊದಲ ಹೆಜ್ಜೆ. ಕಳೆದ ವರ್ಷ ಗದಗ ಜಿಲ್ಲೆಯ ಅಸೂಟಿ ಶಾಖಾ ಮಠಕ್ಕೆ ಮುಸ್ಲಿಂ ಯುವಕನನ್ನು ಉತ್ತರಾಧಿಕಾರಿ ಮಾಡುವ ಮೂಲಕ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದ ಶ್ರೀಗಳು, ಈಗ ಮಹಿಳೆಗೆ ಉತ್ತರಾಧಿಕಾರ ನೀಡಿ ರಾಜ್ಯದ ಗಮನ ಸೆಳೆದಿದ್ದಾರೆ.

ADVERTISEMENT

ಖಜೂರಿ ಗ್ರಾಮದ ಮಥುರಾಬಾಯಿ ಮತ್ತು ಹನುಮಂತಪ್ಪ ನಗರೆ ದಂಪತಿಯ ಪುತ್ರಿ ನೀಲಲೋಚನಾ ಅವರಿಗೆ ಈಗ 40 ವರ್ಷ ವಯಸ್ಸು. ಪಾಲಕರೇ ಅವರನ್ನು ಮಠಕ್ಕೆ ಮರಿ ಬಿಟ್ಟಿದ್ದರು. ಮಹಾರಾಷ್ಟ್ರದ ಮುರುಮ್‌ ಎಂಬಲ್ಲಿ ಮರಾಠಿ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ಪಡೆದಿದ್ದಾರೆ. ನಂತರ ಚಿತ್ರದುರ್ಗದ ಮುರುಘಾ ಮಠದಲ್ಲಿ ನಾಲ್ಕು ವರ್ಷ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಅಭ್ಯಾಸ ಮಾಡಿ‌ದ್ದಾರೆ. 1992ರಲ್ಲಿ ಇಷ್ಟಲಿಂಗ ದೀಕ್ಷೆ ಪಡೆದ ಅವರು, ಚಿತ್ರದುರ್ಗದ ಮರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಬಳಿ ‘ಸಾಧಕ, ಬೋಧಕ ಮತ್ತು ಸುಧಾರಕ’ ತರಬೇತಿ ನೀಡಿದರು.

1997ರ ಸೆಪ್ಟೆಂಬರ್‌ 28ರಂದು ಮಠದ ಚರಮೂರ್ತಿ ಆಗಿ ಸ್ವೀಕಾರ ಮಾಡಲಾಯಿತು. ಖಜೂರಿ ಗ್ರಾಮದಲ್ಲಿ ‘ನಿಜಾಚರಣೆ’ ಎಂಬ ವಸತಿ ಶಾಲೆ ಆರಂಭಿಸಿದರು. ಮಹಿಳೆಯರಿಗಾಗಿ ಹಾಲು ಉತ್ಪಾದಕರ ಸಹಕಾರ ಸಂಘವನ್ನೂ ಕಟ್ಟಿದರು. ಹೀಗೆ ಖಜೂರಿಯಲ್ಲೇ ಇದ್ದುಕೊಂಡು ಸಮಾಜ ಸೇವೆ ಮುಂದುವರಿಸಿದರು.

ವೈಚಾರಿಕ, ಕಾನೂನು ಬದ್ಧ: ಮಹಿಳೆಯನ್ನು ಉತ್ತರಾಧಿಕಾರಿ ಆಗಿ ಸ್ವೀಕರಿಸಿದ ತಮ್ಮ ನಿರ್ಧಾರ ಸಮರ್ಥಿಸಿಕೊಂಡ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿ, ‘ವೈಚಾರಿಕ ಮತ್ತು ಕಾನೂನು ಬದ್ಧ ಪದ್ಧತಿಗಳನ್ನೂ ಪೂರ್ಣಗೊಳಿಸಿದ್ದೇವೆ. ವೈದಿಕ, ಪುರೋಹಿತಶಾಹಿ ವ್ಯವಸ್ಥೆಯನ್ನು ಧಿಕ್ಕರಿಸಲು ಈ ಕ್ರಮ ಸರಿಯಾಗಿದೆ’ ಎನ್ನುತ್ತಾರೆ.‌

‘ಬಸವಾದಿ ಪ್ರಮಥರು ಕಟ್ಟ ಬಯಸಿದ ಸಮಾನತೆಯ ಸಮಾಜದ ಬಗ್ಗೆ ನಾವು ಮಾತನಾಡುತ್ತಲೇ ಬಂದಿದ್ದೇವೆ. ನೂರಾರು ವರ್ಷ, ಲಕ್ಷಾಂತರ ಸ್ವಾಮಿಗಳು ಮಾತನಾಡುತ್ತಲೇ ಇದ್ದಾರೆ. ಆದರೆ, ಆಚರಣೆಗೆ ತರುವುದು ಯಾವಾಗ? ಮಾತನಾಡಿದ್ದು ಸಾಕು; ಇನ್ನು ಆಚರಣೆ ಮಾಡಬೇಕು ಎಂದು ನಿರ್ಧರಿಸಿ ಈ ಹೆಜ್ಜೆ ಇಟ್ಟಿದ್ದೇನೆ’ ಎನ್ನುವುದು ಅವರ ಮಾತು.

‘ನಾನು ಪೀಠಾಧಿಪತಿ ಆದಾಗ ಮಠದಲ್ಲಿ ಸಾಕಷ್ಟು ತಂಟೆ– ತಕರಾರುಗಳಿದ್ದವು. ಕೋರ್ಟು– ಕಚೇರಿ ಅಲೆಯುವುದರಲ್ಲೇ ಹೆಚ್ಚು ಸಮಯ ಹಾಳಾಯಿತು. ಮುಂದೆ ಬರುವ ಪೀಠಾಧಿಪತಿಗಳಿಗೆ ಇಂಥ ತೊಡರು ಇರದಂತೆ ಮಾಡಿದ್ದೇನೆ. ಬಹುಪಾಲು ಮಠಗಳು ವಂಶಪಾರಂಪರ್ಯ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೊರಟಿವೆ. ಆದರೆ, ಬಸವಣ್ಣ ಕಟ್ಟಬಯಸಿದ ಸಮಾಜ ಇದಲ್ಲ’ ಎಂದರು.

‘ಮಠಕ್ಕೆ ಬಿಟ್ಟ ಹೆಣ್ಣುಮಕ್ಕಳು ವಯಸ್ಸಿಗೆ ಬಂದ ಮೇಲೆ ಅವರು ಬಯಸಿದರೆ ಮದುವೆ ಮಾಡಿಕೊಡುವ ಸಂಪ್ರದಾಯ ಇದೆ. ಅದನ್ನೂ ಧಿಕ್ಕರಿಸಿ ನಾವು ಉತ್ತರಾಧಿಕಾರಿ ಮಾಡಿದ್ದೇವೆ. ಯಾವುದೇ ತಕರಾರು ಇಲ್ಲದಂತೆ ಭಕ್ತರು ಕೂಡ ಇದನ್ನು ಸಮ್ಮತಿಸಿದ್ದಾರೆ’ ಎಂದರು.

‘ನನಗೀಗ 61 ವರ್ಷ ವಯಸ್ಸು. ಈ ‘ಆಲದಮರ’ ಯಾವಾಗ ಬಿದ್ದು ಹೋಗುತ್ತದೋ ಗೊತ್ತಿಲ್ಲ. ಅದು ಬಿದ್ದಾಗ ನೆರಳಿಗೆ ಕುಳಿತವರಿಗೆ ಕಷ್ಟವಾಗಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎನ್ನುವುದು ಅವರ ಮಾತು.

box

ಮಠದ ಪರಂಪರೆ, ಇತಿಹಾಸ

ಅಲ್ಲಮಪ್ರಭು ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಮಠಗಳಲ್ಲಿ ಕೋರಣೇಶ್ವರ ಮಠವೂ ಒಂದು. 1780ರಲ್ಲಿ ಚಿತ್ರದುರ್ಗದ ಶಾಂತವೀರ ಮುರುಘರಾಜೇಂದ್ರ ಶ್ರೀಗಳು ಈ ಮಠ ಕಟ್ಟಿದವರು.

ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳು ಸೇರಿ 380ಕ್ಕೂ ಹೆಚ್ಚು ಶಾಖಾ ಮಠಗಳು ಚಿತ್ರದುರ್ಗ ಮೂಲ ಮಠಕ್ಕೆ ಸೇರಿದ್ದವು. ಇದರಲ್ಲಿ ಉಳುವವನೇ ಒಡೆಯ ಕಾಯ್ದೆ ಅಡಿ ಹಲವು ಮಠಗಳು ಸ್ವತಂತ್ರ ಪೀಠಗಳಾಗಿವೆ. ಶಾಖಾ ಮಠಗಳಲ್ಲಿಯೇ ಕೋರಣೇಶ್ವರ ಮಠ ಮುಂದುವರಿದಿದೆ. ಇದರ ಉತ್ತರಾಧಿಕಾರಿ ನೇಮಕ, ಮರಿ ಪಡೆಯುವ ಎಲ್ಲ ಹಕ್ಕುಗಳನ್ನೂ ಪೀಠಾಧಿಪತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.