ಕಲಬುರಗಿ: ಬೆಳೆ ಹಾನಿ ಸಂಭವಿಸಿದ್ದಕ್ಕೆ ಪ್ರತಿಯಾಗಿ ಪ್ರಿಮಿಯಂ ಪಾವತಿಸಿದ ರೈತರ ₹ 600 ಕೋಟಿ ಬೆಳೆ ವಿಮೆ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ನಗರದ ಎಸ್‌ವಿಪಿ ವೃತ್ತದಲ್ಲಿರುವ ಇಫ್ಕೊ ಟೋಕಿಯೊ ವಿಮಾ ಕಂಪನಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈಗಾಗಲೇ ಪೂರ್ವ ಮುಂಗಾರು ಮಳೆ ಶುರುವಾಗಿದ್ದು, ರೈತರು ಬಿತ್ತನೆಗೆ ಹೊಲವನ್ನು ಸಜ್ಜುಗೊಳಿಸಬೇಕಿದೆ. ಬಿತ್ತನೆ ಬೀಜ, ಗೊಬ್ಬರ ಖರೀದಿ, ಹೊಲ ಹಸನು ಮಾಡಲು ಟ್ರ್ಯಾಕ್ಟರ್ ಬಾಡಿಗೆ ಮತ್ತಿತರ ಖರ್ಚುಗಳನ್ನು ತೂಗಿಸಲು ಬೇರೆಡೆ ಸಾಲ ಮಾಡಬೇಕಿದೆ. ಅದನ್ನು ತಪ್ಪಿಸಲು ಕೂಡಲೇ ಬಾಕಿ ಉಳಿಸಿಕೊಂಡಿರುವ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ‘ತೊಗರಿ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ವರದಿ ತರಿಸಿಕೊಂಡು ಪರಿಹಾರ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಪರಿಹಾರ ನೀಡಿಲ್ಲ. ಆ ಮೂಲಕ ಮುಖ್ಯಮಂತ್ರಿ ಅವರು ರೈತರ ಬಗ್ಗೆ ನಿಷ್ಕಾಳಜಿ ವಹಿಸಿರುವುದು ಬೇಸರದ ಸಂಗತಿ’ ಎಂದರು.
‘₹ 600 ಕೋಟಿಯನ್ನು ಜಿಲ್ಲೆಗೆ ಬೆಳೆ ವಿಮೆ ಮಂಜೂರು ಮಾಡುವುದಾಗಿ ಘೋಷಣೆ ಮಾಡಿದ್ದರು. ಇದನ್ನು ಕೇಳಿ ಎಲ್ಲ ರೈತರು ಖುಷಿಯಿಂದಿದ್ದರು. ಆದರೆ, ಘೋಷಣೆಯಾಗಿ ಎರಡು ತಿಂಗಳು ಗತಿಸಿದರೂ ಮಂಜೂರಾದಷ್ಟು ವಿಮೆ ಹಣ ಬಿಡುಗಡೆಯಾಗಿಲ್ಲ. ಬೆಳೆ ವಿಮೆ ಜಮಾ ಆಗಿದ್ದರೆ ಮುಂಗಾರು ಬಿತ್ತನೆಗೆ ರೈತರು ಹೊಲವನ್ನು ಸಜ್ಜುಗೊಳಿಸಬಹುದಿತ್ತು. ರಾಜ್ಯ ಸರ್ಕಾರ ಎರಡು ಕಂತುಗಳಲ್ಲಿ ₹ 76 ಕೋಟಿ ಹಾಗೂ ₹ 112 ಕೋಟಿ ಬೆಳೆ ವಿಮೆ ಬಿಡುಗಡೆ ಮಾಡಿದೆ. ಆದರೆ, ಪೂರ್ತಿ ಹಣವನ್ನು ಬಿಡುಗಡೆ ಮಾಡದೇ ಇರುವುದರಿಂದ ಲಕ್ಷಾಂತರ ರೈತರನ್ನು ನಡು ನೀರಿನಲ್ಲಿ ನಿಲ್ಲಿಸಿದಂತಾಗುತ್ತದೆ. ತಕ್ಷಣವೇ ಪೂರ್ತಿ ವಿಮಾ ಹಣವನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ನಂತರ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಮಾಡಿಸಿರುವ ಇಫ್ಕೊ ಟೋಕಿಯೊ ವಿಮಾ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ದಿಲೀಪ್ ನಾಗೂರೆ, ಸಿದ್ದರಾಮ ಧಣ್ಣೂರ, ದೇವು ಬಿರಾದಾರ, ಸುನಿಲ್ ಹೇರೂರು, ಚಂದಪ್ಪ ಪೂಜಾರಿ, ನಾಗೇಂದ್ರಪ್ಪ ಡಿಗ್ಗಿ, ಮಹಾದೇವ ಡಿಗ್ಗಿ, ಸಿದ್ದಣ್ಣಾ ಪಾಟೀಲ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.