ADVERTISEMENT

ಕೆಎಸ್‌ಸಿಎ ರಾಯಚೂರು ವಲಯ: ಕುಶಾಲ್–ಪಾರ್ಥಸಾರಥಿ ಹಣಾಹಣಿ ಸಾಧ್ಯತೆ

ಬಸವರಾಜ ದಳವಾಯಿ
Published 10 ನವೆಂಬರ್ 2025, 4:34 IST
Last Updated 10 ನವೆಂಬರ್ 2025, 4:34 IST
<div class="paragraphs"><p>ಕೆಎಸ್‌ಸಿಎ ಲಾಂಛನ</p></div>

ಕೆಎಸ್‌ಸಿಎ ಲಾಂಛನ

   

ಕಲಬುರಗಿ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಚುನಾವಣಾ ಕಣ ರಂಗೇರಿದ್ದು, ರಾಯಚೂರು ವಲಯದ ನಿಮಂತ್ರಕರ ಆಯ್ಕೆಗೆ ಕಣ ಬಹುತೇಕ ಸಿದ್ಧವಾಗಿದೆ.

ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್‌ ಬಣದಿಂದ ಬೀದರ್‌ನ ಕುಶಾಲ್ ಪಾಟೀಲ ಹಾಗೂ ಮಾಜಿ ಬೌಲರ್ ವೆಂಕಟೇಶ ಪ್ರಸಾದ್‌ ಅವರ ಬಣದಿಂದ ರಾಯಚೂರಿನ ಕನಕವೀಡು ಪಾರ್ಥಸಾರಥಿ ಸ್ಪರ್ಧೆ ಮಾಡಲು ಅಣಿಯಾಗಿದ್ದಾರೆ.

ADVERTISEMENT

ಪಾರ್ಥಸಾರಥಿ ಅವರು ಮೊದಲ ಬಾರಿ ಸ್ಪರ್ಧೆಗೆ ಅಣಿಯಾಗಿದ್ದರೆ, ಕುಶಾಲ್ ಪಾಟೀಲ ಅವರು ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಹಿಂದೊಮ್ಮೆ ಸ್ಪರ್ಧೆ ಮಾಡಿ ಅವರು ಸೋಲನುಭವಿಸಿದ್ದರು. ಯಾರೇ ಗೆದ್ದರೂ ರಾಯಚೂರು ವಲಯ ಹೊಸ ನಿಮಂತ್ರಕರನ್ನೂ ಕಾಣಲಿದೆ.

ಹಾಲಿ ನಿಮಂತ್ರಕ ಸುಜಿತ್ ಬೊಹ್ರಾ ಅವರ ಅವಧಿ ಸೆಪ್ಟೆಂಬರ್ 30ರಂದು ಕೊನೆಗೊಂಡಿದ್ದು, ಹೊಸ ನಿಮಂತ್ರಕರ ಆಯ್ಕೆಯವರೆಗೆ ಅವರು ಹಂಗಾಮಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 9 ವರ್ಷಗಳಿಂದ ನಿಮಂತ್ರಕರಾಗಿದ್ದರಿಂದ ಈ ಬಾರಿ ಅವರಿಗೆ ಸ್ಪರ್ಧಿಸಲು ಅವಕಾಶವಿಲ್ಲ.

ಮತ ಎಣಿಕೆ 30ಕ್ಕೆ: ನ.12ರಿಂದ 15ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದ್ದು, ನ.17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನ.19 ಅಂತಿಮ ದಿನವಾಗಿದ್ದು, ನ.30ರಂದು ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆಯೂ ನಡೆಯಲಿದೆ.

ರಾಯಚೂರು ವಲಯದಲ್ಲಿ 1,650 ಆಜೀವ ಸದಸ್ಯರು ಹಾಗೂ 350 ಸಾಂಸ್ಥಿಕ ಸದಸ್ಯರು (ಐಎಂ) ಸೇರಿ ಒಟ್ಟು 2,000 ಮಂದಿ ಮತದಾರರಿದ್ದಾರೆ.

ಕೆಎಸ್‌ಸಿಎ ರಾಯಚೂರು ವಲಯ ವ್ಯಾಪ್ತಿಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು ಬರುತ್ತವೆ.

‘ಪ್ರತಿ ಜಿಲ್ಲೆಗೊಂದು ಕ್ರೀಡಾಂಗಣ ಆಗಬೇಕು. ಗ್ರಾಮೀಣ ಮಕ್ಕಳಿಗೆ ಸೌಲಭ್ಯಗಳು ದೊರೆಯಬೇಕು. ನಂತರ ತಾಲ್ಲೂಕು ಮಟ್ಟದಲ್ಲೂ ಕ್ರೀಡಾಂಗಣಗಳಾಗಬೇಕು. ರಣಜಿ ಪಂದ್ಯಗಳು ನಮ್ಮ ವಲಯದಲ್ಲಿ ನಡೆಯುಂತಾಗಬೇಕು ಎಂಬವು ನನ್ನ ಮುಂದಿರುವ ಸದ್ಯದ ಯೋಜನೆಗಳು’ ಎಂದು ನಿಮಂತ್ರಕ ಅಭ್ಯರ್ಥಿ ಕುಶಾಲ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನೊಂದು ವಾರದಲ್ಲಿ ನಿಮಂತ್ರಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವೆ. ದಕ್ಷಿಣ ಕರ್ನಾಟಕ ಭಾಗದವರಿಗೆ ಸಿಕ್ಕುವ ಬೆಲೆ ನಮ್ಮ ಭಾಗದವರಿಗೆ ಇಲ್ಲ. ಅದಕ್ಕಾಗಿ ಹೋರಾಡುವೆ’ ಎಂದು ಕನಕವೀಡು ಪಾರ್ಥಸಾರಥಿ ತಿಳಿಸಿದರು.

‘ಕೆಎಸ್‌ಸಿಎ ಹೆಸರಿನಲ್ಲಿರುವ ಕ್ರೀಡಾಂಗಣ ರಾಯಚೂರಿನಲ್ಲಿದ್ದು, ಅದು ಅಭಿವೃದ್ಧಿ ಆಗಿಲ್ಲ. ಈ ನಿಟ್ಟಿನಲ್ಲಿ ರಾಜು ಕುಳಗೇರಿ ಅವರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಬೆಲೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಕ್ರೀಡಾಂಗಣಗಳ ಅಭಿವೃದ್ಧಿಗೆ ಅವರನ್ನೂ ಸೇರಿಸಿಕೊಂಡು ಹೋರಾಟ ನಡೆಸಲಾಗುವುದು’ ಎಂದು ಅವರು ಹೇಳಿದರು.

ಕಲಬುರಗಿಯಲ್ಲೂ ಒಂದು ಕ್ರೀಡಾಂಗಣ ಆಗಬೇಕು. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗಬೇಕು ಎಂಬುದು ನನ್ನ ಆಸೆ
ಕನಕವೀಡು ಪಾರ್ಥಸಾರಥಿ ನಿಮಂತ್ರಕ ಸ್ಥಾನದ ಅಭ್ಯರ್ಥಿ
ರಾಯಚೂರಿನಲ್ಲಿ ಕ್ರೀಡಾಂಗಣಕ್ಕೆ 12 ವರ್ಷಗಳ ಹಿಂದೆ ಜಮೀನು ದಾನವಾಗಿ ಕೊಟ್ಟಿದ್ದಾರೆ. ಅಲ್ಲಿ ಸುಸಜ್ಜಿತ ಕ್ರೀಡಾಂಗಣವಾಗಬೇಕು. ನಿಮಂತ್ರಕನಾಗಿ ಆಯ್ಕೆಯಾದರೆ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ
ಕುಶಾಲ್ ಪಾಟೀಲ ನಿಮಂತ್ರಕ ಸ್ಥಾನದ ಅಭ್ಯರ್ಥಿ
ನಮ್ಮ ಭಾಗದಲ್ಲಿ ಹೊಸ ಕ್ರೀಡಾಂಗಣಗಳು ಆಗಬೇಕು. ಅದರಿಂದ ಎಷ್ಟೋ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗಲಿದೆ. ನಿಮಂತ್ರಕರು ಆ ನಿಟ್ಟಿನಲ್ಲಿ ಗಮನಹರಿಸಬೇಕು
ಬಸವರಾಜ ಕೋಸಗಿ ಕ್ರಿಕೆಟ್‌ ಕೋಚ್ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.