ADVERTISEMENT

‘ನಿವೇಶನಗಳ ಬಿಡುಗಡೆಗೆ ಕುಡಾ ನಿರ್ಲಕ್ಷ್ಯ’: ಯಶಸ್ವಿ ಡೆವಲಪರ್‌ ಕಂಪನಿಯ ಆರೋಪ

​ಪ್ರಜಾವಾಣಿ ವಾರ್ತೆ
Published 10 ಮೇ 2025, 14:06 IST
Last Updated 10 ಮೇ 2025, 14:06 IST
ಅಣ್ಣಾಸಾಹೇಬ ಪಾಟೀಲ
ಅಣ್ಣಾಸಾಹೇಬ ಪಾಟೀಲ   

ಕಲಬುರಗಿ: ‘ನಗರದ ರಾಮಮಂದಿರ ಸಮೀಪ 11 ಎಕರೆ 7 ಗಂಟೆ ಜಾಗದಲ್ಲಿ ಅಭಿವೃದ್ಧಿಪಡಿಸಿರುವ ಹಾರಕೂಡ ಶ್ರೀ ಯಶಸ್ವಿ ಬಡಾವಣೆಯ ಶೇ 60ರಷ್ಟು ನಿವೇಶನಗಳ ಬಿಡುಗಡೆ ಪತ್ರ (ರಿಲೀಸ್‌ ಲೆಟರ್‌) ನೀಡಲು ಕಲಬುರಗಿ ಅಭಿವೃದ್ಧಿ ಪ್ರಾಧಿಕಾರವು ಮೀನಮೇಷ ಎನಿಸುತ್ತಿದೆ’ ಎಂದು ಯಶಸ್ವಿ ಡೆವಲಪರ್‌ ಕಲಬುರಗಿ ಸಿಎಂಡಿ ಅಣ್ಣಾಸಾಹೇಬ ಪಾಟೀಲ ಆರೋಪಿಸಿದರು.

‘ಬಡಾವಣೆಯನ್ನು ಸರ್ಕಾರದ ಎಲ್ಲ ಸಂಬಂಧಪಟ್ಟ ಇಲಾಖೆಗಳಿಂದ ಅನುಮೋದನೆ ಪಡೆದು ಅಭಿವೃದ್ಧಿಪಡಿಸಲಾಗಿದೆ. ಎಲ್ಲ ವಹಿವಾಟನ್ನೂ ಚೆಕ್‌ ಮೂಲಕವೇ ನಡೆಸಲಾಗಿದೆ. ಶೇ 40ರಷ್ಟು ನಿವೇಶನಗಳಿಗೆ ಬಿಡುಗಡೆ ಪತ್ರವನ್ನೂ ಕುಡಾ ಈಗಾಗಲೇ ನೀಡಿದೆ. ಆದರೆ, ಮಿಕ್ಕುಳಿದ ಶೇ 60ರಷ್ಟು ನಿವೇಶನಗಳ ಬಿಡುಗಡೆ ಪತ್ರ ನೀಡಲು ಅನಗತ್ಯವಾಗಿ ಹಿಂದೇಟು ಹಾಕುತ್ತಿದೆ’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಬಡಾವಣೆಗೆ ಸಂಬಂಧಿಸಿದಂತೆ ಸಂಸ್ಥೆಯ ಎಲ್ಲ ದಾಖಲೆಗಳು ತೃಪ್ತಿಕರವಾಗಿವೆ ಎಂದು ಕಲಬುರಗಿ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಪ್ರಮಾಣಪತ್ರವನ್ನೂ ನೀಡಿದೆ. ಎಲ್ಲವೂ ನಿಯಮಬದ್ಧವಾಗಿಯೇ ನಡೆದರೂ, ಆದೇಶ ಪತ್ರ ನೀಡಲು ಕುಡಾ ವಿಳಂಬ ಮಾಡುತ್ತಿದೆ. ಕುಡಾ ಬಿಡುಗಡೆ ಪತ್ರ ನೀಡದ ಕಾರಣ ನಿವೇಶನಗಳನ್ನು ಖರೀದಿಸಿದ ಗ್ರಾಹಕರ ಹೆಸರಿಗೆ ನೋಂದಾಯಿಸಿಕೊಡಲು ಆಗುತ್ತಿಲ್ಲ. ಇದರಿಂದ ನಮ್ಮ ಕಂಪನಿ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಗ್ರಾಹಕರು ನಮ್ಮ ಮೇಲಿಟ್ಟ ನಂಬಿಕೆಗೂ ಚ್ಯುತಿ ಬರುತ್ತಿದೆ’ ಎಂದು ಬೇಸರಿಸಿದರು.

ADVERTISEMENT

‘ಬಿಡುಗಡೆ ಪತ್ರ ನೀಡುವಂತೆ ಹಲವು ಬಾರಿ ಕುಡಾಗೆ ಪತ್ರ ಬರೆಯಲಾಗಿದೆ. ಆದರೆ, ಸಭೆಯಲ್ಲಿ ಅನುಮೋದನೆ ಪಡೆದ ಬಳಿಕ ಬಿಡುಗಡೆ ಪತ್ರ ನೀಡುವುದಾಗಿ ಹೇಳಿತ್ತು. ಈ ಸಂಬಂಧ ಕುಡಾ 2025ರ ಏಪ್ರಿಲ್‌ ಮೊದಲ ವಾರದಲ್ಲಿ ಸಭೆ ನಡೆಸಿತ್ತು. ಅದಾದ ತಿಂಗಳಾದರೂ ಬಿಡುಗಡೆ ಪತ್ರ ನೀಡುವ ಆದೇಶ ಮಾಡಿಲ್ಲ. ಇದರ ಹಿಂದಿನ ಹಿತಾಸಕ್ತಿ ಏನು?’ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯಶಸ್ವಿ ಡೆವಲಪರ್‌ನ ಕಾವೇರಿ ಪಾಟೀಲ, ಭೂಮಾಲೀಕ ದೇವೇಂದ್ರಪ್ಪ ನಂದಿಕೂರ ಇದ್ದರು.

‘ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಅಗತ್ಯ’

ಆರ್ಕಿಟೆಕ್ಟ್‌ ಭರತ್‌ ಭೂಷಣ್‌ ಮಾತನಾಡಿ ‘ನಿಯಮದಂತೆ ಕುಡಾ ಪ್ರತಿ ತಿಂಗಳೂ ಸಭೆ ನಡೆಸಬೇಕು. ಆದರೆ 14 ತಿಂಗಳಲ್ಲಿ ಬರೀ ಮೂರು ಸಭೆ ಮಾತ್ರವೇ ನಡೆಸಲಾಗಿದೆ. ಹೀಗಾದರೆ ನಗರ ಅಭಿವೃದ್ಧಿ ಆಗುವುದು ಹೇಗೆ? ಕಲಬುರಗಿ ನಗರದ ಮಾಸ್ಟರ್‌ ಪ್ಲಾನ್‌ ರೂಪಿಸಲು ನೆಪಗಳು ಕಾರಣಗಳನ್ನು ಒಡ್ಡಿ ಹಿಂದೇಟು ಹಾಕಲಾಗುತ್ತಿದೆ. 2022ರಿಂದ ಈತನಕ ಅಂದಾಜಿನಂತೆ ಎರಡು ಸಾವಿರ ಎಕರೆ ಪ್ರದೇಶ ಕೃಷಿಯೇತರ ಜಮೀನಾಗಿ ಪರಿವರ್ತನೆಯಾಗಿದೆ. ಈ ಪ್ರದೇಶದಲ್ಲಿ ಬಡಾವಣೆಗಳು ಅಭಿವೃದ್ಧಿಯಾದರೆ  ಮಾಸ್ಟರ್‌ ಪ್ಲಾನ್‌ ರೂಪಿಸಿದ ಬಳಿಕ ಅದಕ್ಕೆ ತಕ್ಕಂತೆ ಮತ್ತೆ ಸರಿಪಡಿಸುವುದು ಕಷ್ಟಸಾಧ್ಯ. ಹೀಗಾಗಿ ಸುಸ್ಥಿರ ಅಭಿವೃದ್ಧಿಗಾಗಿ ಕಲಬುರಗಿಗೆ ತ್ವರಿತವಾಗಿ ಮಾಸ್ಟರ್‌ ರೂಪಿಸುವುದು ಅಗತ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.