ADVERTISEMENT

ಕಲಬುರಗಿ: ಕುರುಬ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 3:16 IST
Last Updated 16 ನವೆಂಬರ್ 2021, 3:16 IST
ಹನುಮೇಶ ಕೊಡ್ಲಿ
ಹನುಮೇಶ ಕೊಡ್ಲಿ   

ಕಲಬುರಗಿ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಜಿಲ್ಲೆಯಲ್ಲೂ ಒಂದು ಕ್ಷೇತ್ರದ ಟಿಕೆಟ್‌ಅನ್ನು ಕುರುಬ ಸಮಾಜದವರಿಗೆ ನೀಡಬೇಕು’ ಎಂದು ಕಲ್ಯಾಣ ಕರ್ನಾಟಕ ಕುರುಬರ (ಗೊಂಡ) ರಾಜಕೀಯ ಜಾಗೃತಿ ಹೋರಾಟ ಸಮಿತಿಯ ವಿಭಾಗೀಯ ಅಧ್ಯಕ್ಷ ಹನುಮೇಶ ಕೊಡ್ಲಿ ಆಗ್ರಹಿಸಿದರು.

‘ಈ ಭಾಗದ ಏಳೂ ಜಿಲ್ಲೆಗಳು ಸೇರಿ 41 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಕುರುಬ ಸಮಾಜಕ್ಕೆ ಕೇವಲ ಒಂದು ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಯಲ್ಲೂ 2ರಿಂದ 3 ಲಕ್ಷದಷ್ಟು ಕುರುಬ ಸಮಾಜದ ಮತದಾರರು ಇದ್ದಾರೆ. ಏಳೂ ಜಿಲ್ಲೆಗಳು ಸೇರಿ 25 ಲಕ್ಷದಷ್ಟು ಮತದಾರರ ಇದ್ದರೂ ಕೇವಲ ಮತ ಹಾಕುವುದಕ್ಕೇ ಸೀಮಿತವಾಗಿದ್ದೇವೆ. ನಮ್ಮ ಸಮಾಜಕ್ಕೆ ಯಾವುದೇ ಪಕ್ಷದಲ್ಲೂ ಸಮರ್ಪಕ ಪ್ರಾತಿನಿಧ್ಯ ಸಿಕ್ಕಿಲ್ಲ’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಈ ಭಾಗದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಕನಕಭವನ ನಿರ್ಮಿಸಬೇಕು. ಕನಕ ಗುರುಪೀಠಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿ ಮಿತಿಯನ್ನು ಹೆಚ್ಚಿಸಬೇಕು. ಹಿಂದುಳಿದ ವರ್ಗಗಳ ಜಾತಿ ಗಣತಿ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಇದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕೂಡಲೇ ವರದಿಯನ್ನು ಪರಿಗಣಿಸಿ ಅದರ ಅನುಸಾರ ಸೌಲಭ್ಯಗಳನ್ನು ಒದಗಿಸಬೇಕು’‌ ಎಂದೂ ಅವರು ಆಗ್ರಹಿಸಿದರು.

ADVERTISEMENT

ಜೆ.ಎಂ. ಕೊರಬು ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷ ಜೆ.ಎಂ.ಕೊರಬು ಮಾತನಾಡಿ, ‘ಈಗಾಗಲೇ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಜಾರಿ ಇರುವಂತೆ ಹಿಂದುಳಿದ ವರ್ಗಕ್ಕೂ (ಒಬಿಸಿ) ಕೂಡಲೇ ಮೀಸಲಾತಿ ನಿಗದಿ ಮಾಡಬೇಕು. ಅತ್ಯಂತ ಹಿಂದುಳಿದ ಕುರುಬ ಸಮಾಜವು ಮುಖ್ಯವಾಹಿನಿಗೆ ಬರಬೇಕಾದರೆ ರಾಜಕೀಯ ಪ್ರಾತಿನಿಧ್ಯ ಮುಖ್ಯ. ಆದ್ದರಿಂದ ಎಲ್ಲ ಪಕ್ಷಗಳೂ ಜಿಲ್ಲೆಯಲ್ಲಿ ತಲಾ ಒಂದೊಂದು ಕ್ಷೇತ್ರವನ್ನು ಕುರುಬ ಸಮಾಜಕ್ಕೇ ಬಿಡಬೇಕು’ ಎಂದರು. ವಕೀಲ ದುರುಗೇಶ ಕ್ಯಾತ್ನಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.