
ಕಲಬುರಗಿ: ಬಡಾವಣೆ ನಿರ್ಮಾಣವಾಗಿ ದಶಕಗಳು ಕಳೆದರೂ ನಗರದ ಹೊರವಲಯದ ಅಫಜಲಪುರ ರಸ್ತೆಯ ಕುಶಿ ನಗರವು ಪಕ್ಕಾ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯದಂತಹ ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಇಲ್ಲಿನ ನಿವಾಸಿಗಳು ಇನ್ನೂ ಕಚ್ಚಾ ರಸ್ತೆಯಲ್ಲಿಯೇ ಸಂಚರಿಸಬೇಕಿರುವುದರಿಂದ ಮುಖ್ಯ ರಸ್ತೆಗೆ ಬಂದು ಸಕಾಲಕ್ಕೆ ಬಸ್ ಹಿಡಿಯಲು ಆಗುತ್ತಿಲ್ಲ. ವಿದ್ಯಾರ್ಥಿಗಳು ಸಕಾಲಕ್ಕೆ ಶಾಲಾ–ಕಾಲೇಜುಗಳಿಗೆ ಹೋಗಿ ಬರಲು ಆಗುತ್ತಿಲ್ಲ. ನಿತ್ಯ ಇಲ್ಲಿಂದ ಕೆಲಸಕ್ಕೆ ಹೋಗಿ ಬರುವ ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರು ಹಾಗೂ ಹಿರಿಯ ನಾಗರಿಕರು ಮೂಲಸೌಕರ್ಯದ ಕೊರತೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದ ಸಮಯದಲ್ಲಂತೂ ರಸ್ತೆಯ ತುಂಬ ಕೆಸರು ತುಂಬಿಕೊಳ್ಳುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ.
ಕುಶಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಹಳ ಇದ್ದು, ಜೀವ ಭಯದಲ್ಲೇ ಸಂಚರಿಸಬೇಕಿದೆ. ಬಡಾವಣೆಯಲ್ಲಿ ಉದ್ಯಾನಗಳೂ ಇಲ್ಲದೇ ಇರುವುದರಿಂದ ಹಿರಿಯರು ವಾಯುವಿಹಾರ ಮಾಡುವುದು, ಮಕ್ಕಳು ಆಟವಾಡುವುದಕ್ಕೆ ಸೂಕ್ತ ಜಾಗ ಇಲ್ಲದಂತಾಗಿದೆ. ಈ ಬಡಾವಣೆಯಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯೂ ಇಲ್ಲದಿರುವುದರಿಂದ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುವುದು ದುಸ್ತರವಾಗಿದೆ. ಸಿಟಿ ಬಸ್‌ಗಳ ಸಂಚಾರ ಇಲ್ಲದಿರುವುದರಿಂದ ಮುಖ್ಯ ರಸ್ತೆಗೆ ಬಂದು ಆಟೊ ರಿಕ್ಷಾಗಳನ್ನು ಹಿಡಿದುಕೊಂಡು ನಗರಕ್ಕೆ ಬರಬೇಕಿದೆ ಎನ್ನುತ್ತಾರೆ ನಿವಾಸಿಗಳು.
ಅಫಜಲಪುರ ರಸ್ತೆಯ ಮೇಳಕುಂದಾ ಹಾಗೂ ಮಿಣಜಗಿ ಗ್ರಾಮಕ್ಕೆ ಹೋಗುವ ಬಸ್‌ಗಳನ್ನು ಕುಶಿ ನಗರದ ಸಮೀಪವಿರುವ ಖರ್ಗೆ ಕಾಲೊನಿ ಬಳಿ ನಿಲ್ಲಿಸುವುದಿಲ್ಲ. ಹೀಗಾಗಿ, ತುರ್ತು ಇದ್ದವರು ಸೂಕ್ತ ಬಸ್ ಸೌಲಭ್ಯ ಇಲ್ಲದೇ ಪರದಾಡಬೇಕಾಗುತ್ತದೆ.
‘10 ವರ್ಷಗಳಿಂದ ಕುಶಿನಗರ ಬಡಾವಣೆಯ ಅಭಿವೃದ್ಧಿ ಆಗಿಲ್ಲ. ರಸ್ತೆ, ಚರಂಡಿ, ಒಳಚರಂಡಿ, ಬಸ್ ಸೌಕರ್ಯದಂತಹ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಬಡಾವಣೆಯ ನಿವಾಸಿ ಆನಂದರಾವ್ ಹೊಡಲ್.
ಕುಶಿ ನಗರದಲ್ಲಿ ರಸ್ತೆ ಚರಂಡಿ ಬಸ್ ಸೌಕರ್ಯ ಕಲ್ಪಿಸಿದರೆ ಎಷ್ಟೋ ಸಹಾಯವಾಗುತ್ತದೆ. ಇಲ್ಲದಿದ್ದರೆ ನಗರಕ್ಕೆ ಹೊಂದಿಕೊಂಡಂತೆ ಇದ್ದರೂ ನಗರಕ್ಕೆ ಸೇರದವರು ಎಂಬ ಅನಾಥ ಪ್ರಜ್ಞೆ ಬೆಳೆಯುತ್ತದೆ. ಕೂಡಲೇ ಅಗತ್ಯ ಸೌಕರ್ಯ ಕಲ್ಪಿಸಬೇಕುಪೂರ್ಣಿಮಾ ಬೆಣ್ಣೂರಕರ್ ಕುಶಿ ನಗರ ನಿವಾಸಿ ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.