ADVERTISEMENT

‘ಧ್ಯಾನಶೀಲತೆಗೆ ಕೊಂಡೊಯ್ಯುವ ಕುವೆಂಪು ಸಾಹಿತ್ಯ’

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 15:55 IST
Last Updated 29 ಅಕ್ಟೋಬರ್ 2019, 15:55 IST

ಕಲಬುರ್ಗಿ: ಕುವೆಂಪು ಸಾಹಿತ್ಯಕ್ಕೆ ಸಮಾಜವನ್ನು ಧ್ಯಾನಶೀಲತೆಗೆ ಕೊಂಡೊಯ್ಯುವ ಶಕ್ತಿ ಇದೆ ಎಂದು ಹಿರಿಯ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಮತ್ತು ಅಭಿನವ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ‘ಬಾ ಕುವೆಂಪು ದರ್ಶನಕೆ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮೇಲ್ವರ್ಗದ ಸ್ವಾತ್ತಾಗಿದ್ದ ‘ಅಕ್ಷರ’ ಮತ್ತು ‘ಧಾರ್ಮಿಕತೆ’ಯನ್ನು ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ಸ್ತರದ ಕೊನೆಯ ಶ್ರೇಣಿಯ ಶೂದ್ರ ಮತ್ತು ರೈತನನ್ನು ತಪಸ್ವಿಯಾಗಿಸಿದ್ದು, ಯೋಗಿಯನ್ನಾಗಿಸಿದ್ದು ಸಾಮಾನ್ಯ ಸಾಧನೆಯಲ್ಲ ಎಂದರು.

ADVERTISEMENT

ಆ ಮೂಲಕ ಸಾಹಿತ್ಯದ ಮೂಲಕ ಸಾಮಾಜಿಕವಾಗಿಯೂ, ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಿದರು. ಅವರು ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ವಾಲ್ಮೀಕಿಯಿಂದ ಪ್ರಭಾವಿತರಾಗಿದ್ದರು ಎಂದು ಹೇಳಿದರು.

ಪುಕೊ ಮತ್ತು ಆಶಿಷ್‌ ನಂದಿಯಂತಹ ವಿಮರ್ಶಕರು ‘ಪ್ರಭುತ್ವ’ ಮತ್ತು ‘ದಮನ’ ಸಮಾಜದ ಚಲನಶೀಲತೆಯನ್ನು ನಿಯಂತ್ರಿಸುತ್ತವೆ ಎಂದು ಅಭಿಪ್ರಾಯಪಡುತ್ತಾರೆ. ಈ ವಿಚಾರವನ್ನು ಇವರಿಗಿಂತ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಪ್ರತಿಕ್ರಿಯಿಸಿರುವುದನ್ನು ನೋಡಿದರೆ ವಸಾಹತುಶಾಹಿತೆ ತೋರಿದ ಪ್ರತಿಭಟನೆಯಂತೆ ಕಾಣುತ್ತದೆ ಎಂದರು.

ಕವಿಯತ್ರಿ ಪಿ.ಚಂದ್ರಿಕಾ ಪ್ರತಿಕ್ರಿಯಿಸಿ, ಕುವೆಂಪು ನಮ್ಮ ಕಾಲದಲ್ಲಿ ವೈಚಾರಿಕ ಪ್ರಜ್ಞೆಯನ್ನು ವಿಸ್ತರಿಸಿದವರು. ಏಕಾಕೃತಿಯ ಚಿಂತನಶೀಲತೆಯಿಂದ ಬಹುಮುಖಿ ಚಿಂತನ ಮಾದರಿಗಳ ಕಡೆಗೆ ನಮ್ಮನ್ನು ಕರೆದೊಯ್ದರು ಎಂದು ವಿವರಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿಕ್ರಮ ವಿಸಾಜಿ, ಪ್ರಾಧ್ಯಾಪಕರಾದ ಡಾ.ಅಪ್ಪಗೆರೆ ಸೋಮಶೇಖರ, ಡಾ.ಶಿವಗಂಗಾ ರುಮ್ಮಾ ಸಂವಾದದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.