ADVERTISEMENT

ಕಲಬುರಗಿ: ಮುಳ್ಳುಕಂಟಿಯ ನಡುವೆ ಮರೆಯಾದ ಬದುಕು

ಅಲೆಮಾರಿಗಳಿಗೆ ದೂಳು ಮೆತ್ತಿದ ತಾಡಪತ್ರಿಗಳೇ ಸೂರು, ಸ್ನಾನದ ಮನೆ, ವಿದ್ಯುತ್, ಕುಡಿಯುವ ನೀರಿನ ಸೌಕರ್ಯ ಮರೀಚಿಕೆ

ಭೀಮಣ್ಣ ಬಾಲಯ್ಯ
Published 5 ಡಿಸೆಂಬರ್ 2024, 7:13 IST
Last Updated 5 ಡಿಸೆಂಬರ್ 2024, 7:13 IST
ಕಲಬುರಗಿಯ ರಾಮನಗರದಲ್ಲಿರುವ ಅಲೆಮಾರಿಗಳ ಜೋಪಡಿಗಳು
ಕಲಬುರಗಿಯ ರಾಮನಗರದಲ್ಲಿರುವ ಅಲೆಮಾರಿಗಳ ಜೋಪಡಿಗಳು   

ಕಲಬುರಗಿ: ‘ವಿದ್ಯುತ್ ಸಂಪರ್ಕವಿಲ್ಲದ ಕಾರಣ ರಾತ್ರಿ ಪೂರ್ತಿ ಮೈಯೆಲ್ಲಾ ಕಣ್ಣಾಗಿದ್ದು ಮಕ್ಕಳನ್ನು ತೋಳ ತೆಕ್ಕೆಯಲ್ಲಿಟ್ಟುಕೊಂಡು ಕಾಪಿಟ್ಟುಕೊಳ್ಳಬೇಕು. ದೂರದಿಂದ ನೀರು ಹೊತ್ತು ತರಲು ಕೆಲಸ ಬಿಟ್ಟು ಒಬ್ಬರು ಮನೆಯಲ್ಲಿರುವುದು ಅನಿವಾರ್ಯ. ಕಾಗದ–ಪತ್ರ ಇಲ್ಲದ ಕಾರಣ ಮಕ್ಕಳಿಗೆ ಶಾಲೆಯ ಮುಖ ನೋಡಲು ಸಾಧ್ಯವಾಗಿಲ್ಲ...’

ದಟ್ಟವಾದ ಮುಳ್ಳುಕಂಟಿಗಳ ನಡುವೆ ಅಲ್ಲಲ್ಲಿ ಖಾಲಿ ಜಾಗದಲ್ಲಿ ಬದುಕು ಹರಿವಿಕೊಂಡು ಕತ್ತಲೆಯಲ್ಲಿ ಬದುಕುತ್ತಿರುವ ರಾಮನಗರದ ಅಲೆಮಾರಿ ಸಮುದಾಯದ ಮಾರುತಿ ಅವರು ಅಸ್ಥಿರ ಬದುಕಿನ ತೊಳಲಾಟ ಬಿಚ್ಚಿಟ್ಟ ಪರಿ ಇದು.

ಹುಮನಾಬಾದ್ ವರ್ತುಲ ರಸ್ತೆಯಿಂದ ಆಳಂದ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ರಾಮನಗರ ಸಿಗುತ್ತದೆ. ಸಮತಟ್ಟಲ್ಲದ ನೆಲದಲ್ಲಿ ತಗ್ಗು–ಗುಂಡಿಗಳನ್ನು ಹಾದು ಮುಂದೆ ಸಾಗಿದರೆ ದಟ್ಟವಾದ ಮುಳ್ಳುಕಂಟಿ ಹಾಗೂ ಕಟ್ಟಡ ತ್ಯಾಜ್ಯ ಸುತ್ತುವರಿದ ಸ್ಥಳದಲ್ಲಿ ಈ ಕುಟುಂಬಗಳ ಜೋಪಡಿಗಳು ತಲೆ ಎತ್ತಿರುವುದು ಕಾಣಸಿಗುತ್ತದೆ.

ADVERTISEMENT

ವಾರ್ಡ್‌ ಸಂಖ್ಯೆ–2ರ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ 45ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸವಾಗಿವೆ. ಇವರು ಜೀವನ ನಿರ್ವಹಣೆಗೆ ಪ್ಲಾಸ್ಟಿಕ್ ಬಿಂದಿಗೆ, ಪಾತ್ರೆ, ಪಿನ್‌ ಮಾರಾಟ ಹಾಗೂ ಕೂಲಿ ಕೆಲಸ ನೆಚ್ಚಿಕೊಂಡಿದ್ದಾರೆ.

ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಯ ಮೂಲಕ ಕೊರತೆ ಸುರುಳಿ ಬಿಚ್ಚಿಕೊಳ್ಳುತ್ತದೆ. ಶೌಚಾಲಯ, ಸೂರು, ದೂಳು, ರಸ್ತೆ ಸಮಸ್ಯೆ ಆ ಸುರುಳಿಯನ್ನು ದೊಡ್ಡದಾಗಿಸುತ್ತ ಸಾಗುತ್ತದೆ.

ಇಲ್ಲಿನ ಜನ ಮುಳ್ಳು–ಕಂಟಿಯ ನಡುವೆ ಮರೆಯಾಗಿ ಅಸ್ತಿತ್ವವೇ ಇಲ್ಲದವರಂತೆ ಜೀವಿಸುತ್ತಿದ್ದಾರೆ. ದೂಳು ಮೆತ್ತಿದ ತಾಡಪತ್ರಿಗಳೇ ಸೂರು, ಸ್ನಾನದ ಮನೆ. ನೀರಿನ ಸೌಕರ್ಯ ಇಲ್ಲದ ಕಾರಣ ಎಲ್ಲ ಋತುಗಳೂ ಅವರಿಗೆ ಬರಗಾಲದ ಅನುಭವವನ್ನು ನೀಡುತ್ತವೆ. ಬೆಳಕಿಗೆ ಅವರು ಇಂದಿಗೂ ಕಂದಿಲು ನೆಚ್ಚಿಕೊಂಡಿದ್ದಾರೆ. ಸುತ್ತಲು ಮುಳ್ಳು–ಕಂಟಿಗಳಿರುವ ಕಾರಣ ವಿಷಜಂತುಗಳ ಭಯವೂ ಅವರನ್ನು ಕಾಡುತ್ತಿದೆ.

‘ವಿದ್ಯುತ್, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿ’: ‘ನೀರು ತರಲು ಬಡಾವಣೆಗಳ ಮನೆಗಳಿಗೆ ತೆರಳಿದರೆ ಬಿಟ್ಟುಕೊಳ್ಳುವುದಿಲ್ಲ. ಬಾಯಿಗೆ ಬಂದಂತೆ ಬಯ್ಯುತ್ತಾರೆ. ಬೈಗುಳ ತಿಂದು ಪ್ರಯಾಸಪಟ್ಟು ನೀರನ್ನು ಹೊತ್ತು ತರುತ್ತೇವೆ. ವಿದ್ಯುತ್ ಸೌಕರ್ಯ ಇಲ್ಲದ ಕಾರಣ ರಾತ್ರಿ ವೃದ್ಧರು ಹಾಗೂ ಮಕ್ಕಳಿಗೆ ತೊಂದರೆಯಾಗುತ್ತದೆ. ಕುಡಿಯುವ ನೀರು ಹಾಗೂ ವಿದ್ಯುತ್ ಸೌಕರ್ಯ ಒದಗಿಸಿದರೆ ಪುಣ್ಯ ಬರುತ್ತದೆ’ ಎಂದು ಮಹಿಳೆಯೊಬ್ಬರು ಕಣ್ಣೀರು ಒರೆಸಿಕೊಂಡರು.

‘ಅಲೆಮಾರಿಗಳು ವಾಸಿಸುತ್ತಿರುವ ಈ ಪ್ರದೇಶವು ಸರ್ಕಾರಿ–ಖಾಸಗಿ ಮಾಲೀಕತ್ವದ್ದಲ್ಲಿದೆ. ಇದನ್ನೇ ಮುಂದಿಟ್ಟುಕೊಂಡು ಇವರ ಬೇಕು–ಬೇಡಿಕೆಗಳಿಗೆ ಯಾರೂ ಕಿವಿಯಾಗುತ್ತಿಲ್ಲ. ನಾವು ಹಕ್ಕುಪತ್ರ ಕೇಳುತ್ತಿಲ್ಲ. ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮತ್ತು ನಿರ್ಮೂಲನೆ ಕಾಯ್ದೆಯಲ್ಲಿ ಸೌಕರ್ಯ ನೀಡಲು ಅವಕಾಶವಿದ್ದರೂ ಮಂಡಳಿ ಸೌಕರ್ಯ ನೀಡಲು ಮುಂದಾಗುತ್ತಿಲ್ಲ’ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ರೇಣುಕಾ ಸರಡಗಿ ಆರೋಪಿಸಿದರು.ಅಧಿಕಾರಿಗಳು ಗಮನಹರಿಸಬೇಕು ಮಾರುತಿ ನಿವಾಸಿ

ಬಿಂದಿಗೆ ಮಾರಾಟಕ್ಕೆ ತೆರಳುತ್ತಿರುವ ಮಹಿಳೆ
ಅಲೆಮಾರಿಗಳ ಸ್ನಾನದ ಮನೆ
ಅಲೆಮಾರಿಗಳು ಕನಿಷ್ಠ ಸೌಕರ್ಯಗಳಿಲ್ಲದೆ ಜೀವಿಸುತ್ತಿದ್ದಾರೆ. ಸ್ಲಂ ಘೋಷಣೆಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಸರ್ಕಾರ ಬೇಗ ಸೌಕರ್ಯ ಒದಗಿಸಬೇಕು‌
ರೇಣುಕಾ ಸರಡಗಿ ಜಿಲ್ಲಾ ಸಂಚಾಲಕಿ ಸ್ಲಂ ಜನಾಂದೋಲನ ಕರ್ನಾಟಕ ಸಂಘ
ಮಳೆಗಾಲದಲ್ಲಿ ಜೋಪಡಿಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತದೆ. ಮೂಲಸೌಕರ್ಯಗಳಿಲ್ಲದ ಕಾರಣ ಪ್ರಯಾಸದಿಂದ ಜೀವಿಸುತ್ತಿದ್ದೇವೆ.
ಅಧಿಕಾರಿಗಳು ಗಮನಹರಿಸಬೇಕು ಮಾರುತಿ ನಿವಾಸಿ
ಸಮಸ್ಯೆ ಗಮನಕ್ಕೆ ಬಂದಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದ್ದರೆ ಮಹಾನಗರ ಪಾಲಿಕೆಯವರು ಬಗೆಹರಿಸುತ್ತಾರೆ. ಈ ಸಂಬಂಧ ಪಾಲಿಕೆಗೆ ಮನವಿ ಮಾಡಲಾಗುವುದು
ಶ್ರೀಧರ ಸಾರವಾಡ ಎಇಇ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ
ಚಿಕ್ಕ ಹೆಗಲುಗಳ ಮೇಲೆ ಚಿಂದಿ ಚೀಲ
ದಾಖಲೆಗಳಿಲ್ಲದ ಕಾರಣ ಇಲ್ಲಿನ ಬಹುತೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪಾಟಿ ಚೀಲದ ಬದಲು ಚಿಂದಿ ಚೀಲ ಚಿಕ್ಕ ಹೆಗಲುಗಳನ್ನೇರಿದೆ. ಪಾಲಕರು ಪ್ಲಾಸ್ಟಿಕ್ ಕೊಡ ಮಾರಲು ಹಾಗೂ ಕೂಲಿ ಕೆಲಸಕ್ಕೆ ತೆರಳಿದರೆ ಮಕ್ಕಳು ನಗರದ ನೆಹರೂ ಗಂಜ್‌ ಸೂಪರ್ ಮಾರುಕಟ್ಟೆ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿಂದಿ ಆಯುತ್ತಾರೆ.
ಪ್ಲಾಸ್ಟಿಕ್‌ ಬಿಂದಿಗೆಗೆ ತಗ್ಗಿದ ಬೇಡಿಕೆ
‘ಹೆಚ್ಚಿನ ಜನರು ಸ್ಟೀಲಿನ ಹಂಡೆ ಕೊಂಡುಕೊಳ್ಳುವ ಕಾರಣ ಪ್ಲಾಸ್ಟಿಕ್ ಬಿಂದಿಗೆಗೆ ಬೇಡಿಕೆ ಕಡಿಮೆಯಾಗಿದೆ’ ಎಂದು ಇಲ್ಲಿನ ನಿವಾಸಿ ರಮೇಶ ತಿಳಿಸಿದರು. ‘ನಗರದಲ್ಲಿ ಯಾರೂ ತೆಗೆದುಕೊಳ್ಳುವುದಿಲ್ಲ. ಬೈಕಿನ ಮೇಲೆ ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೆ ತೆರಳಿ ಬಿಂದಿಗೆ ಮಾರಾಟ ಮಾಡಿ ಬರುತ್ತೇವೆ. ದಿನವಿಡೀ ತಿರುಗಿ ಮಾರಾಟ ಮಾಡಿದರೆ ಪೆಟ್ರೊಲ್ ಖರ್ಚು ಕಳೆದು ₹200ರಿಂದ ₹300 ಮಿಕ್ಕುತ್ತದೆ. ಇದರಿಂದ ಜೀವನ ನಿರ್ವಹಣೆ ಮಾಡುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.