ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಲಬುರಗಿ ರಂಗಾಯಣಕ್ಕೆ ನೂತನ ನಿರ್ದೇಶಕರು ಅಧಿಕಾರ ವಹಿಸಿಕೊಂಡು ನಾಲ್ಕೂವರೆ ತಿಂಗಳು ಕಳೆದರೂ ಇನ್ನೂ ಅಗತ್ಯ ಅನುದಾನ ಬಾರದೇ ಇರುವುದರಿಂದ ಕಲಾವಿದರ ನೇಮಕವೂ ಆಗಿಲ್ಲ. ಹೀಗಾಗಿ, ನಾಟಕ ತಯಾರಿಯ ಕೆಲಸ ಇನ್ನೂ ಆರಂಭವಾಗಿಲ್ಲ.
ಮೈಸೂರು ರಂಗಾಯಣದಂತೆ ಕಲಬುರಗಿ ಸೀಮೆಯ ಕಲಾ ಪ್ರತಿಭೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2013–14) ಕಲಬುರಗಿ ರಂಗಾಯಣವನ್ನು ಅಸ್ತಿತ್ವಕ್ಕೆ ತರಲಾಗಿತ್ತು. ವಾರ್ಷಿಕ ಅನುದಾನವನ್ನು ಪ್ರತಿ ವರ್ಷ ₹ 1 ಕೋಟಿ ಮೀಸಲಿಡಲಾಗುತ್ತಿತ್ತು. ಆದರೆ, ಕೋವಿಡ್ ನೆಪದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಈ ಮೊತ್ತವನ್ನು ಗಣನೀಯವಾಗಿ ಇಳಿಕೆ ಮಾಡಿ ಕೊನೆ ಕೊನೆಗೆ ₹ 20 ಲಕ್ಷ ಮಾತ್ರ ಬಿಡುಗಡೆ ಮಾಡಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದು ಮೊದಲಿನಂತೆ ವಾರ್ಷಿಕ ₹ 1 ಕೋಟಿ ಬಿಡುಗಡೆ ಮಾಡಬೇಕು ಎಂಬ ಕೂಗು ರಂಗ ಕಲಾವಿದರಿಂದ ಕೇಳಿ ಬರುತ್ತಿದೆ.
ಕಳೆದ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರವು ರಾಜ್ಯದ ಮೈಸೂರು, ಕಲಬುರಗಿ, ಶಿವಮೊಗ್ಗ, ಧಾರವಾಡ ರಂಗಾಯಣ ಹಾಗೂ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿತ್ತು. ಅದಾದ ಬೆನ್ನಲ್ಲೇ ಅನುದಾನವನ್ನೂ ಹಂಚಿಕೆ ಮಾಡಿದ್ದರೆ ಇಷ್ಟೊತ್ತಿಗೆ ಕಲಾವಿದರ ಆಯ್ಕೆ ಪ್ರಕ್ರಿಯೆಯೂ ಮುಗಿಯುತ್ತಿತ್ತು. 12 ಜನ ರಂಗ ಕಲಾವಿದರು ಹಾಗೂ ಮೂವರು ತಂತ್ರಜ್ಞರಿಗೆ ಕೆಲಸವನ್ನೂ ನೀಡಿದಂತಾಗುತ್ತಿತ್ತು. ಆದರೆ, ಇದುವರೆಗೆ ಯಾವುದೇ ಅನುದಾನ ಬಾರದೇ ಇರುವುದರಿಂದ ರಂಗಾಯಣವು ರಂಗಕರ್ಮಿಗಳ ಉಪನ್ಯಾಸ ಗೋಷ್ಠಿಗಳನ್ನು ಏರ್ಪಡಿಸುವ ಮೂಲಕವಷ್ಟೇ ಚಟುವಟಿಕೆಗಳನ್ನು ಜೀವಂತವಾಗಿಟ್ಟಿದೆ.
ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಿಗೂ ಕಲಬುರಗಿ ರಂಗಾಯಣವನ್ನು ಒಯ್ಯುವ ಯೋಚನೆಯೂ ಇದೆ. ಆದರೆ, ಸಕಾಲಕ್ಕೆ ಆರ್ಥಿಕ ನೆರವು ಬಾರದೇ ಇರುವುದರಿಂದ ಬಹುತೇಕ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಂತಾಗಿವೆ ಎಂದು ರಂಗಕರ್ಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಂಗಾಯಣದ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಅವರ ಅಧಿಕಾರ ಮುಗಿಯುತ್ತಿದ್ದಂತೆಯೇ ಅವರ ಅವಧಿಯಲ್ಲಿ ನೇಮಕಗೊಂಡಿದ್ದ ಕಲಾವಿದರ ಅವಧಿಯೂ ಮುಕ್ತಾಯವಾಯಿತು. ಇದೀಗ ಹೊಸ ಕಲಾವಿದರ ನೇಮಕ ಪ್ರಕ್ರಿಯೆ ಶುರು ಮಾಡಬೇಕಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಬಿಡುಗಡೆಗೆ ರಂಗಾಯಣ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳು ಕಾದು ಕುಳಿತಿದ್ದಾರೆ.
ರಾಜ್ಯದ ಎಲ್ಲ ರಂಗಾಯಣಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸೂಚಿಸಲಾಗಿದ್ದು ಚಟುವಟಿಕೆ ಶುರು ಮಾಡುವಂತೆ ತಿಳಿಸಿದ್ದೇವೆ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಣಕಾಸಿನ ಕೊರತೆ ಇಲ್ಲಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ
ರಂಗಾಯಣಕ್ಕೆ ಒಂದು ಕಂತಿನ ಅನುದಾನ ಬಿಡುಗಡೆಯಾದರೆ ಕಲಾವಿದರ ನೇಮಕ ಪ್ರಕ್ರಿಯೆ ಶುರು ಮಾಡಬಹುದು. ಅನುದಾನದ ನಿರೀಕ್ಷೆಯಲ್ಲಿದ್ದೇವೆಸುಜಾತಾ ಜಂಗಮಶೆಟ್ಟಿ ನಿರ್ದೇಶಕಿ ಕಲಬುರಗಿ ರಂಗಾಯಣ
ನಾನು ನಿರ್ದೇಶಕನಾಗಿದ್ದ ಅವಧಿಯ ಕೊನೆಗೆ ಸರ್ಕಾರ ಕೇವಲ ₹ 20 ಲಕ್ಷ ಅನುದಾನ ನೀಡಿತ್ತು. ಇದು ಸರಿಯಲ್ಲ ಎಂದು ಸಚಿವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದೆ. ಕಲಬುರಗಿ ರಂಗಾಯಣಕ್ಕೆ ಕೆಕೆಆರ್‌ಡಿಬಿ ವಾರ್ಷಿಕ ₹ 1 ಕೋಟಿ ನೀಡಬೇಕುಪ್ರಭಾಕರ ಜೋಶಿ ರಂಗಾಯಣ ನಿಕಟಪೂರ್ವ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.