ಸಾಂದರ್ಭಿಕ ಚಿತ್ರ
ಚಿಂಚೋಳಿ: ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಂತ ಕಳಪೆ ಫಲಿತಾಂಶದಿಂದ ಜಿಲ್ಲೆಯಲ್ಲಿ ಕೊನೆಯ ಸ್ಥಾನ ಪಡೆದಿರುವ ಚಿಂಚೋಳಿ ತಾಲ್ಲೂಕು ಶೈಕ್ಷಣಿಕವಾಗಿ ಅಧೋಗತಿಗೆ ತಲುಪಿದೆ.
ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತಿರುವುದು, ಇನ್ನೊಂದೆಡೆ ಅತಿಥಿ ಶಿಕ್ಷಕರನ್ನೇ ಶಾಲೆಗಳು ಅವಲಂಬಿಸಿರುವುದು ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಗುಣಮಟ್ಟ ಕುಸಿಯಲು ಕಾರಣವಾಗಿದೆ.
ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ (ಅನುದಾನಿತ ಮತ್ತು ಅನುದಾನ ರಹಿತ) ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾತಿ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಮಾತ್ರ ದಾಖಲಾತಿ ಹೆಚ್ಚುತ್ತಿದೆ.
ತಾಲ್ಲೂಕಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ 188, ಹಿರಿಯ ಪ್ರಾಥಮಿಕ 161, ಪ್ರೌಢ 33, ಅನುದಾನ ರಹಿತ 31 ಸೇರಿ ಒಟ್ಟು 413 ಶಾಲೆಗಳಿವೆ. ಇದರಲ್ಲಿ 39,345 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 42 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. 54 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಿವೆ. ಇವರಿಗೆ ಪಾಠ ಮಾಡುವ 547 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇಷ್ಟೆ ಸಂಖ್ಯೆಯ ಅತಿಥಿ ಶಿಕ್ಷಕರು ನೇಮಿಸಲಾಗಿದೆ.
‘ತಾಲ್ಲೂಕಿನ 15 ಶಾಲೆಗಳಲ್ಲಿ ಕೇವಲ 88 ಮಕ್ಕಳ (10ಕ್ಕಿಂತ ಕಡಿಮೆ ಮಕ್ಕಳ) ದಾಖಲಾತಿ ಇದೆ. ಕೆಲವು ಶಾಲೆಗಳಲ್ಲಿ 2/3 ಮಕ್ಕಳ ದಾಖಲಾತಿ ಇರುವುದರಿಂದ ಶಾಲೆಗಳ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಇದರಲ್ಲಿ ಉರ್ದು ಮಾಧ್ಯಮದ ಶಾಲೆಗಳು ಸೇರಿವೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೂಲಗಳು ತಿಳಿಸಿವೆ.
ತಾಲ್ಲೂಕಿನಲ್ಲಿ 30 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಿದೆ. ಇದರಿಂದ ಸರ್ಕಾರಿ ಮತ್ತು ಕಾಸಗಿ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ. 2023ನೇ ಸಾಲಿನಲ್ಲಿ ಶೂನ್ಯ ದಾಖಲಾತಿಯ ಶಾಲೆಗಳ ಸಂಖ್ಯೆ 23 ಇತ್ತು. ಇದರಲ್ಲಿ ಸರ್ಕಾರಿ 7, ಅನುದಾನಿತ 1, ಅನುದಾನ ರಹಿತ 15 ಶಾಲೆಗಳಿದ್ದವು. ಆದರೆ ಪ್ರಸಕ್ತ ವರ್ಷ ಇದು 30ಕ್ಕೆ ಏರಿದೆ. ಸಮಾಜ ಕಲ್ಯಾಣ ಇಲಾಖೆಯ ಆಶ್ರಮ(ವಸತಿ) ಶಾಲೆ ಸೇರಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಾಲೆಗಳು ಶೂನ್ಯ ದಾಖಲಾತಿಯಿಂದ ಹುಬ್ಬೇರಿಸುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.