
ಜೇವರ್ಗಿ: ‘ಸಾಂಸ್ಕೃತಿಕ ಶ್ರೀಮಂತಿಕೆಗೆ ಬಂಜಾರ ಸಮಾಜ ಹೆಸರುವಾಸಿಯಾಗಿದ್ದು, ಲಂಬಾಣಿ ಸಮುದಾಯದವರು ಆಚರಿಸುವ ಬೆಳಕಿನ ಹಬ್ಬ ದೀಪಾವಳಿ ವಿಭಿನ್ನ ಹಾಗೂ ವೈಶಿಷ್ಟ್ಯದಿಂದ ಕೂಡಿರುತ್ತದೆ.
ಅದರಲ್ಲೂ ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಗುಡೂರ ಎಸ್.ಎ ಗ್ರಾಮದ ತಾಂಡಾ ಸೇರಿದಂತೆ ವಿವಿಧ ತಾಂಡಾಗಳಲ್ಲಿ ಆಚರಿಸುವ ದೀಪಾವಳಿ ಸಂಭ್ರಮವನ್ನು ನೋಡುವುದೇ ಹಬ್ಬ. ದೀಪಾವಳಿ ಹಬ್ಬಕ್ಕೆ ಲಂಬಾಣಿ ಭಾಷೆಯಲ್ಲಿ ಮೇರಾ ಎನ್ನುತ್ತಾರೆ. ಮನೆಯ ಮುಂದೆ ದೀಪಗಳ ಸಾಲು, ವಿವಿಧ ತರಹದ ಭಕ್ಷ್ಯಗಳನ್ನು ಸವಿಯುವುದು, ಪಟಾಕಿ ಸಿಡಿಸಿ ಸಂಭ್ರಮಿಸುವದು. ಇದು ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯಂದು ಕಂಡು ಬರುವ ಸಾಮಾನ್ಯ ದೃಶ್ಯ. ಆದರೆ ಇವೆಲ್ಲವುಗಳ ಜತೆಗೆ ಹಲವು ಸಾಂಪ್ರಾದಾಯಿಕ ವಿಶಿಷ್ಟ ಪದ್ದತಿಗಳನ್ನು ಆಚರಿಸಿದ ಕೀರ್ತಿ ಗುಡೂರ ತಾಂಡಾದ ಯುವತಿಯರಿಗೆ ಸಲ್ಲುತ್ತದೆ.
ಪ್ರತಿ ವರ್ಷ ಬಲಿಪಾಡ್ಯಮಿ ದಿನದಂದು ಕನ್ಯೆಯರು ನೂತನ ಬಟ್ಟೆಗಳನ್ನು ಧರಿಸಿ ಬುಟ್ಟಿಯೊಳಗೆ ಹೂ ತುಂಬಿಕೊಂಡು ಲಂಬಾಣಿ ಹಾಡಿನ ಜೊತೆಗೆ ನೃತ್ಯ ಮಾಡುತ್ತಾ ತಾಂಡಾದ ಮನೆ-ಮನೆಗಳಿಗೆ ಹೋಗುತ್ತಾರೆ. ಅದಕ್ಕೆ ಪ್ರತಿಯಾಗಿ ಮನೆಯವರು ಖುಷಿ (ದುಡ್ಡು) ಕೊಡುವುದು ಲಂಬಾಣಿ ಜನಾಂಗದ ಸಾಂಪ್ರಾದಾಯಿಕ ಪದ್ದತಿಯಾಗಿದೆ. ಇದು ತಾಂಡಾಗಳ ಪುರಾತನ ಪದ್ಧತಿಯಾಗಿದ್ದು, ಈ ರೀತಿ ಹಬ್ಬವನ್ನು ಆಚರಿಸುವುದರಿಂದ ಯುವತಿಯರಿಗೆ ಬಹುಬೇಗ ಮದುವೆಯಾಗುತ್ತದೆ ಎಂಬ ನಂಬಿಕೆ ತಾಂಡಾ ಜನತೆಯಲ್ಲಿದೆ. ಹೀಗಾಗಿ ಪ್ರತೀ ವರ್ಷ ಗುಡೂರ ತಾಂಡಾದಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ಅತ್ಯಂತ ಸಾಂಪ್ರಾದಾಯಿಕವಾಗಿ ಆಚರಿಸಲಾಗುತ್ತಿದೆ ಎಂದು ಗ್ರಾಮದ ಮುಖಂಡ ಹಾಗೂ ತಾ.ಪಂ. ಮಾಜಿ ಸದಸ್ಯ ಮಹಾಂತೇಶ ಪವಾರ ತಿಳಿಸಿದರು.
ತಾಲ್ಲೂಕಿನ ಮುದಬಾಳ. ಬಿ, ರೇವನೂರ, ಹಿಪ್ಪರಗಾ ಎಸ್.ಎನ್, ಹರವಾಳ, ಮಂದೇವಾಲ, ಅಂಕಲಗಾ, ರಂಜಣಗಿ, ಬದನಿಹಾಳ ಸೇರಿದಂತೆ ವಿವಿಧ ತಾಂಡಾಗಳಲ್ಲಿ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.