ADVERTISEMENT

ಕಲಬುರಗಿ: ಮೌಲ್ಯಮಾಪನ ಭತ್ಯೆ ಹೆಚ್ಚಿಸಿ- ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ

ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದಿಂದ ಕುಲಪತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 5:23 IST
Last Updated 1 ಡಿಸೆಂಬರ್ 2021, 5:23 IST
ಹೈದರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಸದಸ್ಯರು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅವರಿಗೆ ಮಂಗಳವಾದ ಮನವಿ ಸಲ್ಲಿಸಿದರು
ಹೈದರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಸದಸ್ಯರು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅವರಿಗೆ ಮಂಗಳವಾದ ಮನವಿ ಸಲ್ಲಿಸಿದರು   

ಕಲಬುರಗಿ: ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಪದವಿ ಮಹಾವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರಿಗೆ ಮೌಲ್ಯಮಾಪನದ ದಿನಭತ್ಯೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಸದಸ್ಯರು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅವರಿಗೆ ಮಂಗಳವಾದ ಮನವಿ ಸಲ್ಲಿಸಿದರು.

‘ಪ್ರಸ್ತುತ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿದ್ದು, ಬೆಲೆ ಏರಿಕೆಗೆ ಅನುಗುಣವಾಗಿ ಮೌಲ್ಯಮಾಪನ ದಿನಭತ್ಯೆಗಳನ್ನು ಹೆಚ್ಚಿಸದೇ ಇರುವುದು ಅವೈಜ್ಞಾನಿಕವಾಗಿದೆ. 2015ರಿಂದ 2021ರವರೆಗೆ ಮೌಲ್ಯಮಾಪನದ ಯಾವುದೇ ಭತ್ಯೆಗಳನ್ನು ಹೆಚ್ಚಿಸಿರುವುದಿಲ್ಲ. ಆದರೆ ಬೆಲೆಗಳು ಮಾತ್ರ ನಿರಂತರವಾಗಿ ಹೆಚ್ಚಾಗುತ್ತಿವೆ. ಏಕರೂಪದ ಭತ್ಯೆ ನೀತಿ ಅನುಸಾರ ಹೆಚ್ಚಿಸಿರುವ ಭತ್ಯೆಗಳನ್ನು ಕಡಿತಗೊಳಿಸಿರುವುದು ಉನ್ನತ ಶಿಕ್ಷಣ ವಿರೋಧಿಯಾಗಿದೆ. ಇದರಿಂದಾಗಿ ಹಲವು ಅರ್ಹ ಹಾಗೂ ಅನುಭವಿ ಅಧ್ಯಾಪಕರು ಮೌಲ್ಯಮಾಪನ ಕಾರ್ಯದಿಂದ ದೂರ ಉಳಿಯುವಂತಾಗಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಲೇಜುಗಳ ಜತೆಗೆ ಬೇರೆ ಬೇರೆ ಜಿಲ್ಲೆಗಳಿಂದ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವ ಅಧ್ಯಾಪಕರ ಊಟ, ವಸತಿ, ಸಾರಿಗೆ, ಇನ್ನಿತರ ಖರ್ಚುಗಳನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಧ್ಯಾಪಕರು ಖರ್ಚು–ವೆಚ್ಚಗಳನ್ನು ಸರಿದೂಗಿಸಿಕೊಳ್ಳಲು ತಕ್ಷಣವೇ ಮೌಲ್ಯಮಾಪಕರ ದಿನಭತ್ಯೆಗಳನ್ನು ಹೆಚ್ಚಿಸಬೇಕು. ಇತ್ತೀಚೆಗೆ ಪ್ರಾರಂಭವಾದ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಪ್ರತಿದಿನ ಮೌಲ್ಯಮಾಪನ ಮಾಡುವ ಅಧ್ಯಾಪಕರಿಗೆ ದಿನಭತ್ಯೆ ₹ 1,300 ನೀಡುತ್ತಿದೆ. ಆದರೆ ಗುಲಬರ್ಗಾ ವಿಶ್ವವಿದ್ಯಾಲಯ ಮಾತ್ರ ₹ 1100 ನೀಡುತ್ತಿರುವುದು ಯಾವ ನ್ಯಾಯ? ಈಗಾಗಲೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ₹1,300, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ₹1,200 ನೀಡುತ್ತಿವೆ. ಹೀಗಾಗಿ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವ ಅಧ್ಯಾಪಕರಿಗೆ ₹1300ಕ್ಕಿಂತಲೂ ಹೆಚ್ಚು ದಿನಭತ್ಯೆಯನ್ನು ನೀಡಿ ಅಧ್ಯಾಪಕರಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸಿಕೊಡಲಾಗಿದೆ. ಆದರೆ ಗುಲಬರ್ಗಾ ವಿಶ್ವವಿದ್ಯಾಲಯ ಮಾತ್ರ ಅಧ್ಯಾಪಕರ ವಿರೋಧಿ ಧೋರಣೆ ಅನುಸರಿಸುತ್ತಿದೆ’ ಎಂದು ಒತ್ತಾಯಿಸಿದರು.

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆಯುತ್ತಿರುವ ಮೌಲ್ಯಮಾಪನದಿಂದಲೇ ಜಾರಿಗೆ ಬರುವಂತೆ ವಿವಿಧ ಮೌಲ್ಯಮಾಪಕರ ದಿನಭತ್ಯೆ ₹ 1300, ಬಾಹ್ಯ ಹಿರಿಯ ಮೇಲ್ವಿಚಾರಕರಿಗೆ ₹ 1400, ಸ್ಕ್ವಾಡ್ ಸದಸ್ಯರಿಗೆ ₹ 1500, ಕಸ್ಟೋಡಿಯನ್‌ಗಳಿಗೆ ₹ 1600, ಪ್ರತಿ ಸ್ಕ್ಟ್ರಿಪ್ಟ್‌ಗೆ ₹ 25, ಕ್ಲರ್ಕ್‌ಗೆ ₹ 800, ಸ್ಪೆಕ್ಟೆಟಮ್‌ಗೆ ₹ 500 ಪರೀಕ್ಷಾ ಭತ್ಯೆಗಳನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘದ ವಿಭಾಗೀಯ ಅಧ್ಯಕ್ಷ ಡಾ.ಶರಣಪ್ಪ ಸೈದಾಪೂರ, ಡಾ. ಚಿನ್ನಾ ಆಶಪ್ಪ, ಡಾ.ಅರುಣಕುಮಾರ ನರೋಣಕರ್,ಡಾ.ಶರಣಪ್ಪ ಗುಂಡಗುರ್ತಿ, ಪ್ರೊ. ಶಿವಶರಣಪ್ಪ ಬಿರಾದಾರ, ಗುಂಡಪ್ಪ ಸಿಂಗೆ, ಡಾ.ಸಿದ್ದಲಿಂಗ ರಾಠೋಡ, ಡಾ.ದೇವಿದಾಸ ರಾಠೋಡ, ಪ್ರೊ.ಸಿದ್ದಪ್ಪ ಡಿಗ್ಗಿ, ಡಾ.ಬಸವರಾಜ ಸಾದ್ಯಾಪೂರ ಪೊಲೀಸ್, ಚಂದ್ರಶೇಖರ ಅಕ್ಕರಕಿ, ಡಾ.ಜ್ಞಾನಮಿತ್ರ ಬೈರಾಮಡಗಿ, ನಲ್ಲಾರೆಡ್ಡಿ, ಪ್ರೊ. ರೇವಣಸಿದ್ದಪ್ಪ ನಿಂಗನಾಯಕ, ಡಾ.ಹಣಮಂತ ದಾಸನ್, ಡಾ.ಸುಭಾಸ ದೊಡಮನಿ, ಡಾ.ಗಾಂಧೀಜಿ ಮೋಳಕೆರೆ ಇನ್ನಿತರ ಅಧ್ಯಾಪಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.