ADVERTISEMENT

ಅತ್ಯಾಚಾರ ಅಪರಾಧಿಗೆ ಜೀವಾವಧಿ ಶಿಕ್ಷೆ

ಬಾಲಕಿಯನ್ನು ಮಹಾರಾಷ್ಟ್ರಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಖಾಜಪ್ಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:16 IST
Last Updated 17 ಅಕ್ಟೋಬರ್ 2019, 20:16 IST

ಕಲಬುರ್ಗಿ: ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದ ಬಾಲಕಿಯೊಬ್ಬಳನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಪ್ಪ ಎಸ್‌. ಅವರು ಮುಖ್ಯ ಅಪರಾಧಿ ಖಾಜಪ್ಪ ಚೌಗಲೆಗೆ ಪೋಕ್ಸೊ ಕಾಯ್ದೆಯಡಿ ಜೀವಾವಧಿ ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಿದ್ದಾರೆ.

ಅಲ್ಲದೇ ವಿವಿಧ ಕಲಂಗಳಡಿ ಐಪಿಸಿ ಕಲಂ 366 (ಎ) ಅಡಿ 10 ವರ್ಷ ಕಾರಾಗೃಹ ಶಿಕ್ಷೆ, ₹ 50 ಸಾವಿರ ದಂಡ ಹಾಗೂ ಐಪಿಸಿ ಕಲಂ 506 ಅಡಿ ಎರಡು ವರ್ಷ ಸಾದಾ ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿದ್ದಾರೆ. ಈ ಕೃತ್ಯಕ್ಕೆ ಸಹಕರಿಸಿದ ಐವರು ಅಪರಾಧಿಗಳಾದ ಬಾಳಪ್ಪ ಚೌಗಲೆ, ಪರಶುರಾಮ ರಾಜಪ್ಪ, ಲಕ್ಷ್ಮಣ ಬೋಗಪ್ಪ, ಶಾಂತಾಬಾಯಿ ಬೋಗಪ್ಪ ಎಂಬುವವರಿಗೆ ತಲಾ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹ 50 ಸಾವಿರ ದಂಡ ವಿಧಿಸಿದ್ದಾರೆ.

ನೊಂದ ಬಾಲಕಿಗೆ ಜಿಲ್ಲಾ ಕಾನೂನು ನೆರವು ಸಮಿತಿಯಿಂದ ₹ 5 ಲಕ್ಷ ಪರಿಹಾರ ಹಾಗೂ ದಂಡದ ಹಣದಲ್ಲಿ ₹ 3 ಲಕ್ಷವನ್ನು ನೀಡಬೇಕು ಎಂದೂ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಕರಣದ ವಿವರ: ಮಾದನಹಿಪ್ಪರಗಾದ ಬಾಲಕಿ 2015ರ ಏಪ್ರಿಲ್‌ 17ರಂದು ಬಹಿರ್ದೆಸೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿಗೆ ಬೈಕ್‌ನಲ್ಲಿ ಬಂದ ಖಾಜಪ್ಪ, ಬಾಳು ಚೌಗಲೆ ಹಾಗೂ ಪರಶುರಾಮ ಗಾಡಿವಡ್ಡರ ಬಾಲಕಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮಹಾರಾಷ್ಟ್ರದ ಸಾತಾರ ಜಿಲ್ಲೆ ಲಿಮಕಿಂಡಿ ಗ್ರಾಮದ ಕಲ್ಲಿನ ಗಣಿಯೊಂದರಲ್ಲಿ ಖಾಜಪ್ಪ ಅತ್ಯಾಚಾರ ಎಸಗಿದ್ದ. ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದ ಎಂದು ಬಾಲಕಿ ತಂದೆ ದೂರು ದಾಖಲಿಸಿದ್ದರು.‍ಪ್ರಕರಣದ ತನಿಖೆ ನಡೆಸಿದ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಾಸು ಚವ್ಹಾಣ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಪೋಕ್ಸೊ) ಎಲ್‌.ವಿ.ಚಟ್ನಾಳಕರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.