ಕಲಬುರಗಿ: ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ತಾಂತ್ರಿಕ ದೋಷದಿಂದ ಲಿಫ್ಟ್ ಮೂರನೇ ಮಹಡಿಯಲ್ಲೇ ನಿಂತಿದ್ದು, ಸುಮಾರು ಒಂದೂವರೆ ಗಂಟೆ ಒಂಬತ್ತು ಮಂದಿ ಲಿಫ್ಟ್‌ನಲ್ಲಿ ಸಿಲುಕಿಕೊಂಡು ಪರದಾಡಿದರು. ಕೊನೆಗೆ ಗೋಡೆ ಒಡೆದು ಅವರನ್ನು ರಕ್ಷಿಸಲಾಯಿತು.
ಆಸ್ಪತ್ರೆಯ ಬೆಳಗಿನ ಶಿಫ್ಟ್‌ಗೆ ಕೆಲಸಕ್ಕೆ ಹಾಜರಾಗುತ್ತಿದ್ದ ಜಿಮ್ಸ್‌ನ ಏಳು ಸಿಬ್ಬಂದಿ ಹಾಗೂ ರೋಗಿಗಳ ಇಬ್ಬರು ಸಂಬಂಧಿಕರು ಲಿಫ್ಟ್‌ನಲ್ಲಿ ಸಿಲುಕಿದರು. ಮೇಲೆ–ಕೆಳಗೆ ಬಾರದೆ ಬಾಗಿಲು ಇಲ್ಲದ 3ನೇ ಮಹಡಿಯಲ್ಲಿ ಸ್ಥಗಿತವಾಗಿ ನಿಂತಿತು. ಕಟ್ಟಡ ಕಾರ್ಮಿಕರು ಗೋಡೆಯನ್ನು ಒಡೆದು ಸುರಕ್ಷಿತವಾಗಿ ಕರೆ ತಂದರು.
‘ಮೂರನೇ ಮಹಡಿಯನ್ನು ಈ ಹಿಂದೆ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆಗೆ ನೀಡಲಾಗಿತ್ತು. ಜಯದೇವ ಆಸ್ಪತ್ರೆ ಸ್ಥಳಾಂತರವಾದ ಬಳಿಕ ಅದನ್ನು ತಾಯಿ ಮತ್ತು ಮಕ್ಕಳಿಗಾಗಿ ಬಳಸುತ್ತಿದ್ದು, ಎರಡು ಕಡೆ ನಾಲ್ಕು ಲಿಫ್ಟ್‌ಗಳಿವೆ. ಅವುಗಳಲ್ಲಿ ಉತ್ತರ ಭಾಗದ ಲಿಫ್ಟ್‌ನಲ್ಲಿ ಒಂಬತ್ತು ಮಂದಿ ಕೆಳಗಿನಿಂದ ಮೇಲೆ ಹೋಗುತ್ತಿದ್ದರು. ಏಕಾಏಕಿ ಲಿಫ್ಟ್ ಸ್ಥಗಿತವಾಗಿ 3ನೇ ಮಹಡಿಯಲ್ಲಿ ನಿಲುಗಡೆಯಾಯಿತು’ ಎಂದು ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಎಸ್. ‘ಪ್ರಜಾವಾಣಿ’ಗೆ ತಿಳಿಸಿದರು.
ಭಯದಿಂದ ಬೆವರಿದರು: ‘ತಾತ್ಕಾಲಿಕವಾಗಿ ಕಟ್ಟಿದ್ದ ಲಿಫ್ಟ್ ಬಾಗಿಲಿನ ಗೋಡೆಯನ್ನು ಡ್ರಿಲ್ಲಿಂಗ್ ಯಂತ್ರ, ದೊಡ್ಡ ಸುತ್ತಿಗೆಯಿಂದ ಒಡೆದು, ಸಣ್ಣದಾಗಿ ಗೋಡೆ ಕೊರೆದು ಒಬ್ಬೊಬ್ಬರನ್ನು ಹೊರ ತಂದು ರಕ್ಷಿಸಲಾಯಿತು. ಉಸಿರಾಡಲು ಸರಿಯಾಗಿ ಗಾಳಿ ಇಲ್ಲದೆ, ಭಯದಿಂದ ಬೆವರಿದ್ದರು. ಮುಖದಲ್ಲಿ ಆತಂಕವೂ ಇತ್ತು’ ಎಂದು ಗೋಡೆ ಒಡೆದ ಕಾರ್ಮಿಕ ಮಹೇಶ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.