ADVERTISEMENT

ಸಿಗದ ನೆರವು: ಕುಂಬಾರರ ಅಸಮಾಧಾನ

ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹ

ಜಗನ್ನಾಥ ಡಿ.ಶೇರಿಕಾರ
Published 9 ಮೇ 2020, 9:57 IST
Last Updated 9 ಮೇ 2020, 9:57 IST
ಚಿಂಚೋಳಿ ತಾಲ್ಲೂಕು ಸುಲೇಪೇಟದಲ್ಲಿ  ಮಡಕೆ ಮಾರಾಟವಾಗದೆ ಇರುವುದನ್ನು ಕುಂಬಾರ ತೋರಿಸಿದರು
ಚಿಂಚೋಳಿ ತಾಲ್ಲೂಕು ಸುಲೇಪೇಟದಲ್ಲಿ  ಮಡಕೆ ಮಾರಾಟವಾಗದೆ ಇರುವುದನ್ನು ಕುಂಬಾರ ತೋರಿಸಿದರು   

ಚಿಂಚೋಳಿ: ಮಣ್ಣಿನ ಮಡಕೆಗಳು ಬಡವರ ಫ್ರಿಜ್ ಎಂದೇ ಜನಪ್ರಿಯ. ಬೇಸಿಗೆ ಬಂದರೆ ಸಾಕು ಕುಂಬಾರರಿಗೆ ಕೈತುಂಬಾ ಕೆಲಸ. ಆದರೆ ಪ್ರಸಕ್ತ ವರ್ಷ ಕುಂಬಾರರ ಬದುಕನ್ನು ಕೊರೊನಾ ಮಹಾಮಾರಿ ದುಸ್ತರಗೊಳಿಸಿದೆ.

ತೊಗರಿ, ಜೋಳದ ಸುಗ್ಗಿಯ ನಂತರ ಕತ್ತೆಗಳ ಮೇಲೆ ಹಳ್ಳಿ ಹಳ್ಳಿಗಳಿಗೆ ತೆರಳಿ ಮಣ್ಣಿನ ಮಡಕೆ ಮಾರಾಟ ಮಾಡುವ ಕುಂಬಾರರಿಗೆ ಪ್ರಸಕ್ತ ವರ್ಷ ಕೆಲಸವೇ ಇಲ್ಲದಂತಾಗಿದೆ. ಕೊರೊನಾ ಹಾವಳಿಯಿಂದ ಕುಂಬಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕುಂಬಾರರು ವರ್ಷ ಪೂರ್ತಿ ತಯಾರಿಸಿದ ಮಡಕೆಗಳನ್ನು ಬೇಸಿಗೆಯಲ್ಲಿ ಮಾರಾಟ ಮಾಡುವುದು ರೂಢಿ. ಪ್ರಸಕ್ತ ವರ್ಷ ಲಾಕ್‌ಡೌನಿಂದಾಗಿ ಮಾರಾಟ ಮಾಡಲಾಗದೆ ಪರಿತಪಿಸುತ್ತಿದ್ದಾರೆ.

ADVERTISEMENT

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕ್ಷೌರಿಕರು, ಅಟೊರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಮತ್ತು ನೇಕಾರರಿಗೆ, ಕಟ್ಟಡ ಕಾರ್ಮಿಕರಿಗೆ ನೆರವು ಪ್ರಕಟಿಸಿ ₹1610 ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಇದರಲ್ಲಿ ಕುಂಬಾರರನ್ನು ಪರಿಗಣಿಸಿಲ್ಲ.

‘ತೊಂದರೆಗೆ ಸಿಲುಕಿದ ಬಡವರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಕುಂಬಾರರನ್ನು ಕಡೆಗಣಿಸಿದ್ದು ದುರದೃಷ್ಟಕರ’ ಎಂದು ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ಶಿವಶರಣಪ್ಪ ಕುಂಬಾರ ಬೇಸರ ವ್ಯಕ್ತಪಡಿಸಿದ್ದಾರೆ.

‘ಮುಖ್ಯಮಂತ್ರಿಗಳು ರಾಜ್ಯದಲ್ಲಿ ಲಕ್ಷಾಂತರ ಕುಂಬಾರರು ಸಂಕಷ್ಟ ಸಿಲುಕಿದ್ದರೂ ಅವರ ಬಗ್ಗೆ ಉದಾಸೀನ ಮಾಡಿರುವುದು ನೋವಿನ ಸಂಗತಿ. ಕುಂಬಾರರಿಗೂ ನೆರವು ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಮುಖ್ಯಮಂತ್ರಿಗಳು ತಕ್ಷಣ ಕುಂಬಾರರಿಗೆ ನೆರವು ಘೋಷಿಸಿ ಬಡವರ ಪರ ಎಂಬ ಬದ್ಧತೆಯನ್ನು ಉಳಿಸಿಕೊಳ್ಳಬೇಕು’ ಎಂದು ಕುಂಬಾರ ಸಮಾಜದ ಮುಖಂಡ ತಾ.ಪಂ. ಮಾಜಿ ಸದಸ್ಯ ನರಶಿಮ್ಲು ಕುಂಬಾರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.