ಕಲಬುರಗಿ: ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದ ಆರೋಪದ ಮೇಲೆ ಬಿಬಿಎಂಪಿಯ ಕಂದಾಯ ಅಧಿಕಾರಿ ಬಸವರಾಜ ಮಗಿ ಅವರಿಗೆ ಸಂಬಂಧಿಸಿದ ನಾಲ್ಕು ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಗುರುವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ಮಾಡಿ, ಸಂಜೆಯವರೆಗೂ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಬಸವರಾಜ ಮಗಿ ಅವರು ಕಲಬುರಗಿ ತಾಲ್ಲೂಕಿನ ಪಾಳಾ ಗ್ರಾಮದವರಾಗಿದ್ದು, ಬೆಂಗಳೂರಿನ ಬಿಬಿಎಂಪಿಯ ಮಹದೇವಪುರ ವಿಭಾಗದ ಕಂದಾಯ ಅಧಿಕಾರಿಯಾಗಿದ್ದಾರೆ.
ಪಾಳಾ ಗ್ರಾಮದ ಮನೆ, ಊರ ಹೊರಗಿನ ತೋಟದ ಮನೆ, ಎಂಬಿ ನಗರದ ಮೂರು ಅಂತಸ್ತಿನ ಮನೆ ಹಾಗೂ ಪಿ ಆ್ಯಂಡ್ ಟಿ ಕಾಲೊನಿಯಲ್ಲಿನ ಅಪಾರ್ಟ್‌ಮೆಂಟ್‌ವೊಂದರ ತಂಗಿಯ ಗಂಡನ ಮನೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆ 6ಕ್ಕೆ ಏಕಕಾಲದಲ್ಲಿ ದಾಳಿ ಮಾಡಿದ್ದು, ಹಲವು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದಾರೆ.
ಎಂಬಿ ನಗರದ ಮೂರು ಅಂತಸ್ತಿನ ಮನೆಯ ಮೇಲೆ ಡಿಎಸ್‌ಪಿ ಮಂಜುನಾಥ ಅವರಿದ್ದ ತಂಡ ದಾಳಿ ಮಾಡಿತ್ತು. 1 ಮತ್ತು 2ನೇ ಮಹಡಿ ಬಾಡಿಗೆ ನೀಡಿರುವ ಬಸವರಾಜ ಅವರು, ಕಲಬುರಗಿಗೆ ಬಂದಾಗ 3ನೇ ಮಹಡಿಯಲ್ಲಿ ಉಳಿದುಕೊಳ್ಳುತ್ತಿದ್ದರು. ಹೀಗಾಗಿ, 3ನೇ ಮಹಡಿಯ ಮನೆಯಲ್ಲಿ ಎರಡು ಸೂಟ್ ಕೇಸ್‌ನಲ್ಲಿ ಬಹುಲಕ್ಷ ಮೌಲ್ಯದ 583 ಕ್ಯಾಸಿನೊ ಕಾಯಿನ್‌ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಹಣಮಂತ ಸಣ್ಣಮನಿ ಅವರ ತಂಡ ಪಾಳಾ ಮನೆ, ಇನ್‌ಸ್ಪೆಕ್ಟರ್ ವೈ.ಕೊತ್ವಾಲ್ ಅವರ ತಂಡ ತೋಟದ ಮನೆ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಅಕ್ಕಮಹಾದೇವಿ ಮತ್ತು ಸಂತೋಷ ಅವರ ತಂಡ ಬಸವರಾಜ ಅವರ ಅಳಿಯನ ನಿವಾಸದ ಮೇಲೆ ದಾಳಿ ಮಾಡಿತ್ತು.
15 ನಿವೇಶನ, ₹ 59.40 ಲಕ್ಷ ಚಿನ್ನಾಭರಣ ಪತ್ತೆ: ದಾಳಿಯಲ್ಲಿ ಕಲಬುರಗಿ ಮತ್ತು ಬೆಂಗಳೂರು ಸೇರಿ 15 ನಿವೇಶನಗಳು, ಎರಡು ವಾಸದ ಮನೆಗಳು, 32.20 ಎಕರೆ ಕೃಷಿ ಜಮೀನು ಸೇರಿ ₹3.08 ಕೋಟಿ ಸ್ಥಿರ ಆಸ್ತಿ ಹಾಗೂ ₹ 2.32 ಲಕ್ಷ ನಗದು ಮತ್ತು ₹ 59.40 ಲಕ್ಷ ಚಿನ್ನಾಭರಣ ಸೇರಿ ₹62.76 ಲಕ್ಷ (583 ಕ್ಯಾಸಿನೊ ಕಾಯಿನ್) ಚರಾಸ್ತಿ ಒಟ್ಟು ₹3.31 ಕೋಟಿ ಪತ್ತೆಯಾಗಿದೆ ಎಂದು ಲೋಕಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂಟು ತಂಡಗಳು ರಚನೆ
ಬಸವರಾಜ ಮಗಿ ಅವರ ಆಸ್ತಿ ಪತ್ತೆ ಸಂಬಂಧ ಕಲಬುರಗಿ ಲೋಕಾಯುಕ್ತರು ಎಂಟು ತಂಡಗಳನ್ನು ರಚಿಸಿದ್ದರು. ತಲಾ ನಾಲ್ಕು ತಂಡಗಳು ಕಲಬುರಗಿ ಮತ್ತು ಬೆಂಗಳೂರಿನ 11 ಸ್ಥಳಗಳಲ್ಲಿ ದಾಳಿ ನಡೆಸಿ ತಪಾಸಣೆ ಮಾಡಿವೆ. ಲೋಕಾಯುಕ್ತ ಎಸ್‌ಪಿ ಜಾನ್ ಆಂಟೋನಿ ಡಿವೈಎಸ್ಪಿ ಗೀತಾ ಬೇನಾಳ ಇನ್‌ಸ್ಪೆಕ್ಟರ್ ಧೃವತಾರಾ ಸೇರಿ ಇತರಿದ್ದ ನಾಲ್ಕು ತಂಡ ಬೆಂಗಳೂರಿಗೆ ತೆರಳಿದ್ದವು. ಕಲಬುರಗಿ ಸೇರಿದಂತೆ ಬಾಗಲಕೋಟೆ ವಿಜಯಪುರ ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಿಂದ 60ಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿ ಆರೋಪಿಗೆ ಸಂಬಂಧಿಸಿದ ಮನೆ ಸಂಬಂಧಿಕರ ಮನೆ ಹಾಗು ಕಚೇರಿಗಳಲ್ಲಿ ಶೋಧ ಕಾರ್ಯಮಾಡಿದ್ದಾರೆ. 11ಕ್ಕೂ ಹೆಚ್ಚು ಪಂಚನಾಮರನ್ನು ಸಹ ಕರೆದೊಯ್ದಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.