ADVERTISEMENT

ಗುಲಬರ್ಗಾ ವಿವಿ: ಲೋಕಾಯುಕ್ತ ದಾಳಿ ಬೆನ್ನಲ್ಲೇ ಪ್ರೊ. ಮೇಧಾವಿನಿ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 12:44 IST
Last Updated 3 ಮಾರ್ಚ್ 2025, 12:44 IST
<div class="paragraphs"><p>ಪ್ರೊ.ಮೇಧಾವಿನಿ ಕಟ್ಟಿ</p></div>

ಪ್ರೊ.ಮೇಧಾವಿನಿ ಕಟ್ಟಿ

   

ಕಲಬುರಗಿ: ಅಂಕಪಟ್ಟಿ ವಿತರಣೆಯಲ್ಲಿ ವಿಳಂಬ, ಕರ್ತವ್ಯಲೋಪ ಸೇರಿದಂತೆ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಮೇಲೆ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಮೌಲ್ಯಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಉನ್ನತ ಶಿಕ್ಷಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

‘ಫಲಿತಾಂಶ ಪ್ರಕಟವಾಗಿ ಹಲವು ತಿಂಗಳಾದರೂ ಸಕಾಲಕ್ಕೆ ಅಂಕಪಟ್ಟಿಗಳು ಸಿಗುತ್ತಿಲ್ಲ. ಅಂಕಪಟ್ಟಿ ಕೊಡಲು ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ’ ಎಂದು ಹಲವು ವಿದ್ಯಾರ್ಥಿಗಳು ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ದಾಳಿ ನಡೆಸಿದ್ದ ಕಲಬುರಗಿ ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ್ ನೇತೃತ್ವದ ಅಧಿಕಾರಿಗಳ ತಂಡವು ಎರಡು ದಿನಗಳ ಕಾಲ ಹಲವು ದಾಖಲೆಗಳನ್ನು ಜಾಲಾಡಿತ್ತು. ಪ್ರೊ. ಮೇಧಾವಿನಿ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.

ADVERTISEMENT

ವಿದ್ಯಾರ್ಥಿಗಳು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣಪತ್ರಗಳು ಸಕಾಲಕ್ಕೆ ಸಿಗದೇ ಇರುವ ಬಗ್ಗೆ ಹಾಗೂ ಸಿಬ್ಬಂದಿಯ ವರ್ತನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಲೋಕಾಯುಕ್ತ ಎಸ್ಪಿ ಅವರು ಮಧ್ಯಪ್ರವೇಶಿಸಿ ಕೆಲವು ವಿದ್ಯಾರ್ಥಿಗಳ ಪ್ರಮಾಣಪತ್ರಗಳನ್ನು ಸ್ಥಳದಲ್ಲೇ ಕೊಡಿಸಿದ್ದರು.

ಪರೀಕ್ಷಾ ವಿಭಾಗದಲ್ಲಿ ಅಂಕಪಟ್ಟಿ ವಿಳಂಬವಾಗಿ ರವಾನೆಯಾಗಿರುವ ಕುರಿತು ಲೋಕಾಯುಕ್ತ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಪ್ರೊ.ಮೇಧಾವಿನಿ ಅವರನ್ನು ಮೌಲ್ಯಮಾಪನ ಕುಲಸಚಿವರ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಗೊತ್ತಾಗಿದೆ. ಅವರಿಗೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.