ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಗರದ ಏಳು ಕಡೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದರು.
ಪಾಲಿಕೆ ಕಚೇರಿಗಳಲ್ಲಿ ಇರಬೇಕಿದ್ದ ಇ–ಖಾತಾಗೆ ಸಂಬಂಧಿಸಿದ ಅಪಾರ ಪ್ರಮಾಣದ ದಾಖಲೆಗಳು ಖಾಸಗಿ ಕಚೇರಿಗಳಲ್ಲಿ ಪತ್ತೆಯಾಗಿವೆ. ಒಂದು ಕಡೆ ಪಾಲಿಕೆಯ ರಿಜಿಸ್ಟರ್ ಹಾಗೂ ₹8.36 ಲಕ್ಷ ನಗದು ಕೂಡ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.
ಪಾಲಿಕೆಯ ವಲಯ ಕಚೇರಿ–1, ವಲಯ ಕಚೇರಿ–2, ವಲಯ ಕಚೇರಿ–3 ಹಾಗೂ ನಗರದ ಸ್ನೇಹಾ ಬಿಲ್ಡರ್ಸ್ ರಿಯಲ್ ಸ್ಟೇಟ್ ಸೆಂಟರ್, ಇನ್ಫ್ರೊ ಟೆಕ್ನಿಕಲ್ ಕನ್ಸಲ್‌ಟೆನ್ಸಿ, ಪಾಲಿಕೆ ಕಚೇರಿ ಆವರಣದ ಜೆರಾಕ್ಸ್–ಡಿಟಿಪಿ ಸೆಂಟರ್ ಹಾಗೂ ಎಸ್.ಬಿ. ಬಿಲ್ಡರ್ಸ್ ಆ್ಯಂಡ್ ಪ್ಲ್ಯಾನರ್ಸ್ ಕಚೇರಿಗಳ ಮೇಲೆ ಸೋಮವಾರ ದಾಳಿ ನಡೆದಿದೆ.
ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆ ತನಕವೂ ಶೋಧ ಕಾರ್ಯ ಮುಂದುವರಿದಿತ್ತು. ದಾಳಿ ನಡೆಸಿದ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳ ಪ್ರತಿ ತಂಡದಲ್ಲಿ 5–6 ಮಂದಿ ಅಧಿಕಾರಿಗಳು–ಸಿಬ್ಬಂದಿ ಇದ್ದಾರೆ.
‘ನಿಯಮದಂತೆ 7 ದಿನಗಳಲ್ಲಿ ಇ–ಖಾತಾ ವಿತರಿಸದೇ ವಲಯ ಕಚೇರಿಗಳಲ್ಲಿ ತಮ್ಮದೇ ಏಜೆಂಟರ ಮೂಲಕ ಅರ್ಜಿದಾರರಿಂದ ದುಡ್ಡು ಪಡೆದು, ಇ–ಖಾತಾ ವಿತರಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ದುಡ್ಡು ಕೊಡದವರಿಗೆ ಖಾತಾ ವಿತರಣೆಯಲ್ಲಿ ವಿಳಂಬ ಮಾಡಲಾಗುತ್ತಿತ್ತು. ಈ ಕುರಿತು ಉಪಲೋಕಾಯುಕ್ತರು ಸರ್ಚ್ ವಾರಂಟ್ ಜಾರಿಗೊಳಿಸಿದ್ದರು.
ರಾತ್ರಿಯವರೆಗೆ ಶೋಧ ನಡೆಯಿತು. ಇ–ಖಾತಾ ಸಂಬಂಧಿತ ಕಡತಗಳು ಖಾಸಗಿ ಕಚೇರಿಗಳಲ್ಲಿ ಸಿಕ್ಕಿವೆ. ಒಂದೆಡೆ ನಗದು, ಮತ್ತೊಂದೆಡೆ ಡಿಜಿಟಲ್ ವಹಿವಾಟು ವಿವರ ಲಭ್ಯವಾಗಿದೆ’ ಎಂದು ಕಲಬುರಗಿ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.