ಕಲಬುರಗಿಯ ಮಹಾನಗರ ಪಾಲಿಕೆ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು
ಕಲಬುರಗಿ: ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆ ಕಚೇರಿ, ಜಿಲ್ಲಾ ಪಂಚಾಯಿತಿ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ನಗರದ ವಿವಿಧ ಇಲಾಖೆಗಳ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ 15ಕ್ಕೂ ಅಧಿಕ ತಂಡಗಳು ದಿಢೀರ್ ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇಲ್ಲಿನ ಕಲಬುರಗಿ ಮಹಾನಗರದ ಪಾಲಿಕೆ ಕಚೇರಿಯಲ್ಲಿ ಬೆಂಗಳೂರು ಲೋಕಾಯುಕ್ತ ನ್ಯಾಯಾಧೀಶ ವಿಜಯಾನಂದ ನೇತೃತ್ವದಲ್ಲಿ ಹಲವು ಅಧಿಕಾರಿಗಳು ಪಾಲಿಕೆಯ ಇ-ಆಸ್ತಿ ವಿಭಾಗ ಹಾಗೂ ಚುನಾವಣಾ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು.
ಇ-ಆಸ್ತಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು. ಅದರಲ್ಲಿ 2012ರಲ್ಲಿ ಒಂದು ಕಡತಕ್ಕೆ ಗುತ್ತಿಗೆ ದಾಖಲೆ ಪತ್ರಕ್ಕೆ ಈತನಕ ಪಾಲಿಕೆ ಆಯುಕ್ತರ ಸಹಿ ಮಾಡಿಸಿಲ್ಲ ಎಂದು ಪ್ರಶ್ನಿಸಿದರು.
'ಡಿ'ಗ್ರೂಪ್ ಸಿಬ್ಬಂದಿಯ ಯಾಕೆ ಸಮವಸ್ತ್ರ ಧರಿಸಿಲ್ಲ ಎಂದು ಪ್ರಶ್ನಿಸಿದರು. ಸೆಕ್ಷನ್ ಅಧಿಕಾರಿ ಯಾರು? ಯಾಕೆ ನೀವು ಕೇಳಲ್ಲ. ಅಧಿಕಾರಿಗಳು ಕೇಳದಿದ್ದರೆ ಅವರು ಸಮವಸ್ತ್ರ ಹಾಕಿ ಬರುತ್ತಾರಲ್ಲವೇ ಎಂದೂ ಪಾಲಿಕೆಯ ಕಂದಾಯ ಉಪ ಆಯುಕ್ತ ರಾಜೇಂದ್ರ ಭಾಲ್ಕಿ ಅವರನ್ನು ಪ್ರಶ್ನಿಸಿದರು.
ಬಳಿಕ ಟೆಂಡರ್ ಶಾಖೆಗೆ ತೆರಳಿ ಅಲ್ಲಿದ್ದ ಮಹಿಳೆಯನ್ನು ಯಾರಮ್ಮ ನೀವು ಎಂದು ಪ್ರಶ್ನಿಸಿದರು. ಅದಕ್ಕೆ ತಾನೊಬ್ಬ 'ಡಿ' ಗ್ರೂಪ್ ಸಿಬ್ಬಂದಿ ಎಂದು ವಿವರಿಸಿದರು. ಯಾಕೆ ಸಮವಸ್ತ್ರ ಯಾಕೆ ಹಾಕಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಶ್ನಿಸಿದರು.
ಅದಕ್ಕೆ ಸಮವಸ್ತ್ರ ಕೊಟ್ಟಿಲ್ಲ ಎಂದರು. ಅದರ ಬಗೆಗೆ ಟಿಪ್ಪಣಿ ಮಾಡಿಕೊಳ್ಳುವಂತೆ ಅಧೀನ ಸಿಬ್ಬಂದಿಗೆ ಹೇಳಿದರು.
ಬಳಿಕ ಅಮೃತ ಯೋಜನೆಯಡಿ ಉದ್ಯಾನಗಳ ಅಭಿವೃದ್ಧಿ ಕಡತಗಳನ್ನು ಪರಿಶೀಲಿಸಿದರು.ನಂತರ ಎಷ್ಟು ಅನುದಾನ ಮಂಜೂರಾಗಿದೆ, ಎಷ್ಟು ಕಾಮಗಾರಿಗೆ ಕಾರ್ಯಾದೇಶ ಕೊಡಲಾಗಿದೆ? ಎಂಬುದರ ಕುರಿತು ಕೂಲಂಕಷ ಮಾಹಿತಿ ಪಡೆದರು.
ಇದಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಲು ಕೊಟ್ಟ ಫಾರಂ ಅನ್ನು ಎರಡು ವರ್ಷಗಳಿಂದ ಇಟ್ಟಿಕೊಂಡಿದ್ದಿರಿ ಯಾಕೆ? ಎಂದು ಕೇಳಿದರು.