ವಾಡಿ: ಇಲ್ಲಿನ ಎಸಿಸಿ ಸಿಮೆಂಟ್ ಕಾರ್ಖಾನೆಯು ಸ್ಥಳೀಯ ಲಾರಿ ಮಾಲೀಕರಿಗೆ ಸರಕು ಸಾಗಾಣಿಕೆಗೆ ಅವಕಾಶ ನೀಡದೇ ಅನ್ಯಾಯ ಮಾಡುತ್ತಿದೆ ಎಂದು ಲಾರಿ ಮಾಲೀಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಇಲ್ಲಿನ ಲಾರಿಮಾಲಿಕರ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಶಂಕರ ಸಿಂಗ್ ರಾಠೋಡ ಮಾತನಾಡಿ, ‘ಕಾರ್ಖಾನೆಯ ನೀತಿಯಿಂದ ನೂರಾರು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಸರಕು ಸಾಗಾಣಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು’ ಎಂದು ಅಗ್ರಹಿಸಿದರು.
‘ಕಾರ್ಖಾನೆ ನಂಬಿಕೊಂಡು ಸಾವಿರಾರು ಲಾರಿ ಮಾಲಿಕರು, ಚಾಲಕರು ಹಾಗೂ ಟ್ರಾನ್ಸ್‌ಪೋರ್ಟ್ ಮಾಲಿಕರು ಬದುಕು ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಲಾರಿ ಮಾಲಿಕರಿಗೆ ಅಗತ್ಯ ಸರಕು ಸಾಗಾಣಿಕೆ ಕೆಲಸ ನೀಡದೆ, ಕುಟುಂಬಗಳ ತಿನ್ನುವ ಅನ್ನವನ್ನು ಕಸಿಯುತ್ತಿದೆ. ಅದಾನಿ ಒಡೆತನ ಬಂದಾಗಿನಿಂದ ಸಮಸ್ಯೆ ಗಂಭೀರವಾಗುತ್ತಿದೆ. ಸಿಮೆಂಟ್ ಉತ್ಪಾದನೆಗೆ ಬೇಕಾಗುವ ಕಚ್ಚಾಪದಾರ್ಥಗಳ ರವಾನೆಗೆ ಲಾರಿಗಳ ಬದಲು ರೈಲ್ವೆಯನ್ನು ಆಯ್ದುಕೊಳ್ಳಲಾಗಿದೆ. ಇದು ನಮ್ಮನ್ನು ನಷ್ಟಕ್ಕೆ ದೂಡಿದೆ. ದಂಡದ ರೂಪದಲ್ಲಿ ಸಹ ನಮ್ಮನ್ನು ಶೋಷಣೆ ಮಾಡಲಾಗುತ್ತಿದೆ. ಲಾರಿಗಳು ಕೆಲಸವಿಲ್ಲದೆ ತಿಂಗಳುಗಟ್ಟಲೇ ನಿಲ್ಲುತ್ತಿದ್ದು, ಕಂತು ಕಟ್ಟಲು ಸಾಧ್ಯವಾಗದೆ, ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಹಲವು ಕುಟುಂಬಗಳು ಉಪವಾಸದಿಂದ ನರಳುತ್ತಿವೆ’ ಎಂದು ಅಳಲು ತೋಡಿಕೊಂಡರು.
ಕಚ್ಚಾ ಪದಾರ್ಥ ಸಾಗಾಣಿಕೆಗೆ ನಿರಂತರ ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಗುವುದು. ಒಂದು ವೇಳೆ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಎಸಿಸಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲಾರಿ ಮಾಲಿಕರ ಸಂಘದ ಕಾರ್ಯದರ್ಶಿ ರಾಜು ಕೋಳಿ, ಉಪಾಧ್ಯಕ್ಷ ಮಹ್ಮದ ಗೌಸ್ ಸದಸ್ಯರಾದ ರಿಚರ್ಡ್ ಮಾರೆಡ್ಡಿ, ರಮೇಶ ಜಾಧವ, ಸುನಿಲ ರಾಠೋಡ, ಮಹ್ಮದ್ ಸೋಹಿಲ್, ಮಹದೇವ ಸಜ್ಜನ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.