ADVERTISEMENT

ಕಲಬುರಗಿ: ‘ಆಮೆಗತಿ’ಯಲ್ಲಿ ತಲಾ ಆದಾಯ ವೃದ್ಧಿ

ಮಲ್ಲಿಕಾರ್ಜುನ ನಾಲವಾರ
Published 15 ಸೆಪ್ಟೆಂಬರ್ 2022, 4:57 IST
Last Updated 15 ಸೆಪ್ಟೆಂಬರ್ 2022, 4:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಜನರ ಜೀವನ ಮಟ್ಟ ಮತ್ತು ಆರ್ಥಿಕ ಸಮೃದ್ಧ ಸ್ಥಿತಿ ಬಿಂಬಿಸುವ ತಲಾ ಆದಾಯದ (ಪಿಸಿಐ) ಪ್ರಗತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಕಳೆದ ನಾಲ್ಕು ದಶಕಗಳಲ್ಲಿ ಆಮೆಗತಿಯ ಬೆಳವಣಿಗೆ ಕಂಡಿವೆ.

1980–81ರಲ್ಲಿ ಕಲಬುರಗಿ (₹1,386) ಜಿಲ್ಲೆಗಿಂತ ಕೆಳಮಟ್ಟದಲ್ಲಿ ಇದ್ದ, ಕೋಲಾರ (₹ 861), ವಿಜಯಪುರ(₹976), ತುಮ ಕೂರು(₹1,178), ಹಾಸನ (₹1,385) ಹಾಗೂ ಧಾರವಾಡ(₹1,289) ಅತ್ಯಂತ ವೇಗದ ಬೆಳವಣಿಗೆ ದಾಖಲಿಸಿವೆ.

ಕಲಬುರಗಿ ಜಿಲ್ಲೆಗಿಂತ ಸ್ವಲ್ಪ ಮೇಲ್ಮಟ್ಟದಲ್ಲಿ ಇದ್ದ ಮೈಸೂರು (₹1,465), ಬೆಳಗಾವಿ(₹1,407), ಮಂಡ್ಯ(₹1,599) ಜಿಲ್ಲೆಗಳು ಈಗ ಅತ್ಯುತ್ತಮ ಸ್ಥಾನದಲ್ಲಿವೆ. ಈ ಭಾಗದ ಜಿಲ್ಲೆಗಳು ಮಾತ್ರ ಕೆಳಹಂತದಿಂದ ಮೇಲೆ ಬಂದಿಲ್ಲ. ರಾಜ್ಯದ ತಲಾ ಆದಾಯದ ಅರ್ಧದಷ್ಟು ಇವೆ.

ADVERTISEMENT

2021–22ರ ಆರ್ಥಿಕ ಸಮೀಕ್ಷೆ ಯಲ್ಲಿ ತುಮಕೂರು ₹2.08 ಲಕ್ಷ, ಧಾರವಾಡ ₹1.97 ಲಕ್ಷ, ಹಾಸನ ₹1.92 ಲಕ್ಷ, ಕೋಲಾರ ₹1.63 ಲಕ್ಷ ಪಿಸಿಐ ಮೂಲಕ ಮಧ್ಯಮ ಬೆಳವಣಿಗೆ ಜಿಲ್ಲೆಗಳಲ್ಲಿ ಸ್ಥಾನ ಪಡೆದಿವೆ. ₹1.16 ಲಕ್ಷದಿಂದ ಕಲಬುರಗಿ ಕೊನೆಯ ಸ್ಥಾನ ಪಡೆದಿದೆ.

1980ರಲ್ಲಿ ಬೆಂಗಳೂರಿನ ಪಿಸಿಐ ಕಲಬುರಗಿಗಿಂತ ₹725(ಶೇ 52ರಷ್ಟು) ಅಧಿಕ ಪ್ರಗತಿ ಇತ್ತು. 2021–22ರ ವೇಳೆಗೆ ಅದು ಐದು ಪಟ್ಟು ಹೆಚ್ಚಾಗಿ ₹5.41 ಲಕ್ಷಕ್ಕೆ ತಲುಪಿದ್ದು, ₹1 ಲಕ್ಷದಿಂದ ಕಲಬುರಗಿ ಕೊನೆಯ ಸ್ಥಾನದಲ್ಲಿದೆ. ತಲಾ ಆದಾಯದ ಅಂತರ ಜಿಲ್ಲಾ ಅಸಮಾನತೆ ಮಾತ್ರವಲ್ಲದೆ, ದುಡಿಯುವ ಕೈಗಳು ಇದ್ದರೂ ಕೆಲಸ ಇಲ್ಲ ಎಂಬುದಕ್ಕೆ ಈ ಅಂಕಿ ಅಂಶ ನಿದರ್ಶನವಾಗಿದೆ. ಪ್ರಾದೇಶಿಕ ಅಸಮತೋಲನವು ಶೇ 55ಕ್ಕೂ ಅಧಿಕ ಅಂತರದಲ್ಲಿದೆ.

1980-81ರಲ್ಲಿ ₹9,940 ಕೋಟಿಯಷ್ಟಿದ್ದ ತಲಾ ನಿವ್ವಳ ರಾಜ್ಯ ದೇಶೀಯ ಉತ್ಪನ್ನ (ಎನ್‌ಎಸ್‌ಡಿಪಿ) 2021ರ ವೇಳೆಗೆ ₹17.31 ಲಕ್ಷ ಕೋಟಿಗೆ ತಲುಪಿದೆ. ದೇಶದ ರಾಜ್ಯಗಳ ಪೈಕಿ 10ನೇ ಶ್ರೇಯಾಂಕದಿಂದ 5ನೇ ಸ್ಥಾನ ಗಳಿಸಿದೆ. ಡಾ.ನಂಜುಂಡಪ್ಪ ಸಮಿತಿ ಸೇರಿ ಹಲವು ವರದಿಗಳ ಶಿಫಾಸಿನಂತೆ ವಿಶೇಷ ಅಭಿವೃದ್ಧಿ ಅನುದಾನ, ಕೆಕೆಆರ್‌ಡಿಬಿ ಸೇರಿದಂತೆ ಇತರ ಮೂಲಕ ಆರ್ಥಿಕ ನೆರವು ನೀಡಿದ್ದರೂ ತಲಾ ಆದಾಯದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಹಿಂದುಳಿದಿವೆ.

‘ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಇದು ಹೆಮ್ಮಯ ಸಂಗತಿಯಲ್ಲ. ನಮ್ಮ ಸರಿಸಮನಾಗಿದ್ದ ಜಿಲ್ಲೆಗಳು ವೇಗದ ಪ್ರಗತಿ ಸಾಧಿಸಿರುವಾಗ ನಮ್ಮಿಂದ ಏಕೆ ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ಅವಲೋಕನ ಮಾಡುವ ಗಳಿಗೆ ಇದು. ಜಿಲ್ಲೆಗಳ ನಡುವಿನ ಆರ್ಥಿಕ ಅಸಮಾನತೆ ಹೆಚ್ಚಾದಷ್ಟು ವಿತ್ತೀಯ ನೀತಿ ಜಾರಿಗೆ ತೊಡಕಾಗುತ್ತದೆ ಎಂಬುದು’ ತಜ್ಞರ ವಾದ.

‘ಪ್ರತಿಭಾ ಪಲಾಯನ; ಪ್ರಗತಿ ಮಂದಗತಿ’

‘ಸೇವಾ ಕ್ಷೇತ್ರದ ನಿರ್ಲಕ್ಷ್ಯ, ಬೃಹತ್ ಕೈಗಾರಿಕೆಗಳ ಸ್ಥಾಪನೆ ಕೊರತೆ, ಮಾನವ ಸಂಪನ್ಮೂಲ ಮತ್ತು ಪ್ರತಿಭಾನ್ವಿತರ ಪಲಾಯನದಿಂದ ಜಿಲ್ಲೆಯ ತಲಾ ಆದಾಯದಲ್ಲಿ ಪ್ರಗತಿ ನಿಧಾನವಾಗಿದೆ’ ಎಂದು ಅರ್ಥಶಾಸ್ತ್ರದ ನಿವೃತ್ತ ಉಪನ್ಯಾಸಕಿ ಸಂಗೀತಾ ಕಟ್ಟಿಮನಿ ವಿಶ್ಲೇಷಿಸಿದರು.

‘ಭಾರತದಲ್ಲಿ ವಲಸೆ ವರದಿ ಪ್ರಕಾರ, ಶೇ 50ರಷ್ಟು ವಲಸೆ ಇರುವ ಅತ್ಯಧಿಕ 56 ಜಿಲ್ಲೆಗಳಲ್ಲಿ ಕಲಬುರಗಿಯೂ ಸೇರಿದೆ. ಶೈಕ್ಷಣಿಕ ಹಬ್, ಮಾನವ ಸಂಪನ್ಮೂಲ ಇದ್ದರೂ ಉದ್ಯೋಗ ಅವಕಾಶಗಳಿಲ್ಲ. ಜಾಗತಿಕ ಹಾಟ್ ಸಿಟಿಗಳಲ್ಲಿ ಜಿಲ್ಲಿಯೂ ಸ್ಥಾನ ಪಡೆದಿದೆ. ವರ್ಷದ 3 ತಿಂಗಳ ವಿಪರೀತ ಬಿಸಿಲು ಇರುವುದರಿಂದ ಕಾರ್ಮಿಕರ ಲಕ್ಷಾಂತರ ಗಂಟೆಗಳ ದುಡಿಮೆಗೆ ಅಡ್ಡಿಯಾಗುತ್ತಿದೆ. ಇದರಿಂದ ಜಿಲ್ಲೆಯ ಆದಾಯ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ವಿವರಿಸಿದರು.


‘ಪೂರೈಕೆ–ಬೇಡಿಕೆ ಮಧ್ಯೆ ಅಂತರ’

‘ಆದಾಯ ಎಂಬುದು ಉತ್ಪನ್ನ ಆಧಾರಿಸಿರುತ್ತದೆ. ಕಲಬುರಗಿಯ ಭೌಗೋಳಿಕ ಪರಿಸರಕ್ಕೆ ತಕ್ಕಂತಹ ಕೃಷಿ ಅವಲಂಭಿತ ಕೈಗಾರಿಕೆಗಳನ್ನು ನಿರ್ಮಾಣ ಮಾಡಿ, ಮೌಲ್ಯ ವರ್ಧಿತ ಬೇಸಾಯ ಕೈಗೊಂಡಾಗ ಸ್ಥಳೀಯವಾಗಿ ಉದ್ಯೋಗಗಳು ಸಿಗುತ್ತವೆ. ಸ್ವಯಂಚಾಲಿತವಾಗಿ ಆದಾಯ ಹೆಚ್ಚಾಗುತ್ತದೆ’ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಸವರಾಜ ಎಂ ಸೋಮನಮರಡಿ ತಿಳಿಸಿದರು.

‘ಸ್ಥಳೀಯ ತಜ್ಞರ ನೇತೃತ್ವದಲ್ಲಿ ದೂರದೃಷ್ಟಿ ಇರಿಸಿಕೊಂಡು ಯೋಜನೆಗಳನ್ನು ರೂಪಿಸಬೇಕು. ಕೈಗಾರಿಕೆಗಳಲ್ಲಿನ ಬಹುತೇಕ ಕಾರ್ಮಿಕರು ಹೊರಗಿನವರೇ ಇದ್ದಾರೆ. ಇದರಿಂದ ಕಾರ್ಮಿಕರ ಪೂರೈಕೆ ಮತ್ತು ಬೇಡಿಕೆ ನಡುವೆ ಸಾಕಷ್ಟು ಅಂತರ ಇದೆ. ಕಾರ್ಮಿಕರ ಪಾಲ್ಗೊಳ್ಳುವಿಕೆ ಬಗ್ಗೆ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ, ಹೊರಗಡೆ ಹೋಗಿ ದುಡಿಯುವ ಮನೋವೃತ್ತಿ ಬದಲಾಯಿಸಬೇಕು’ ಎಂದು ನುಡಿದರು.

ಕಲಬುರಗಿಗಿಂತ ವೇಗದ ತಲಾ ಆದಾಯ ಏರಿಕೆ ಕಂಡ ಜಿಲ್ಲೆಗಳ ದಶಕಗಳ ಅಂಕಿಅಂಶ(₹ಗಳಲ್ಲಿ)

(ವರ್ಷ;1980–81; 1990–91; 2000–01; 2010–11*; 2021–22
ಜಿಲ್ಲೆಗಳು)
ಕಲಬುರಗಿ; 1,386; 4,222;14,235; 37,394; 1.16 ಲಕ್ಷ
ಕೋಲಾರ; 861; 3,276; 14,687; 44,686; 1.63 ಲಕ್ಷ
ತುಮಕೂರು; 1,178; 3,647; 16,148; 42,216; 2.08 ಲಕ್ಷ
ಹಾಸನ; 1,386; 3,841; 15,720; 46,064; 1.92 ಲಕ್ಷ
ಧಾರವಾಡ; 1,289; 4,222; 20,672; 70,202; 1.97 ಲಕ್ಷ
ಮೈಸೂರು; 1,465; 4,240; 22,404; 58,171; 1.74 ಲಕ್ಷ
ಬೆಳಗಾವಿ; 1,407; 4,617; 19,692; 42,125; 1.33 ಲಕ್ಷ
ಮಂಡ್ಯ; 1,599; 3,864; 15,339; 34,216; 2.03 ಲಕ್ಷ
ಬೆಂಗಳೂರು; 2,114; 6,831; 33,146; 1.52 ಲಕ್ಷ; 5.72 ಲಕ್ಷ
ರಾಜ್ಯದ ತಲಾ ಆದಾಯ; 1,328; 4,630; 19,981; 61,073; 2.44 ಲಕ್ಷ

ಆಧಾರ: ಕರ್ನಾಟಕ ಆರ್ಥಿಕ ಸಮೀಕ್ಷೆ

*ನಿವ್ವಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.