ಕಲಬುರಗಿ: ಜಿಲ್ಲೆಯ ಆಳಂದ, ಅಫಜಲಪುರ ಮತ್ತು ಕಲಬುರಗಿ ತಾಲ್ಲೂಕುಗಳ ಜಾನುವಾರುಗಳಲ್ಲಿ ಚರ್ಮಗಂಟು ರೋಗದ ಲಕ್ಷಣ ಕಾಣಿಸಿಕೊಂಡಿದ್ದರಿಂದ ರೈತರು ಆತಂಕಕ್ಕೆ ಒಳಗಾಗದೆ ದನಕರುಗಳನ್ನು ಪಶು ಕೇಂದ್ರಕ್ಕೆ ಕರೆದುಕೊಂಡು ಹೋಗಿ ಲಸಿಕೆ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ರೈತರಿಗೆ ಸೂಚನೆ ನೀಡಿದ್ದಾರೆ.
‘1 ರಿಂದ 6 ತಿಂಗಳ ಅವಧಿಯ ದನಕರುಗಳಲ್ಲಿ ಚರ್ಮಗಂಟು ರೋಗವು ವಿಶೇಷವಾಗಿ ಕಂಡುಬರುತ್ತದೆ. ಚರ್ಮಗಂಟು ರೋಗ ಒಂದು ವೈರಾಣು ರೋಗವಾಗಿದ್ದು, ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ವೇಗವಾಗಿ ಹರಡುತ್ತದೆ. ಹೀಗಾಗಿ ರೋಗಪೀಡಿತ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟಬೇಕು ಮತ್ತು ತಕ್ಷಣವೇ ಪಶುವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿ ಚಿಕಿತ್ಸೆ ಕೊಡಿಸಬೇಕು’ ಎಂದಿದ್ದಾರೆ.
ಜಿಲ್ಲೆಯಲ್ಲಿ ಒಂದು ಲಕ್ಷ ಲಸಿಕೆ ಸಂಗ್ರಹವಿದ್ದು, ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಹಂತ ಹಂತವಾಗಿ ಅದ್ಯತೆ ಮೇರೆಗೆ ಪಶು ವೈದ್ಯಕೀಯ ತಂಡದೊಂದಿಗೆ ಲಸಿಕೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ರೈತರು 1 ತಿಂಗಳ ಮೇಲ್ಪಟ್ಟ ಎಲ್ಲ ದನಕರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ವೈದ್ಯಕೀಯ ಸಂಸ್ಥೆ ಮತ್ತು ತುರ್ತು ಸಂದರ್ಭದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಜಾನುವಾರುಗಳ ಸಂಚಾರಿ ಚಿಕಿತ್ಸಾ ಘಟಕದ ಉಚಿತ ಸಹಾಯವಾಣಿ ಸಂಖ್ಯೆ 1962 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.