ADVERTISEMENT

ಕಲಬುರಗಿ: ಅಡಿಕೆಯಿಂದ ಅಲಂಕರಿಸಿದ ಶಿವಲಿಂಗ

ಮಾರ್ಚ್‌ 1ರಂದು ಈಶ್ವರೀಯ ವಿಶ್ವವಿದ್ಯಾಲಯ ಆವರಣದಲ್ಲಿ ಶಿವರಾತ್ರಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 4:45 IST
Last Updated 28 ಫೆಬ್ರುವರಿ 2022, 4:45 IST
ಕಲಬುರಗಿಯ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಅಡಿಕೆಯಿಂದ ಅಲಂಕರಿಸಿದ ಬೃಹತ್‌ ಶಿವಲಿಂಗ
ಕಲಬುರಗಿಯ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಅಡಿಕೆಯಿಂದ ಅಲಂಕರಿಸಿದ ಬೃಹತ್‌ ಶಿವಲಿಂಗ   

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಅಮೃತ ಸರೋವರದ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಾರ್ಚ್‌ 1ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ಅಡಿಕೆಯಿಂದ ಅಲಂಕರಿಸಿದ ಬೃಹತ್‌ ಶಿವಲಿಂಗದ ದರ್ಶನ ಏರ್ಪಡಿಸಲಾಗಿದ್ದು, ಗಮನ ಸೆ
ಳೆಯುತ್ತಿದೆ.

ಅಲ್ಲದೇ,ವಿಶೇಷ ಅಲಂಕೃತಗೊಂಡ ದ್ವಾದಶ ಜ್ಯೋತಿರ್ಲಿಂಗ ದರ್ಶನ,ಜಾನಕಿ ಜಲಧಾರೆ, ಅಧ್ಯಾತ್ಮ ಕುರಿತಾದ ಚಿತ್ರಗಳ ಪ್ರದರ್ಶನ ಕೂಡ ಆಯೋಜಿಸಲಾಗಿದೆ. ಭಕ್ತರ ಆಕರ್ಷಣೆಗಾಗಿ ಅಂದು ಸಂಜೆ ‘ಲೈಟ್‌ ಅಂಡ್‌ ಸೌಂಡ್‌’ ಎಂಬ ಸಂಗೀತ ಕಾರಂಜಿಯ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ.ಸಂಜೆ ನಡೆಯುವ ಧಾರ್ಮಿಕ ಸಮಾರಂಭದಲ್ಲಿಸಮಾಜ ಸೇವೆಯಲ್ಲಿ ತೊಡಗಿದ ವಿವಿಧ ವರ್ಗಗಳ ಗಣ್ಯರನ್ನು ಸನ್ಮಾನಿಸಲಾಗುವುದು. ರಾತ್ರಿ ಪ್ರವಚನ ನಡೆಯಲಿದೆ.

ವಿದ್ಯಾರ್ಥಿಗಳಿಗೆ ಸ್ಪರ್ಧೆ: ಮಹಾಶಿವರಾತ್ರಿಯ ಪ್ರಯುಕ್ತ ಅಮೃತ ಸರೋವರದಲ್ಲಿ ಮಾರ್ಚ್‌ 1ರಂದು ಸಂಜೆ 5ರಿಂದ 6ರವರೆಗೆ ವಿದ್ಯಾರ್ಥಿಗಳಿಗಾಗಿ ಗೀತ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. 10ರಿಂದ 18 ವರ್ಷದೊಳಗಿನ ಮಕ್ಕಳು ಇದರಲ್ಲಿ ಪಾಲ್ಗೊಳ್ಳಬಹುದು. ಶಿವನ ಕುರಿತಾದ ಅಥವಾ ದೇಶಭಕ್ತಿ ಗೀತೆಗಳನ್ನು ಮಾತ್ರ ಹಾಡಬೇಕು. ಪ್ರತಿಯೊಬ್ಬರಿಗೂ ಮೂರು ನಿಮಿಷ ಮಾತ್ರ ಅವಕಾಶವಿರುತ್ತದೆ.ಆಸಕ್ತರು ಹೆಸರು ನೋಂದಾಯಿಸಲು 9448380045 ಈ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸ‌ಬೇಕು.

ADVERTISEMENT

ಜಿಲ್ಲೆಯ ಜನರು ಮಹಾಶಿವರಾತ್ರಿ ಸಮಾರಂಭಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕು ಎಂದುಗುಲಬರ್ಗಾ ರಾಜಯೋಗ ಕೇಂದ್ರಗಳ ವಿಭಾಗೀಯ ಮುಖ್ಯಸ್ಥರಾದ ಬಿ.ಕೆ. ವಿಜಯಾ ದೀದಿ ಕೋರಿದ್ದಾರೆ.

ದೀಪೋತ್ಸವ: ನಗರದ ಬಸವೇಶ್ವರ ಆಸ್ಪತ್ರೆ ಎದುರಿಗಿರುವ ವಿದ್ಯಾನಗರ ಕಾಲೊನಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿಮಹಾಶಿವರಾತ್ರಿ ಅಂಗವಾಗಿ ಮಾರ್ಚ್ 1ರಂದು ಸಂಜೆ 6.30ಕ್ಕೆ ವಿದ್ಯಾನಗರ ವೆಲ್ಫೇರ್‌ ಸೊಸೈಟಿ ವತಿಯಿಂದ ದೀಪೋತ್ಸವ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಶಿವರಾಜ ಅಂಡಗಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ದೀಪೋತ್ಸವ ಉದ್ಘಾಟಿಸುವರು. ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ ಸಂಗೀತೋತ್ಸವಕ್ಕೆ ಚಾಲನೆ ನೀಡುವರು. ಎಂ.ಬಿ.ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಚಂದ್ರಶೇಖರ ತಿಗಡಿ, ಪಾಲಿಕೆ ಸದಸ್ಯೆ ಯಂಕಮ್ಮ ಜಿ. ಗುತ್ತೇದಾರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಸ್ಥೆ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ, ತರುಣ ಸಂಘದ ಕಾರ್ಯದರ್ಶಿ ಕರಣ ಆಂದೋಲಾ ಉಪಸ್ಥಿತರಿರುವರು.

ಸಂಜೆ 6.30ರಿಂದ 10.30ರವರೆಗೆ ಕಲಾವಿದರಾದ ಬಸವರಾಜ ಸಾಲಿ, ಪ್ರಕಾಶ ಪೂಜಾರಿ, ಸುಧೀಂದ್ರ ಕುಲಕರ್ಣಿ ಹಾಗೂ ರೇಣುಕಾ ಅವರಿಂದ ಸಂಗೀತ, ವಿದ್ಯಾನಗರ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್‌ನಿಂದ ಭಜನಾ ಕಾರ್ಯಕ್ರಮ ಜರುಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.