ADVERTISEMENT

ಕಲಬುರಗಿ | ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಎರಡು ರೈಲು ರದ್ದು, ಹಲವು ವಿಳಂಬ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 9:52 IST
Last Updated 24 ಸೆಪ್ಟೆಂಬರ್ 2025, 9:52 IST
<div class="paragraphs"><p>ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ರೈಲು ಸೇವೆಗಳ ಬಗೆಗೆ ವಿಚಾರಿಸುತ್ತಿರುವ ಪ್ರಯಾಣಿಕರು</p></div>

ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ರೈಲು ಸೇವೆಗಳ ಬಗೆಗೆ ವಿಚಾರಿಸುತ್ತಿರುವ ಪ್ರಯಾಣಿಕರು

   

ಕಲಬುರಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸೀನಾ ನದಿಯು ಮುಂಡೆವಾಡಿ– ಪಾಕಣಿ ನಡುವಣ ರೈಲ್ವೆ ಸೇತುವೆ ಬಳಿ ಅಪಾಯಕಾರಿ ಮಟ್ಟಮೀರಿ ಹರಿಯುತ್ತಿದ್ದು, ಕಲಬುರಗಿಯಿಂದ ಮುಂಬೈ, ದೆಹಲಿಯತ್ತ ತೆರಳಬೇಕಿದ್ದ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ರೈಲ್ವೆ ಪ್ರಯಾಣಿಕರು ಪರದಾಡಿದರು.

ಬೆಂಗಳೂರಿನಿಂದ ಮುಂಬೈನತ್ತ ಹೊರಟಿದ್ದ ಉದ್ಯಾನ್‌ ಎಕ್ಸ್‌ಪ್ರೆಸ್‌ ರೈಲು, ಚೆನ್ನೈ–ಮುಂಬೈ ಎಕ್ಸ್‌ಪ್ರೆಸ್‌ಗಳು ಕಳೆದ 8–10 ಗಂಟೆಗಳಿಂದ ಕಲಬುರಗಿ ನಿಲ್ದಾಣದಲ್ಲದೇ ತಂಗಿವೆ.

ADVERTISEMENT

ಬೆಂಗಳೂರಿನಿಂದ ದೆಹಲಿಗೆ ತೆರಬೇಕಿದ್ದ ಕಲ್ಯಾಣ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಕಲಬುರಗಿ ನಿಲ್ದಾಣಕ್ಕೆ ನಿಗದಿತ ಸಮಯಕ್ಕೆ ತಲುಪಿದರೂ, ಮುಂದಿನ ಮಾರ್ಗದ ಕ್ಲಿಯರೆನ್ಸ್ ಸಿಗದೇ ಅದು ಬೆಳಿಗ್ಗೆ 9 ಗಂಟೆ ತನಕ ಕಲಬುರಗಿಯಲ್ಲೇ ನಿಂತಿತ್ತು. ಬಳಿಕ ಅದು ಗಾಣಗಾಪುರ ನಿಲ್ದಾಣಕ್ಕೆ ತೆರಳಿ ನಿಂತಿದೆ.

ಮಾರ್ಗ ಬದಲು:

ಚೆನ್ನೈ–ಮುಂಬೈ ಎಕ್ಸ್‌ಪ್ರೆಸ್‌ ರೈಲನ್ನು ಬೀದರ್‌, ಲಾತೂರ್‌ ಮಾರ್ಗವಾಗಿ ಕುರ್ದುವಾಡಿ ಜಂಕ್ಷನ್‌ ತಲುಪಿ ಅಲ್ಲಿಂದ ಮುಂಬೈನತ್ತ ತೆರಳುವಂತೆ ಮಾರ್ಗ ಬದಲಾವಣೆ ಮಾಡಲಾಯಿತು. ಈ ರೈಲು 8 ತಾಸುಗಳ ವಿಳಂಬದ ಬಳಿಕ ಬೀದರ್‌ನತ್ತ ಹೊರಟಿತು.

ಉದ್ಯಾನ್‌ ಎಕ್ಸ್‌ಪ್ರೆಸ್‌ ಮಾರ್ಗವನ್ನು ಬದಲಿಸಿದ್ದರೂ, ಮಧ್ಯಾಹ್ನ 3 ಗಂಟೆ ತನಕ ಕಲಬುರಗಿಯಿಂದ ಹೊರಟಿಲ್ಲ.

ಎರಡು ರೈಲು ರದ್ದು:

ಕಲಬುರಗಿಯಿಂದ ಸೊಲ್ಲಾಪುರ ಮಾರ್ಗವಾಗಿ ಕೊಲ್ಹಾಪುರಕ್ಕೆ ಹೋಗಬೇಕಿದ್ದ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರಿಗೆ ಟಿಕೆಟ್‌ ಹಣವನ್ನೂ ಮರಳಿಸಲಾಗಿದೆ. ಅದೇ ಮಾರ್ಗವಾಗಿ ಕೊಲ್ಹಾಪುರದಿಂದ ಕಲಬುರಗಿಗೆ ಬರಬೇಕಿದ್ದ ರೈಲಿನ ಸೇವೆಯನ್ನೂ ರದ್ದುಪಡಿಸಲಾಗಿದೆ.

ಕಲಬುರಗಿ–ದೌಂಡ ನಡುವೆ ಸಂಚರಿಸಬೇಕಿದ್ದ ವಿಶೇಷ ರೈಲಿನ ಸೇವೆಯನ್ನು ಎರಡೂ ಬದಿಯಿಂದ ರದ್ದುಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.